ನಗರವೆಲ್ಲ ಗಣಪನೇ ಗಣಪ. ಬೀದಿಗಿಳಿದರೆ ಕಿವಿಗೆ ಬೀಳುವುದು ಡೊಳ್ಳು, ತಾಷಾ, ಗಣೇಶನ ಘೋಷಣೆ. ಮಾರುಕಟ್ಟೆಗೆ ಕಾಲಿಟ್ಟರೆ ಕಣ್ಣಿಗೆ ಬೀಳುವುದು ಬಣ್ಣಬಣ್ಣದ ಗಣೇಶ ಮೂರ್ತಿಗಳು. ಅಂಗಡಿಗಳ ಮುಂದೆ ಅಲಂಕಾರಿಕ ಸಾಮಗ್ರಿಗಳ ರಾಶಿ. ಕೈಚೀಲ ಹಿಡಿದು ಹಬ್ಬದ ಖರೀದಿಗೆ ಬಂದ ಮಹಿಳೆಯರು. ತಮಗಿಷ್ಟವಾದ ಗಣಪನನ್ನು ಮನೆಗೆ ಕೊಂಡೊಯ್ಯಬೇಕೆಂದು ಹಠ ಹಿಡಿದ ಮಕ್ಕಳು. ಮಂಟಪಗಳ ಮುಂದೆ ಬೃಹತ್ ಗಣೇಶ ಮೂರ್ತಿಗಳ ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿನಗರವೆಲ್ಲ ಗಣಪನೇ ಗಣಪ. ಬೀದಿಗಿಳಿದರೆ ಕಿವಿಗೆ ಬೀಳುವುದು ಡೊಳ್ಳು, ತಾಷಾ, ಗಣೇಶನ ಘೋಷಣೆ. ಮಾರುಕಟ್ಟೆಗೆ ಕಾಲಿಟ್ಟರೆ ಕಣ್ಣಿಗೆ ಬೀಳುವುದು ಬಣ್ಣಬಣ್ಣದ ಗಣೇಶ ಮೂರ್ತಿಗಳು. ಅಂಗಡಿಗಳ ಮುಂದೆ ಅಲಂಕಾರಿಕ ಸಾಮಗ್ರಿಗಳ ರಾಶಿ. ಕೈಚೀಲ ಹಿಡಿದು ಹಬ್ಬದ ಖರೀದಿಗೆ ಬಂದ ಮಹಿಳೆಯರು. ತಮಗಿಷ್ಟವಾದ ಗಣಪನನ್ನು ಮನೆಗೆ ಕೊಂಡೊಯ್ಯಬೇಕೆಂದು ಹಠ ಹಿಡಿದ ಮಕ್ಕಳು. ಮಂಟಪಗಳ ಮುಂದೆ ಬೃಹತ್ ಗಣೇಶ ಮೂರ್ತಿಗಳ ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು.
ಗಣೇಶ ಚತುರ್ಥಿಗೆ ಇನ್ನೂ ಮೂರು ದಿನ ಬಾಕಿ ಇರುವಂತೆಯೇ ಬೆಳಗಾವಿ ನಗರ ಸಂಪೂರ್ಣ ಹಬ್ಬದ ಗುಂಗಿನಲ್ಲಿ ಮುಳುಗಿದೆ. ವಿಘ್ನವಿನಾಶಕನನ್ನು ಮನೆಗೆ ಬರಮಾಡಿಕೊಳ್ಳಲು ಮನೆಮನೆಗಳಲ್ಲಿ ಸಿದ್ಧತೆ ಚುರುಕುಗೊಂಡಿದ್ದರೆ, ಸಾರ್ವಜನಿಕ ಗಣೇಶ ಮಂಡಳಿಗಳು ಈಗಾಗಲೇ ಬೃಹತ್ ಮೂರ್ತಿಗಳನ್ನು ಮಂಟಪಗಳಿಗೆ ತಂದು ಪ್ರತಿಷ್ಠಾಪನೆಯ ಸಿದ್ಧತೆಯಲ್ಲಿ ತೊಡಗಿವೆ. ಹೀಗಾಗಿ ಗಣೇಶ ಚತುರ್ಥಿ ಆರಂಭಕ್ಕೂ ಮುನ್ನವೇ ನಗರದಲ್ಲಿ ಹಬ್ಬದ ವಾತಾವರಣ ಗರಿಗೆದರಿದೆ.ಗಣಪನಿಗಾಗಿಯೇ ಮಾರುಕಟ್ಟೆ:ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಖಡೇಬಜಾರ್, ಶನಿವಾರಕೂಟ, ಕಾಕತಿವೇಸ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬಾಪಟ ಗಲ್ಲಿ, ಕೋನ್ವಾಳ ಗಲ್ಲಿ ಸೇರಿದಂತೆ ಮತ್ತಿತರ ಪ್ರದೇಶಗಳು ಇದೀಗ ಗಣೇಶೋತ್ಸವದ ಮಾರುಕಟ್ಟೆಗಳಾಗಿ ಮಾರ್ಪಟ್ಟಿವೆ. ವಿವಿಧ ಗಾತ್ರ, ಆಕಾರ ಮತ್ತು ವಿನ್ಯಾಸದ ಗಣೇಶ ಮೂರ್ತಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪುಟ್ಟ ಗಣಪನಿಂದ ಹಿಡಿದು ಬೃಹದಾಕಾರದ ಮೂರ್ತಿಗಳವರೆಗೆ ಸಾಲಾಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.ಮನೆಯ ಗಣಪನನ್ನು ಆಯ್ಕೆ ಮಾಡಿಕೊಳ್ಳಲು ಕುಟುಂಬಗಳು ಮೂರ್ತಿಗಳ ಮುಂದೆ ನಿಂತು ಚರ್ಚಿಸುತ್ತಿದ್ದರೆ, ಮಕ್ಕಳ ಕಣ್ಣು ಮಾತ್ರ ಬಣ್ಣಬಣ್ಣದ ಮೂರ್ತಿಗಳ ಮೇಲೆಯೇ. ಯಾವ ಗಣಪ ಸುಂದರ, ಯಾವ ಗಣಪ ಮನೆಗೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದ್ದರೆ, ವ್ಯಾಪಾರಿಗಳು ಗ್ರಾಹಕರ ಆಯ್ಕೆಗೆ ತಕ್ಕಂತೆ ಮೂರ್ತಿಗಳನ್ನು ತೋರಿಸುತ್ತಿದ್ದಾರೆ.ಗಣೇಶ ಮಂಟಪಗಳ ಅಲಂಕಾರಕ್ಕೆ ಬೇಕಾಗುವ ಹೂವಿನ ಮಾಲೆಗಳು, ಕೃತಕ ಹೂವುಗಳು, ತೋರಣಗಳು, ಬಣ್ಣಬಣ್ಣದ ಪರದೆಗಳು, ಅಲಂಕಾರಿಕ ವಸ್ತುಗಳು ಹಾಗೂ ವಿದ್ಯುತ್ ದೀಪಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಸರಣಿ ದೀಪ, ಎಲ್‌ಇಡಿ ದೀಪ ಸೇರಿದಂತೆ ಹೊಸ ವಿನ್ಯಾಸದ ಬೆಳಕಿನ ಅಲಂಕಾರಿಕ ಸಾಮಗ್ರಿಗಳ ಖರೀದಿ ಹೆಚ್ಚಾಗಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು, ಗಂಧ, ಕುಂಕುಮ, ಅರಿಶಿನ, ಅಗರಬತ್ತಿ, ಕರ್ಪೂರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯೂ ಚುರುಕಾಗಿದೆ. ಹಬ್ಬದ ದಿನಗಳು ಸಮೀಪಿಸುತ್ತಿದ್ದಂತೆ ಈ ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ.ಹಬ್ಬದ ಖರೀದಿಯ ಮತ್ತೊಂದು ಭಾಗ ಬಟ್ಟೆ ಅಂಗಡಿಗಳಲ್ಲಿದೆ. ಮಕ್ಕಳಿಗೆ ಹೊಸ ಉಡುಪು, ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್, ಪ್ಯಾಂಟ್, ಕುರ್ತಾಗಳ ಖರೀದಿ ನಡೆಯುತ್ತಿದೆ. ಮನೆಗಳಲ್ಲಿ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬೇಕಾದ ಪದಾರ್ಥಗಳು ಹಾಗೂ ಸಿಹಿ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.ಬೆಳಗಾವಿಯ ರಾಜಾನ ಅದ್ಧೂರಿ ಆಗಮನ:
ಗಣೇಶೋತ್ಸವದ ಸಂಭ್ರಮಕ್ಕೆ ಈಗಾಗಲೇ ಮುನ್ನುಡಿ ಬರೆದಿರುವ ಬೆಳಗಾವಿ, 10 ದಿನ ಮೊದಲೇ ಮತ್ತೊಂದು ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾಯಿತು. ಚವ್ಹಾಟ ಗಲ್ಲಿಯ ಬೆಳಗಾವಿಯ ರಾಜಾ ಎಂಬ ಖ್ಯಾತಿ ಹೊಂದಿದ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಹೀಗೆ ನಾನಾ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬೃಹತ್ ಗಾತ್ರದ ಗಣೇಶ ಮೂರ್ತಿಗಳನ್ನು ವಿರಾಜಮಾನಗೊಂಡಿವೆ. ಡೊಳ್ಳು, ಡೋಲ್-ತಾಷಾ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಮೇಳಗಳ ನಿನಾದದ ನಡುವೆ ಟ್ರಾಲಿಯಲ್ಲಿ ಆಗಮಿಸಿದ ಬೃಹದಾಕಾರದ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯಿತು. ಜೈ ಗಣೇಶ ಘೋಷಣೆಗಳು ಮುಗಿಲು ಮುಟ್ಟಿದವು. ಯುವಕರು ಕುಣಿದು ಕುಪ್ಪಳಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಯ ಸಂಭ್ರಮವನ್ನು ಹೆಚ್ಚಿಸಿದರು.ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆಗಮಿಸಿದ ಬೆಳಗಾವಿಯ ರಾಜಾನನ್ನು ಸ್ವಾಗತಿಸಲು ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.53 ವರ್ಷಗಳ ಪರಂಪರೆ:ಬೆಳಗಾವಿಯ ಗಣೇಶೋತ್ಸವ ಎಂದರೆ ಕೇವಲ ಹಬ್ಬವಲ್ಲ. ಅದು ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಪರಂಪರೆ. 53 ವರ್ಷಗಳ ಬಳಿಕ ಈ ಬಾರಿ 12 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿರುವುದು ವಿಶೇಷ.ನಗರದ ವಿವಿಧ ಭಾಗಗಳಲ್ಲಿ 400ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಲವು ಮಂಡಳಿಗಳು ಗಣೇಶ ಚತುರ್ಥಿಗೆ ಒಂದು ವಾರ ಮುಂಚೆಯೇ ಮೂರ್ತಿಗಳನ್ನು ಮಂಟಪಗಳಿಗೆ ತಂದು ಅಲಂಕಾರ ಕಾರ್ಯ ಆರಂಭಿಸಿವೆ. ಕೆಲ ಮಂಟಪಗಳಲ್ಲಿ ಧಾರ್ಮಿಕ ವಾತಾವರಣಕ್ಕೆ ಒತ್ತು ನೀಡಲಾಗಿದ್ದರೆ, ಇನ್ನು ಕೆಲವೆಡೆ ಕಲಾತ್ಮಕ ಅಲಂಕಾರ, ಸಾಮಾಜಿಕ ಸಂದೇಶ ಹಾಗೂ ವಿವಿಧ ವಿಷಯಾಧಾರಿತ ವಿನ್ಯಾಸಗಳಿಗೆ ಆದ್ಯತೆ ನೀಡಲಾಗುತ್ತಿದೆ.12 ದಿನಗಳ ಕಾಲ ಬೆಳಗಾವಿಯತ್ತ ಭಕ್ತರ ಹರಿವು ಹೆಚ್ಚಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಜನರು ಗಣೇಶ ಮೂರ್ತಿಗಳ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಿಸರ್ಜನಾ ಮೆರವಣಿಗೆ ವೇಳೆ ಲಕ್ಷಾಂತರ ಜನರು ಭಾಗವಹಿಸುವುದು ಬೆಳಗಾವಿಯ ಗಣೇಶೋತ್ಸವದ ವೈಭವಕ್ಕೆ ಸಾಕ್ಷಿಯಾಗಲಿದೆ.ಮುಂಬೈ, ಪುಣೆ ಹೊರತುಪಡಿಸಿದರೆ ದೇಶದಲ್ಲೇ ಅತ್ಯಂತ ಅದ್ಧೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ನಡೆಯುವ ನಗರಗಳಲ್ಲಿ ಬೆಳಗಾವಿಗೂ ಪ್ರಮುಖ ಸ್ಥಾನವಿದೆ. ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪರಂಪರೆಗೆ ಬೆಳಗಾವಿಯೇ ಮುನ್ನುಡಿ ಬರೆದಿದೆ ಎಂಬ ಹೆಗ್ಗಳಿಕೆಯೂ ನಗರದ ಗಣೇಶೋತ್ಸವಕ್ಕಿದೆ.ಮನೆಮನೆಗೂ ಗಣಪನ ಸ್ವಾಗತ:
ಸಾರ್ವಜನಿಕ ಮಂಟಪಗಳ ಸಿದ್ಧತೆ ಒಂದು ಕಡೆಯಾದರೆ, ಮನೆಮನೆಗಳಲ್ಲಿಯೂ ಗಣಪನ ಸ್ವಾಗತಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಮನೆ ಸ್ವಚ್ಛತೆ, ಮಂಟಪ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಕುಟುಂಬ ಸದಸ್ಯರು ತೊಡಗಿದ್ದಾರೆ.ಕೆಲವರು ಸರಳ ಮಂಟಪಕ್ಕೆ ಆದ್ಯತೆ ನೀಡಿದರೆ, ಮತ್ತೆ ಕೆಲವರು ಕಲಾತ್ಮಕ ವಿನ್ಯಾಸದ ಮಂಟಪ ನಿರ್ಮಿಸಿ ಗಣಪನಿಗೆ ವಿಶೇಷ ಅಲಂಕಾರ ಮಾಡಲು ಸಜ್ಜಾಗಿದ್ದಾರೆ. ಮನೆಯ ಹಿರಿಯರಿಂದ ಮಕ್ಕಳವರೆಗೆ ಎಲ್ಲರೂ ಸಿದ್ಧತೆಯಲ್ಲಿ ಭಾಗಿಯಾಗಿರುವುದು ಹಬ್ಬದ ಕೌಟುಂಬಿಕ ಸಂಭ್ರಮವನ್ನು ಹೆಚ್ಚಿಸಿದೆ.ಗಣೇಶೋತ್ಸವದ ಸಂಭ್ರಮಕ್ಕೆ ಪರಿಸರ ಕಾಳಜಿಯ ಸ್ಪರ್ಶವೂ ಅಗತ್ಯ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಆಗಿದೆ. ಭಕ್ತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ, ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶೋತ್ಸವ ಆಚರಿಸುವುದು ನಗರದ ಪರಂಪರೆಗೆ ಮತ್ತಷ್ಟು ಗೌರವ ತಂದುಕೊಡಲಿದೆ.