ಸೈಬರ್ ವಂಚಕರು ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಿ, ಡಿಜಿಟಲ್‌ ಅರೆಸ್ಟ್‌ ಗೆ ಒಳಗಾಗಿಸಿ, ವೃದ್ಧ ಉದ್ಯಮಿಯಿಂದ 15 ಕೋಟಿ ರು. ದೋಚಿದ ಆಘಾತಕಾರಿ ಘಟನೆ ಬೆಳಗಾವಿಯ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಳಗಾವಿ : ಸೈಬರ್ ವಂಚಕರು ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಿ, ಡಿಜಿಟಲ್‌ ಅರೆಸ್ಟ್‌ ಗೆ ಒಳಗಾಗಿಸಿ, ವೃದ್ಧ ಉದ್ಯಮಿಯಿಂದ 15 ಕೋಟಿ ರು. ದೋಚಿದ ಆಘಾತಕಾರಿ ಘಟನೆ ಬೆಳಗಾವಿಯ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ

ವಂಚಕರು ಈ ವೃದ್ಧ ಉದ್ಯಮಿಗೆ ಪೊಲೀಸರ ಸೋಗಿನಲ್ಲಿ ವಿಡಿಯೋ ಕರೆ ಮಾಡಿ, ‘ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ. ಇದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಬೆದರಿದ ಉದ್ಯಮಿ, ತಾವು ಪಾರಾಗಲು ಏನು ಮಾಡಬೇಕು ಎಂದು ಪ್ರಶ್ನಿಸಿದಾಗ, ಇದರಿಂದ ಪಾರಾಗಲು ಹಣ ನೀಡುವಂತೆ ತಿಳಿಸಿದ್ದಾರೆ. ಹಣವನ್ನು ಸುರಕ್ಷತೆಯ ಹೆಸರಿನಲ್ಲಿ ಬೇರೆ ಖಾತೆಗೆ ವರ್ಗಾಯಿಸಿ, ತನಿಖೆ ಬಳಿಕ, ಹಣ ಮರಳಿಸುತ್ತೇವೆ ಎಂದು ತಿಳಿಸಿ, ಅಕೌಂಟ್‌ ನಂಬರ್‌ ನೀಡಿದ್ದಾರೆ. ಹಂತ-ಹಂತವಾಗಿ ₹15 ಕೋಟಿ ವರ್ಗಾಯಿಸಿಕೊಂಡಿದ್ದಾರೆ.

ಬಳಿಕ, ವಂಚಕರು ತಮ್ಮ ಮೊಬೈಲ್‌ನ್ನು ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದಾರೆ. ಇದರಿಂದ ಅನುಮಾನಗೊಂಡ ವೃದ್ಧ ಉದ್ಯಮಿ, ಮಾರ್ಚ್ 18ರಂದು ಬೆಳಗಾವಿಯ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು, ವಂಚಕರ ಖಾತೆಗಳನ್ನು ತಡೆ ಹಿಡಿದು, ₹15 ಕೋಟಿಯಲ್ಲಿ ₹90 ಲಕ್ಷ ಇರುವ ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ವಂಚನೆ ಹೇಗೆ?

- ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಕೇಸಲ್ಲಿ ಸಿಲುಕಿದೆ ಎಂದು ಕರೆ

- ಇದರಿಂದ ಬೆದರಿದ ಉದ್ಯಮಿಗೆ ಪಾರಾಗುವ ವಿಧಾನ ತಿಳಿಸಿದ ವಂಚಕರು

- ಹಣವನ್ನು ಸುರಕ್ಷತೆ ದೃಷ್ಟಿಯಿಂದ ಬೇರೆ ಖಾತೆಗೆ ವರ್ಗಾಯಿಸಿ ಎಂದು ಸೂಚನೆ

- ಕೇಸಿನತನಿಖೆ ಮುಗಿದ ಬಳಿಕ, ಹಣ ಮರಳಿಸುತ್ತೇವೆ ಎಂದು ಪೊಳ್ಳು ಭರವಸೆ

- 15 ಕೋಟಿ ರು. ವರ್ಗಾಯಿಸಿಕೊಂಡು ಪಂಗನಾಮ. ಬಳಿಕ ಮೊಬೈಲ್‌ ಸ್ವಿಚಾಫ್‌