ಸಾರಾಂಶ
ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಕನ್ನಡಿಗ ನಿರ್ವಾಹಕ ಮಹದೇವಪ್ಪ ಹುಕ್ಕೇರಿ ಮೇಲೆ ಈಗ ಸುಳ್ಳು ಪೋಸ್ಕೋ ಕೇಸು ದಾಖಲಿಸಲಾಗಿದೆ.
ಬೆಂಗಳೂರು : ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಕನ್ನಡಿಗ ನಿರ್ವಾಹಕ ಮಹದೇವಪ್ಪ ಹುಕ್ಕೇರಿ ಮೇಲೆ ಈಗ ಸುಳ್ಳು ಪೋಸ್ಕೋ ಕೇಸು ದಾಖಲಿಸಲಾಗಿದೆ. ಈ ಸಂಬಂಧ ಫೆ.25 ರಂದು ಬೆಳಗಾವಿಗೆ ಬರುತ್ತಿದ್ದೇನೆ, ಬಂದು ಸುಮ್ಮನೆ ಹೋಗುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಗುಡುಗಿದ್ದಾರೆ. ಮಂಗಳವಾರ ಬೆಳಗಾವಿಯಲ್ಲಿ ಕರವೇ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಗೃಹ ಸಚಿವರು ಕೂಡಲೇ ಮಧ್ಯೆ ಪ್ರವೇಶಿಸಿ ಮಹದೇವಪ್ಪ ವಿರುದ್ಧದ ಪ್ರಕರಣ ಹಿಂಪಡೆಯಬೇಕು. ಈ ಸಂಘರ್ಷ ಹೀಗೇ ಮುಂದುವರೆಯಲಿ ಎಂಬುದು ಅವರ ಆಸೆಯಾದರೆ ನಾವೇನೂ ಮಾಡಲು ಸಾಧ್ಯವಿಲ್ಲ. ರಾಜ್ಯದ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಕರವೇ ಕಾರ್ಯಕರ್ತರು, ಅಕ್ಕಪಕ್ಕದ ಜಿಲ್ಲೆಗಳ ಮುಖಂಡರೂ ಫೆ.25 ರಂದು ಬೆಳಗಾವಿಗೆ ಬರುತ್ತಿದ್ದೇವೆ. ನಾನು ಬರುವಾಗ ಸುಮ್ಮನೇ ಬಂದು ಹೋಗುವುದಿಲ್ಲ. ಇಷ್ಟು ಸೂಕ್ಷ್ಮ ನಮ್ಮ ಪೊಲೀಸ್ ಇಲಾಖೆಗೆ ಗೊತ್ತೇ ಇದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ನೀವೇ ಓಟು ಹಾಕಿ ಗೆಲ್ಲಿಸಿದ ಶಾಸಕರು, ನಿಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಮಂತ್ರಿಗಳು ಬಾಯಿ ಹೊಲಿದುಕೊಂಡು ಕೂತಿರುವುದು ಯಾಕೆ? ಆಡಳಿತ ಪಕ್ಷ, ವಿರೋಧ ಪಕ್ಷಗಳು ಕನ್ನಡಿಗರ ಪಾಲಿಗೆ ಸತ್ತೇ ಹೋಗಿವೆಯೇ ಎಂದು ಪ್ರಶ್ನಿಸಿದ್ದಾರೆ.
ನಾವೀಗ ಯಾರ ವಿರುದ್ಧ ಬಡಿದಾಡಬೇಕು, ನೆರೆಯ ರಾಜ್ಯದ ಚಿತಾವಣೆಯಿಂದ ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಇಳಿಯುವ ದುಷ್ಟಶಕ್ತಿಗಳ ವಿರುದ್ಧವೇ? ಅಥವಾ ಮರಾಠಿ ಓಟ್ ಬ್ಯಾಂಕ್ ಕೈತಪ್ಪುತ್ತದೆಯೆಂಬ ಕಾರಣಕ್ಕೆ ಸ್ವಾಭಿಮಾನ ಮರೆತ ನಮ್ಮ ಹೇಡಿ ರಾಜಕಾರಣಿಗಳ ವಿರುದ್ಧವೇ? ಇವರು ಬಾಯಿಬಿಟ್ಟು ಮಾತಾಡುವಂತೆ ಮಾಡುವುದು ಕೂಡ ನಮ್ಮ ಕರ್ತವ್ಯವಲ್ಲವೇ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ: ಮರಾಠಿಯಲ್ಲೂ ಸರ್ಕಾರಿ ದಾಖಲೆ?
ಶ್ರೀಶೈಲ ಮಠದ
ಬೆಳಗಾವಿ : ಕನ್ನಡದ ನೆಲದಲ್ಲಿಯೇ ಭಾಷಾ ಅಲ್ಪಸಂಖ್ಯಾತರ ನೀತಿ ಹೆಸರಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಮರಾಠಿಗರಿಗೆ ಮಣಿಯಿತೇ ಎಂಬ ಪ್ರಶ್ನೆ ಎದುರಾಗಿದೆ. ಇದು ಕನ್ನಡಿಗರು, ಕರ್ನಾಟಕ ರಾಜ್ಯವೇ ತಲೆ ತಗ್ಗಿಸುವ ದುರ್ದೈವದ ಸಂಗತಿ ಎಂದು ಕನ್ನಡ ಪರ ಸಂಘಟನೆಗಳು ಕಿಡಿಕಾರಿವೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಡಿ, ಭಾಷಾ ಆಧಾರಿತ ರಾಜಕಾರಣ ಇತಿಹಾಸದ ಪುಟ ಸೇರಿ, ಮರಾಠಿ ಪ್ರಾಬಲ್ಯ ಕಡಿಮೆಯಾಗಿತ್ತು ನಿಜ. ಆದರೆ, ಗಡಿಯಲ್ಲಿ ಮತ್ತೆ ಮರಾಠಿ ಪ್ರಾಬಲ್ಯ ನಿಧಾನವಾಗಿ ಬೆಳೆಯುತ್ತಿದ್ದು, ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕುಮ್ಮಕ್ಕು ನೀಡುವ ಮೂಲಕ ಕನ್ನಡದ ಕಗ್ಗೊಲೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.ಇತ್ತೀಚೆಗೆ ಕೇಂದ್ರೀಯ ಭಾಷಿಕ ಅಲ್ಪಸಂಖ್ಯಾತ ಆಯೋಗದ ಉಪ ಆಯುಕ್ತ ಶಿವಕುಮಾರ ಬೆಳಗಾವಿಗೆ ಭೇಟಿ ನೀಡಿ, ನಡೆಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲಿ ಅಗತ್ಯ ಸರ್ಕಾರಿ ದಾಖಲೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಅಂಶವೇ ಈಗ ಪ್ರಮುಖ ಕಾರಣ ಎನ್ನಲಾಗಿದೆ.
ಅವಕಾಶ ಇದೆಯಾ?:
ಮರಾಠಿ ಭಾಷೆಯಲ್ಲಿ ಅಗತ್ಯ ದಾಖಲೆ ಕೊಡುವಂತೆ ಮಾಡಿದ ಎಂಇಎಸ್ ಮನವಿಗೆ ಸ್ವತಃ ಜಿಲ್ಲಾಧಿಕಾರಿ ರೋಷನ್ ಅವರೇ ಅಸ್ತು ಎಂದು ಭಾಷಾ ಅಲ್ಪಸಂಖ್ಯಾತರ ಆಯೋಗದ ಎದುರು ಭರವಸೆ ಕೊಟ್ಟಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದರ ನಡುವೆ ಆಡಳಿತ ಭಾಷೆಯಾಗಿ ಕನ್ನಡ ಇರುವುದರಿಂದ ಕನ್ನಡದಲ್ಲಿಯೇ ದಾಖಲೆಗಳನ್ನು ನೀಡಬೇಕು ಎಂಬ ವಾದ ಕನ್ನಡ ಪರ ಸಂಘಟನೆಗಳದ್ದು. ಆದರೆ ಶೇ.15ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಿಕರಿಗೇ ಅವರದ್ದೇ ಆದ ಭಾಷೆಯಲ್ಲಿ ಅಗತ್ಯ ದಾಖಲೆ ನೀಡುವಂತೆ ಸಂವಿಧಾನ ಹಕ್ಕನ್ನು ಒದಗಿಸಿದೆ ಎಂಬುದು ಎಂಇಎಸ್ ಮುಖಂಡ ವಾದ.
ಭಾಷಾ ಅಲ್ಪಸಂಖ್ಯಾತರ ನೀತಿ ಏನು ಹೇಳುತ್ತೆ?:
ಸಂವಿಧಾನದ 30/1ನೇ ವಿಧಿಯು ಭಾಷಾ ಅಲ್ಪಸಂಖ್ಯಾತರಿಗೆ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಮತ್ತು ಆಡಳಿತವನ್ನು ಅನುಭವಿಸುವ ಮೂಲಭೂತ ಹಕ್ಕನ್ನು ಒದಗಿಸಿದೆ. ಸಾಮಾನ್ಯವಾಗಿ, ಭಾರತದ ಪ್ರತಿಯೊಬ್ಬ ನಾಗರಿಕನು ಸಿಒಐನ (ಭಾರತೀಯ ಸಂವಿಧಾನ ಪರಿಚ್ಛೇದ) 19ನೇ ವಿಧಿಯ ಅಡಿಯಲ್ಲಿ ತನ್ನ ಆಯ್ಕೆಯ ಭಾಷೆಯಲ್ಲಿ ಮಾತನಾಡಲು ಅಥವಾ ಬರೆಯಲು ಅರ್ಹನಾಗಿರುತ್ತಾನೆ.
ಸರ್ಕಾರಕ್ಕೆ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ, ಕೆಳಗೆ ಹೊರತೆಗೆಯಲಾದ ಸಂವಿಧಾನದ 350ನೇ ವಿಧಿಯ ಅಡಿಯಲ್ಲಿ ನಾಗರಿಕನು ಒಕ್ಕೂಟ ಮತ್ತು ರಾಜ್ಯಗಳು ಬಳಸುವ ಭಾಷೆಯಲ್ಲಿ ಮಾತ್ರ ಬರವಣಿಗೆಯಲ್ಲಿ ಅಥವಾ ಭಾಷಣದ ಮೂಲಕ ಪ್ರತಿನಿಧಿಸಲು ಅರ್ಹನಾಗಿರುತ್ತಾನೆ. 350ನೇ ವಿಧಿ ಅಡಿಯಲ್ಲಿ ಕುಂದುಕೊರತೆಗಳ ಪರಿಹಾರಕ್ಕಾಗಿ ಪ್ರಾತಿನಿಧ್ಯಗಳಲ್ಲಿ ಬಳಸಬೇಕಾದ ಭಾಷೆ. ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಕುಂದುಕೊರತೆಯ ಪರಿಹಾರಕ್ಕಾಗಿ ಒಕ್ಕೂಟ ಅಥವಾ ರಾಜ್ಯದ ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರಕ್ಕೆ ಒಕ್ಕೂಟ ಅಥವಾ ರಾಜ್ಯದಲ್ಲಿ ಬಳಸುವ ಯಾವುದೇ ಭಾಷೆಗಳಲ್ಲಿ ಪ್ರಾತಿನಿಧ್ಯವನ್ನು ಸಲ್ಲಿಸಲು ಅರ್ಹನಾಗಿರುತ್ತಾನೆ ಎಂದು ಹೇಳುತ್ತಾರೆ ಗಡಿ ತಜ್ಞ ವಕೀಲ ರವೀಂದ್ರ ತೋಟಿಗೇರ.
ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ಜತ್ತ, ಅಕ್ಕಲಕೋಟ ಭಾಗದಲ್ಲಿ ಶೇ.70ರಷ್ಟು ಕನ್ನಡಿಗರು ಇದ್ದಾರೆ. ಅವರು ಅಲ್ಲಿನ ಭಾಷೆಯಾದ ಮರಾಠಿ ಭಾಷೆಯನ್ನು ಕಲಿತು ಮುಖ್ಯವಾಹಿನಿಯಲ್ಲಿ ಸೇರತೊಡಗಿದ್ದಾರೆ. ಅಲ್ಲಿಯೂ ಅವರಿಗೆ ಕನ್ನಡ ಭಾಷೆಯಲ್ಲಿ ಯಾವುದೇ ದಾಖಲೆ ನೀಡುತ್ತಿಲ್ಲ. ಆದರೆ, ಬೆಳಗಾವಿ ಸೇರಿದಂತೆ ಮತ್ತಿತರ ಗಡಿಭಾಗದಲ್ಲಿ ಮರಾಠಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಅವರದ್ದೇ ಭಾಷೆಯಲ್ಲಿ ಸರ್ಕಾರಿ ದಾಖಲೆ ಪತ್ರ ನೀಡುವಂತೆ ಮರಾಠಿಗರು ಬೇಡಿಕೆ ಇಟ್ಟಿದ್ದಾರೆ.
ಮರಾಠಿಯಲ್ಲಿ ದಾಖಲೆ ಬೇಕಂತೆ:
ಗಡಿಭಾಗದಲ್ಲಿರುವ ಮರಾಠಿ ಭಾಷಿಕರಿಗೆ ಅವರದ್ದೇ ಭಾಷೆಯಲ್ಲಿ ಸರ್ಕಾರಿ ಅಗತ್ಯ ದಾಖಲೆ ಪತ್ರಗಳನ್ನು ಒದಗಿಸುವಂತೆ ಎಂಇಎಸ್ ಕಳೆದ 50 ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿದೆ. ಆದರೆ, ಈವರೆಗೂ ಎಂಇಎಸ್‌ನ ಈ ಬೇಡಿಕೆಗೆ ಯಾರೂ ಸೊಪ್ಪು ಹಾಕಿರಲಿಲ್ಲ. ಈಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ.
ಗಡಿ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯವು ಸಂವಿಧಾನದ 345ನೇ ವಿಧಿಯ ಅಡಿಯಲ್ಲಿ ಮರಾಠಿಯನ್ನು ಒಂದು ಭಾಷೆಯಾಗಿ ಗುರುತಿಸಿದೆಯೇ ಎಂದು ನನಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ, ಸಿಒಐ ನ 347 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಯಾವುದೇ ನಿರ್ದೇಶನವನ್ನು ನೀಡಿದ್ದಾರೆಯೇ ಎಂದು ನೋಡುವುದು ಸಹ ಅಗತ್ಯವಾಗಿದೆ.
- ರವೀಂದ್ರ ತೋಟಿಗೇರ, ಗಡಿ ತಜ್ಞ, ವಕೀಲ.
ಕರ್ನಾಟಕದ ಗಡಿಭಾಗದಲ್ಲಿ ಮರಾಠಿಯಲ್ಲಿ ದಾಖಲೆ ಕೊಡುವುದಕ್ಕೆ ನಮ್ಮ ಸರ್ಕಾರ ಹಾಗೂ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಒಪ್ಪಬಾರದು. ಭಾಷಾ ನೀತಿಯ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕೆ ರಾಜ್ಯ ಸಚಿವ ಸಂಪುಟಕ್ಕೆ ಮಾತ್ರ ಅಧಿಕಾರವಿದೆ. ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳ ಒತ್ತಡಕ್ಕೆ ಜಿಲ್ಲಾಡಳಿತ ಮಣಿಯಬಾರದು.
- ಅಶೋಕ ಚಂದರಗಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಕಾರ ಸದಸ್ಯರು.