ಕೃಷಿಗೆ ಮಾರಕವಾದ 3 ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಇತರರ ನೇತೃತ್ವದಲ್ಲಿ ಡಿ.9ರಂದು ಬೆಳಗಾವಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ತಿಳಿಸಿದರು.
ದಾವಣಗೆರೆ: ಕೃಷಿಗೆ ಮಾರಕವಾದ 3 ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಇತರರ ನೇತೃತ್ವದಲ್ಲಿ ಡಿ.9ರಂದು ಬೆಳಗಾವಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.8ರಂದು ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಬೆಳಗಾವಿಗೆ ತೆರಳಲಿರುವ ಸಂಘದ ಮುಖಂಡರು, ರೈತರು ಡಿ.9ರಂದು ಬೆಳಿಗ್ಗೆ 10.30ಕ್ಕೆ ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಿದ್ದಾರೆ ಎಂದರು.ರೈತರು ಬೆಳೆದ ಬೆಳೆಗಳಿಗೆ ಕಾನೂನಾತ್ಮಕ ಬೆಲೆ ನಿಗದಿಪಡಿಸಬೇಕು. ಮೆಕ್ಕೆಜೋಳ, ಭತ್ತಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ, ರೈತರಿಂದ ನೇರವಾಗಿ ಖರೀದಿಸಬೇಕು. 10 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುವುದಾಗಿ ಹೇಳಿರುವ ಸರ್ಕಾರದ ಮಾತನ್ನು ರೈತರು ಒಪ್ಪಿಲ್ಲ. ಅತಿ ಹೆಚ್ಚು ಭತ್ತ ಮತ್ತು ಮೆಕ್ಕೆಜೋಳವನ್ನು ದಾವಣಗೆರೆ ಜಿಲ್ಲೆಯೊಂದರಲ್ಲೇ ಬೆಳೆಯಲಾಗಿದೆ. ಹಾಗಾಗಿ ಎಲ್ಲಾ ರೈತರು ಬೆಳೆದ ಭತ್ತ, ಮೆಕ್ಕೆಜೋಳವನ್ನು ಸರ್ಕಾರವೇ ಖರೀದಿ ಕೇಂದ್ರಗಳ ಮೂಲಕ ಖರೀದಿಸಲಿ ಎಂದು ಒತ್ತಾಯಿಸಿದರು.
ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ ಸಕ್ರಮ ಮತ್ತು ಯಥಾಸ್ಥಿತಿಯನ್ನು ಮುಂದುವರಿಸಬೇಕು. ಜಿಲ್ಲೆಯ ಬಗರ್ ಹುಕುಂ ಸಾಗುವಳಿ ಚೀಟಿ 53 ಮತ್ತು 57ರ ಹಕ್ಕುಪತ್ರಗಳನ್ನು ವಿತರಿಸಬೇಕು. ಜಿಲ್ಲಾದ್ಯಂತ ಮೈಕ್ರೋ ಫೈನಾನ್ಸ್ ಮತ್ತು ಎಲ್ಲಾ ಫೈನಾನ್ಸ್ ಸಂಸ್ಥೆ, ಕಂಪನಿಗಳು ರೈತರ ಮನೆಗಳನ್ನು ಜಪ್ತಿ ಮಾಡುತ್ತಿರುವುದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಜಗಳೂರು ಪಟ್ಟಣದಲ್ಲಿ ಕೆಎಸ್ಸಾರ್ಟಿಸಿ ಡಿಪೋ ನಿರ್ಮಿಸಬೇಕು. ರೈತರ ಮೇಲಿನ ಇತ್ತೀಚೆಗೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂವಿಧಾನಾತ್ಮಕವಾಗಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸೂಕ್ತ ಕಾನೂನು ಜಾರಿಗೊಳಿಸಬೇಕು. ಎಲ್ಲಾ ತಾಲೂಕುಗಳಲ್ಲಿ ಕೃಷಿ ಸೇರಿದಂತೆ ವಿವಿಧ ಡಿಪ್ಲೋಮಾ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ರೈತರು, ಗ್ರಾಮೀಣರ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾದ್ಯಂತ ರೈತರಿಗೆ ಅಡಕೆ ಗಿಡದ ಬೆಲೆಗಳಿಗೆ ಮನಾರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ) ಯೋಜನೆಯಡಿ ಸಹಾಯಧನ ನೀಡಬೇಕು. ಜಿಲ್ಲೆಯಲ್ಲಿ ಕೃಷಿ ಇಲಾಖೆಯೊಳಗೆ ಪರಿಶಿಷ್ಟ ಜಾತಿ-ಪಂಗಡಗಳ ರೈತರಿಗೆ ನೀಡುವ ಅನುದಾನ, ಸೌಲಭ್ಯಗಳನ್ನು ಹೆಚ್ಚಿಸಬೇಕು. ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಬೆಳಗಾವಿ ಚಲೋ ಹೋರಾಟದ ವೇಳೆ ನಮ್ಮೆಲ್ಲಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಟಿ.ಕಿರಣಕುಮಾರ, ಬಿ.ಕುಮಾರ ಭರಮಸಮುದ್ರ, ಚನ್ನಗಿರಿಯ ಸಂತೋಷ ಬೆಳಲಗೆರೆ, ಚಿಕ್ಕಬೂದಾಳ ಭಗತ್ ಸಿಂಹ, ಹೊಟ್ಟಿಗೇನಹಳ್ಳಿ ಸುನಿಲ್, ಉಚ್ಚೆಂಗೆಪ್ಪ, ಪ್ರದೀಪ, ಮಲ್ಲಿಕಾರ್ಜುನ ಚಿಕ್ಕತೊಗಲೇರಿ, ಮಾರಪ್ಪ, ಬಸಣ್ಣ ಇತರರು ಇದ್ದರು.