ಸಾರಾಂಶ
ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಸಪ್ತ ನದಿಗಳ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಈಗ ನೀರಿನ ಬರ ಆರಂಭಗೊಂಡಿದೆ. ಎರಡು ಡ್ಯಾಂಗಳು, 7 ನದಿಗಳು, 290ಕ್ಕೂ ಅಧಿಕ ಕೆರೆಗಳು ಇದ್ದರೂ ನೀರಿನ ದಾಹ ಮಾತ್ರ ಈ ಬೇಸಿಗೆಗೆ ತೀರುತ್ತಿಲ್ಲ. ಇದು ಬರೀ ಕೇವಲ ನಗರ, ಪಟ್ಟಣದ ಪರಿಸ್ಥಿತಿಯಲ್ಲ. ಗ್ರಾಮೀಣ ಪ್ರದೇಶದಲ್ಲಿಯೂ ಜನರು ತೀವ್ರ ಪರದಾಡುವಂತಾಗಿದೆ. ಗ್ರಾಮೀಣ ಭಾಗದ ಜನರಿಗೆ ಜಲ ಮೂಲಗಳಾಗಿರುವ ಕೆರೆ ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಸಹಜವಾಗಿ ಜನ, ಜಾನುವಾರುಗಳು ನೀರಿನ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಆಗದ್ದರಿಂದ ಪರಿಸ್ಥಿತಿ ತೀವ್ರ ಬಿಗಡಾಯಿಸಿದ್ದು, ಬರಗಾಲ ಆವರಿಸಿದ್ದು ಕೂಡ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗ ಬೇಸಿಗೆ ಬೇರೆ. ಪರಿಸ್ಥಿತಿಯಂತೂ ಹೇಳತೀರದಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರಲ್ಲಿ ಕೆರೆಗಳು, ನದಿಗಳು ಬತ್ತಿ ಹೋಗುವ ಸ್ಥಿತಿಗೆ ಬಂದು ತಲುಪಿವೆ. ಜಿಲ್ಲೆಯಲ್ಲಿ ಬರೋಬ್ಬರಿ 290 ಕೆರೆಗಳಿದ್ದು, ಆ ಪೈಕಿ 200 ರಷ್ಟು ಕೆರೆಗಳು ಖಾಲಿಯಾಗಿವೆ. ಬಿಸಿಲಿನ ಝಳಕ್ಕೆ ಕೆರೆಗಳು ಖಾಲಿಯಾಗಿವೆ. ಅಲ್ಲದೆ, ಕೆರೆಗಳನ್ನೇ ನಂಬಿಕೊಂಡು ಬೋರ್‌ವೆಲ್ ಕೊರೆಸಿದ್ದ ರೈತರು ಕೂಡ ಅದರಲ್ಲಿ ನೀರು ಬಾರದೇ ಪರಿತಪಿಸುವಂತಾಗಿದೆ. ಹೀಗಾಗಿ ಬಿತ್ತನೆ ಮಾಡಿದ ಕಬ್ಬು, ತರಕಾರಿ ಹಾಗೂ ಇನ್ನಿತರೆ ಬೆಳೆಗಳಿಗೆ ನೀರಿಲ್ಲದೆ ಅನ್ನದಾತ ಪರದಾಡುವ ಸ್ಥಿತಿಗೆ ತಲುಪಿದ್ದಾನೆ. ಜಿಲ್ಲೆಯಲ್ಲಿರುವ 290 ಕೆರೆಗಳ ಪೈಕಿ 90 ಕೆರೆಗಳಲ್ಲಿ ಮಾತ್ರ ನೀರಿದೆ. ಇನ್ನೂ ಬೇಸಿಗೆ ಕಳೆಯಲು 20 ದಿನಗಳು ಅಧಿಕವಾಗಿದೆ. ಹೀಗಾಗಿ ಈ ಕೆರೆಗಳಲ್ಲಿನ ನೀರು ಕೂಡ ಖಾಲಿಯಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಭೀಕರ ಬರಕ್ಕೆ ತುತ್ತಾಗಿರುವ ಬೆಳಗಾವಿ ಜಿಲ್ಲೆಯೊಂದರಲ್ಲೇ 290ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳಲ್ಲಿ ನೀರಿಲ್ಲದೆ ಒಣಗಿ ಬಿರುಕು ಬಿಟ್ಟಿವೆ. ಕೆರೆಗಳು ಬತ್ತಿರುವುದರಿಂದ ಸಹಜವಾಗಿ ಅಂತರ್ಜಲಮಟ್ಟ ಕೂಡ ಕ್ಷೀಣಗೊಂಡಿದೆ. ಇದರಿಂದಾಗಿ ಬೋರ್‌ವೆಲ್ ಅನ್ನೇ ನಂಬಿಕೊಂಡಿದ್ದ ರೈತರು ಸರಿಯಾದ ಬೆಳೆಗಳನ್ನು ತೆಗೆಯಲು ಆಗದ ಪರಿಸ್ಥಿತಿಯಲ್ಲಿದ್ದಾರೆ.ನೀರಿನ ಪ್ರಮಾಣ ಎಷ್ಟಿದೆ?:ಜಿಲ್ಲೆಯಲ್ಲಿರುವ ಒಟ್ಟು 90 ಕೆರೆಗಳ ಪೈಕಿ 72 ಕೆರೆಗಳಲ್ಲಿ ಶೇ.15 ರಷ್ಟು ಮಾತ್ರ ನೀರಿದೆ. ಇನ್ನುಳಿದ 15 ಕೆರೆಗಳಲ್ಲಿ ಶೇ.50 ರಷ್ಟು ನೀರಿನ ಸಂಗ್ರಹವಿದೆ. ಸರ್ಕಾರ ಕೆರೆ ತುಂಬಿಸುವ ಯೋಜನೆ ರೂಪಿಸಿದರೂ ಆ ಯೋಜನೆ ಇನ್ನೂ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ನೀರಿನ ಸಂಗ್ರಹವಾಗಿಲ್ಲ. ಕೆರೆಗಳು ಬತ್ತಿ ಹೋಗಿರುವ ಕಾರಣ ಅಂತರ್ಜಲಮಟ್ಟವೂ ಕುಸಿತಗೊಂಡಿದೆ. ಬೋರ್‌ವೆಲ್‌ಗಳೂ ಬತ್ತು ಹೋಗಿವೆ. ಬೆಳಗಾವಿ ಜಿಲ್ಲೆಯಲ್ಲಿ 30,813 ಹೆಕ್ಟೆರ್ ಕೃಷಿ ಪ್ರದೇಶವೂ ಕೆರೆ ನೀರಿನ ಮೇಲೆಯೇ ಅವಲಂಬಿತವಾಗಿದ್ದು ಕೆರೆಗಳು ಬತ್ತಿರುವುದರಿಂದ ಬಿತ್ತನೆ ಮಾಡಿ ಕೈಗೆ ಬಂದಿರುವ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ರೈತರು. ಜಿಲ್ಲೆಯ 15 ತಾಲೂಕಿನ 145 ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಸಮಸ್ಯೆ ಆಗುತ್ತಿದೆ. ಈಗಾಗಲೇ ಜಿಲ್ಲೆಯ 6 ಕಡೆಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು ಮೇವು ಬ್ಯಾಂಕ್‌ಗಳ ಮೂಲಕ ರೈತರ ಜಾನುವಾರುಗಳಿಗೆ ಮೇವು ನೀಡಲಾಗುತ್ತಿದೆ.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 145 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 160 ನೀರಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ದಿನ 621 ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಆರು ಮೇವಿನ ಬ್ಯಾಂಕ್ ತೆರೆಯಲಾಗಿದೆ. ಅಥಣಿಯ ಕಕಮರಿ, ಅನಂತಪುರ, ತೆಲಸಂಗ, ಚಿಕ್ಕೋಡಿ ತಾಲೂಕಿನ ಕಳಕೋಡಗೇಟ್, ಗೋಕಾಕನ ಕಡಬಗಟ್ಟಿಯಲ್ಲಿ, ರಾಯಬಾಗ ತಾಲೂಕಿನ ಬೂದಿಹಾಳದಲ್ಲಿ ಮೇವು ಬ್ಯಾಂಕ್ ತೆರೆದು ರೈತರಿಗೆ ಮೇವು ಕೊಡುತ್ತಿದ್ದೇವೆ. ನೀರು ಮತ್ತು ಮೇವಿನ ಸಮಸ್ಯೆ ನಿಭಾಯಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ.
-ನಿತೇಶ ಪಾಟೀಲ, ಜಿಲ್ಲಾಧಿಕಾರಿ.---ಕರಾವಳಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಅಕಾಲಿಕ ಮಳೆಯಾಗುತ್ತಿದ್ದರೂ ಕೆರೆಗಳಲ್ಲಿ ನೀರು ಸಂಗ್ರಹವಾಗಿಲ್ಲ. ಸಧ್ಯ ಜಲಾಶಯಗಳಲ್ಲಿರುವ ನೀರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅದಕ್ಕಿಂತಲೂ ಕಡಿಮೆಯಾಗಿದೆ. ಹೀಗಾಗಿ ರೈತರು ಮಳೆಗಾಲದತ್ತ ಮುಗಿಲು ನೋಡುತ್ತ ಕುಳಿತ್ತಿದ್ದಾರೆ.
-ಸುರೇಶ ಪಾಟೀಲ, ರೈತ.