ಶೆಟ್ಟರ್‌ಗೆ ರಾಜಕೀಯ ಮರುಜನ್ಮ ನೀಡಿದ ಬೆಳಗಾವಿ!

| Published : Jun 05 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಇದು ಅವರಿಗೆ ಒಲಿದ ಗೆಲವು ಮಾತ್ರವಲ್ಲ, ಬೆಳಗಾವಿ ಜಿಲ್ಲೆ ಅವರಿಗೆ ಮತ್ತೊಮ್ಮೆ ರಾಜಕೀಯ ಮರು ಜನ್ಮ ಕೂಡ ಹೌದು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದಾರೆ. ಇದು ಅವರಿಗೆ ಒಲಿದ ಗೆಲವು ಮಾತ್ರವಲ್ಲ, ಬೆಳಗಾವಿ ಜಿಲ್ಲೆ ಅವರಿಗೆ ಮತ್ತೊಮ್ಮೆ ರಾಜಕೀಯ ಮರು ಜನ್ಮ ಕೂಡ ಹೌದು.

ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ (ಬಣಜಿಗ) ಸಮುದಾಯದ ಪ್ರಭಾವಿ ನಾಯಕರಾಗಿದ್ದ ಅವರು 2023ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಕಮಲ ಬಿಟ್ಟು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದರು. ಮಾತ್ರವಲ್ಲ, ಕಾಂಗ್ರೆಸ್‌ನಿಂದಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲೇ ಸ್ಪರ್ಧಿಸಿ, ಬಿಜೆಪಿಯ ಮಹೇಶ ಟೆಂಗಿನಕಾಯಿ ವಿರುದ್ಧ ಸೋಲುಂಡರು.

ಇದರಿಂದ ತೀವ್ರ ಆಘಾತಗೊಂಡಿದ್ದ ಅವರನ್ನು ಕಾಂಗ್ರೆಸ್‌ ಪಕ್ಷವು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಕಳುಹಿಸಿತ್ತು. ಒಂದು ಹಂತದಲ್ಲಿ ಬಿಜೆಪಿ ಬಿಟ್ಟು ಹೋದ ಮೇಲೆ ಅವರು ರಾಜಕೀಯವಾಗಿ ಅತಂತ್ರ ಸ್ಥಿತಿ ಎದುರಿಸಿದ್ದರು. ಇದಾದ ರಾಜಕೀಯ ಸ್ಥಿತ್ಯಂತರದಲ್ಲಿ 2024ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಗದೀಶ ಶೆಟ್ಟರ್‌ ಅವರನ್ನು ಮತ್ತೆ ಮಾತೃಪಕ್ಷ ಬಿಜೆಪಿಗೆ ಕರೆತಂದರು.ಲೋಕಸಭೆ ಟಿಕೆಟ್‌ ಭರವಸೆ ನೀಡಿದ್ದರು:

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರ ತಂದೆ ಮೂಲಕ ಜನಸಂಘದಿಂದ ಬಂದವರು. ಅದರಂತೆ ಜಗದೀಶ ಶೆಟ್ಟರ್‌ ಅವರು ಕೂಡ ಜನಸಂಘದಲ್ಲಿಯೇ ಹೆಚ್ಚು ಗುರುತಿಸಿಕೊಂಡವರು. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದರೂ ಹೆಚ್ಚು ದಿನ ಅಲ್ಲಿ ಉಳಿಯಲಿಲ್ಲ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅವರಿಗೆ ಮುಂದೇನು ಎಂಬ ಪ್ರಶ್ನೆ ಕೂಡ ಎದುರಾಗಿತ್ತು. ಅದಕ್ಕಾಗಿ ಬಿಜೆಪಿ ಸೇರುವ ಅವಕಾಶಕ್ಕೂ ಅವರು ಕಾದಿದ್ದರು ಎನ್ನಲಾಗಿದೆ. ಹೀಗಾಗಿ ಬದಲಾದ ಸನ್ನಿವೇಶದಲ್ಲಿ ಅವಕಾಶ ಸಿಕ್ಕ ಕೂಡಲೇ ಬಿಜೆಪಿಗೆ ವಾಪಸಾದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಭರವಸೆ ಯಡಿಯೂರಪ್ಪನವರಿಂದ ಸಿಕ್ಕ ಮೇಲೆಯೇ ಅವರು ಮಾತೃ ಪಕ್ಷವನ್ನು ಕೈ ಹಿಡಿದರು. ಇದರಿಂದಾಗಿ ರಾಜಕೀಯವಾಗಿ ಮಂಕಾಗಿದ್ದ ಅವರಿಗೆ ಇದೊಂದು ಎಳೆ ಅವರಿಗೆ ಆಶಾಕಿರಣವಾಯಿತು.ಮರು ಜನ್ಮ ಪಡೆದ ಶೆಟ್ಟರ್‌:

ಜಗದೀಶ ಶೆಟ್ಟರ್‌ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ 1994ರಿಂದ ಸ್ಪರ್ಧಿಸಿ ಆರಂಭದಲ್ಲೇ ಯಶ್‌ ಕಂಡರು. ಅದಾದ ಬಳಿಕ ಹಿಂದಿರುಗಿಯೂ ನೋಡಿಲ್ಲ. ಸತತ ಗೆಲವು ಸಾಧಿಸುತ್ತಲೇ ಬಂದಿದ್ದರು. ಬಿಜೆಪಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿ, ಸಚಿವರಾಗಿ ನಾನಾ ಖಾತೆಗಳನ್ನು ನಿಭಾಯಿಸಿದರು. ಜತೆಗೆ ಸ್ಪೀಕರ್‌ ಆಗಿ, ಮುಖ್ಯಮಂತ್ರಿಯಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದರು. ಆದರೆ, 2023ರ ಚುನಾವಣೆಯಲ್ಲಿ ಟಿಕೆಟ್‌ ಸಿಗದ್ದಕ್ಕೆ ಬಿಜೆಪಿ ಕೈಬಿಟ್ಟು ಕಾಂಗ್ರೆಸ್‌ ಸೇರಿದ್ದರು.

ಬಳಿಕ ಮತ್ತೆ ಮಾತೃ ಪಕ್ಷಕ್ಕೆ ವಾಪಸಾಗಿ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರು. ಈಗ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಅವರ ವಿರುದ್ಧ ಗೆಲವು ಸಾಧಿಸಿ, ರಾಜಕೀಯವಾಗಿ ಮರು ಜನ್ಮ ಪಡೆದಿದ್ದಾರೆ.