15 ದಿನಗಳ ನಿರಂತರ ಹೋರಾಟ, ಆಮರಣ ಉಪವಾಸ ಹಾಗೂ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಬಿ.ಡಿ. ಹಿರೇಮಠ ಶುಕ್ರವಾರ ರಾತ್ರಿ ಅಸ್ವಸ್ಥರಾದರು. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಧಾರವಾಡ:
ಧಾರವಾಡ ಪ್ರತ್ಯೇಕ ಪಾಲಿಕೆಗೆ ಆಗ್ರಹಿಸಿ ನಡೆಯುತ್ತಿರುವ ಸತ್ಯಪ್ರತಿಪಾದನೆ ಸತ್ಯಾಗ್ರಹ 16ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ನಿರಂತರವಾಗಿ ಹೋರಾಟದಲ್ಲಿ ಪಾಲ್ಗೊಂಡ ಬಿ.ಡಿ. ಹಿರೇಮಠ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಶಾಸಕ ಅರವಿಂದ ಬೆಲ್ಲದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.15 ದಿನಗಳ ನಿರಂತರ ಹೋರಾಟ, ಆಮರಣ ಉಪವಾಸ ಹಾಗೂ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಬಿ.ಡಿ. ಹಿರೇಮಠ ಶುಕ್ರವಾರ ರಾತ್ರಿ ಅಸ್ವಸ್ಥರಾದರು. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ನಡುವೆ ಶನಿವಾರ ಮಧ್ಯಾಹ್ನ ಶಾಸಕ ಅರವಿಂದ ಬೆಲ್ಲದ ಹೋರಾಟ ವೇದಿಕೆಗೆ ಆಗಮಿಸಿ ಪ್ರತ್ಯೇಕ ಪಾಲಿಕೆಗೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಈ ಹಿಂದೆ ಪ್ರತ್ಯೇಕ ಪಾಲಿಕೆ ರಚನೆ ಮಾಡಬೇಕೆಂದು ಠರಾವು ಮಾಡಲಾಗಿತ್ತು. ಅದಾದ ಬಳಿಕ ಕೇಂದ್ರ ಸರ್ಕಾರದ ೧೬ನೇ ಹಣಕಾಸು ಆಯೋಗದ ಅನುದಾನ ಪಡೆಯಲು ಬೃಹತ್ ಪಾಲಿಕೆ ಠರಾವು ಮಾಡಿದ್ದು ಸತ್ಯ ಎಂದರು. ಆದರೆ, ಪ್ರತ್ಯೇಕ ಪಾಲಿಕೆಗೆ ನಮ್ಮ ವಿರೋಧವಿದೆ ಎಂದಲ್ಲ. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಇಲ್ಲಿನ ಜನರ ಭಾವನಾತ್ಮಕ ವಿಷಯ. ಹೀಗಾಗಿ ಸಾರ್ವಜನಿಕರ ಕೂಗು ಕೂಡ ಸರಿಯಾಗಿದೆ. ಜನರ ಭಾವನೆ ಅರಿತೇ, ಪ್ರತ್ಯೇಕ ಪಾಲಿಕೆ ಕಡತಕ್ಕೆ ರಾಜ್ಯಪಾಲರಿಂದ ಅಂಕಿತ ಹಾಕಿಸಲಾಗಿದೆ ಎಂದರು. ಹುಬ್ಬಳ್ಳಿ-ಧಾರವಾಡ ವಿಭಜನೆಗೊಂಡು ಎರಡು ಪ್ರತ್ಯೇಕ ಪಾಲಿಕೆ ರಚನೆಯಾದರೆ, ಹೆಚ್ಚಿನ ಅನುದಾನವೂ ಸಹ ಬರಲಿದೆ. ಹುಬ್ಬಳ್ಳಿ ವಾಣಿಜ್ಯ ಕೇಂದ್ರವಾಗಿ, ಧಾರವಾಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಬೆಲ್ಲದ ತಿಳಿಸಿದರು.
ಈಗ ರಾಜ್ಯಪಾಲರ ಕೆಲಸ ಮುಗಿದಿದೆ. ಇನ್ನೇನಿದ್ದರೂ ರಾಜ್ಯ ಸರ್ಕಾರದ ಕೆಲಸ. ಯಾವುದೇ ವಿಳಂಬ ಮಾಡದೆ, ತಕ್ಷಣವೇ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಪಾಲಿಕೆ ಪ್ರತ್ಯೇಕ ಆಗುವರೆಗೆ ಹೋರಾಟ ನಿಲ್ಲಿಸದಂತೆ ಹೋರಾಟಗಾರರಿಗೆ ಮನವಿ ಮಾಡಿದರು.ಪ್ರತ್ಯೇಕ ಪಾಲಿಕೆ ರಚನೆಗೆ ಬಿ.ಡಿ. ಹಿರೇಮಠ, ವೆಂಕಟೇಶ ಮಾಚಕನೂರ, ಮನೋಹ ಪಾಟೀಲರ ನೇತೃತ್ವದಲ್ಲಿ ನಡೆದ ಪಕ್ಷಾತೀತ ಹೋರಾಟದಲ್ಲಿ ಕೆಲವರು ರಾಜಕಾರಣ ಮಾಡಲು ಯತ್ನಿಸಿದರೂ, ಹೋರಾಟಗಾರರು ಸೊಪ್ಪ ಹಾಕಲಿಲ್ಲ. ಇದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಬೆಲ್ಲದ ಹೇಳಿದರು.
ಈ ವೇಳೆ ಪುಷ್ಪಾ ನವಲಗುಂದ, ಸುಮಿತ್ರಾ ಬಡಿಗೇರ, ಶೋಭಾ ಜಾಧವ, ಮಾದೇವಿ ಕೌದಿ, ಭಾರತಿ ದಳವಾಯಿ, ಶಾಂತಾ ಪವಾರ, ಶಕುಂತಲಾ ಕಟ್ಟೆ, ಅನಿತಾ ಹೊಸಕೊಟೆ, ಮಂಜುನಾಥ ಹೊಂಗಲ, ಗುರುರಾಜ ಹುಣಸಿಮರದ, ಶಿವು ಹಿರೇಮಠ ಇತರರು ಇದ್ದರು.ಆಸ್ಪತ್ರೆಗೆ ಭೇಟಿ:ಬಳಿಕ ಶಾಸಕರು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಿ.ಡಿ. ಹಿರೇಮಠ ಅವರ ಆರೋಗ್ಯ ವಿಚಾರಿಸಿದರು. ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ ಚಂದ್ರಶೇಖರ್ ಮನಗುಂಡಿ, ಕವಿತಾ ಕಬ್ಬೇರ, ಬಸವರಾಜ ಗರಗ, ನಾಗರಾಜ ನಾಯಿಕ, ಕರೆಪ್ಪ ಸುಣಗಾರ ಇದ್ದರು.