೨೪ ರಂದು ಬೆಲ್ಲದಾರತಿ ಸ್ಮರಣ ಸಂಚಿಕೆ ಬಿಡುಗಡೆ: ಡಾ: ಕುಮಾರ

| Published : Aug 01 2025, 11:45 PM IST

೨೪ ರಂದು ಬೆಲ್ಲದಾರತಿ ಸ್ಮರಣ ಸಂಚಿಕೆ ಬಿಡುಗಡೆ: ಡಾ: ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿಯನ್ನು ಬಿಂಬಿಸುವ ರೀತಿ ವೇದಿಕೆ ಸಿದ್ಧವಾಗಬೇಕು. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಕನ್ನಡ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲೆಯ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಿ ಎಂದರು.

೮೦೦ ಪ್ರತಿ ಸ್ವಾಗತ ಸಮಿತಿ ಸದಸ್ಯರು, ಗಣ್ಯರಿಗೆ ನೀಡಿಕೆ । ಬೆಲ್ಲದಾರತಿ ಸ್ಮರಣ ಸಂಚಿಕೆ ೨೦೦೦ ಪ್ರತಿ ಮುದ್ರಣ

ಕನ್ನಡಪ್ರಭ ವಾರ್ತೆ ಮಂಡ್ಯ

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಆ.೨೪ ರಂದು ಮಧ್ಯಾಹ್ನ ೩ ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಲಾಗಿದ್ದು, ಸ್ಮರಣ ಸಂಚಿಕೆ ಬೆಲ್ಲದಾರತಿ ಬಿಡುಗಡೆ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಆಯೋಜಿಸಬೇಕು ಎಂದು ಹೇಳಿದರು.

ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ಶ್ರೀಮಂತ ಪರಂಪರೆ ಇದೆ. ಕನ್ನಡದ ಐಕ್ಯತೆಯ ಧ್ಯೋತಕವಾಗಿ ನಮ್ಮ ಸಾಹಿತ್ಯ - ಸಂಸ್ಕೃತಿ- ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಆಚರಿಸಲಾಗಿದೆ. ಕಾರ್ಯಕ್ರಮಗಳನ್ನು ಹಿಡಿದಿಡುವ, ದಾಖಲಿಸುವ ಹಾಗೂ ಮುಂದಿನ ಪೀಳಿಗೆಗೆ ಅದರ ನೆನಪುಗಳನ್ನು ಮೆಲಕು ಹಾಕುವ ದೃಷ್ಟಿಯಿಂದ ಸ್ಮರಣ ಸಂಚಿಕೆಯನ್ನು ಹೊರತರಲಾಗಿದೆ. ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಿಳಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು, ಸಮ್ಮೇಳನದ ಅಧ್ಯಕ್ಷರು, ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಸದಸ್ಯರು, ವಿವಿಧ ಸಮಿತಿಗಳ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಮನವಿ ಮಾಡಿದ ಅವರು, ಬೆಲ್ಲದಾರತಿ ಸ್ಮರಣ ಸಂಚಿಕೆ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಲು ಸ್ಮರಣ ಸಂಚಿಕೆ ಸಮಿತಿ ಅವರು ಸಭೆ ನಡೆಸಿ ಉತ್ತಮ ಸಾಹಿತಿಯನ್ನು ಆಯ್ಕೆ ಮಾಡುವಂತೆ ತಿಳಿಸಿದರು.

ಬೆಲ್ಲದಾರತಿ ಸ್ಮರಣ ಸಂಚಿಕೆಯನ್ನು ೨೦೦೦ ಪ್ರತಿ ಮುದ್ರಿಸಲಾಗಿದ್ದು, ಅದರಲ್ಲಿ ೮೦೦ ಪ್ರತಿಯನ್ನು ಪಟ್ಟಿ ಮಾಡಿ ಗೌರವಪೂರ್ವಕವಾಗಿ ಉಚಿತವಾಗಿ ಸ್ವಾಗತ ಸಮಿತಿ ಸದಸ್ಯರು ಸೇರಿದಂತೆ ಗಣ್ಯರಿಗೆ ನೀಡಲಾಗುವುದು ಎಂದರು.

ಕಾರ್ಯಕ್ರಮಕ್ಕೆ ವೇದಿಕೆಯನ್ನು ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಬೇಕು, ಸಂಪಾದಕೀಯ ಮಂಡಳಿಯವರನ್ಬು ಗೌರವಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿಯನ್ನು ಬಿಂಬಿಸುವ ರೀತಿ ವೇದಿಕೆ ಸಿದ್ಧವಾಗಬೇಕು. ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಕನ್ನಡ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲೆಯ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಿ ಎಂದರು.

ಸಭೆಯಲ್ಲಿ ಸಾಹಿತಿಗಳಾದ ಡಾ.ಮೀರಾ ಶಿವಲಿಂಗಯ್ಯ, ಡಾ.ಚಿಕ್ಕಮರಳಿ ಬೋರೇಗೌಡ, ಎಂ.ವಿ.ಧರಣೇಂದ್ರಯ್ಯ, ಮೃತ್ಯುಂಜಯ, ಪ್ರದೀಪ್‌ಕುಮಾರ್ ಹೆಬ್ರಿ, ಮಾ.ರಾಮಕೃಷ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ, ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಇತರರಿದ್ದರು.