ಸಾರಾಂಶ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದಿಂದ ಜ. 4 ಮತ್ತು 5ರಂದು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ "ಬಳ್ಳಾರಿ ಜಿಲ್ಲಾ ಕಲಾವೈಭವ-2025 " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹಾಗೂ ಕಾರ್ಯದರ್ಶಿ ಮುದ್ದಟನೂರು ಎಚ್. ತಿಪ್ಪೇಸ್ವಾಮಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಕಲಾವೈಭವ ಆಯೋಜಿಸಲಾಗಿದೆ. ಜಿಲ್ಲೆಯ ಕಲಾ ಪ್ರಕಾರಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.ಎರಡು ದಿನಗಳ ಕಾರ್ಯಕ್ರಮದಲ್ಲಿ ನಾಟಕ, ಬಯಲಾಟಗಳ ಪ್ರದರ್ಶನ, ಕವಿ -ಕಾವ್ಯ -ಕುಂಚ -ಗಾಯನ, ವಚನ ಗಾಯನ, ಸುಗಮ ಸಂಗೀತ, ದಾಸವಾಣಿ, ಜನಪದಗಾಯನ, ವೀಣಾವಾದನ, ಕೊಳಲುವಾದನ, ರಂಗಗೀತೆ, ತಬಲಾವಾದನ, ಕೂಚುಪುಡಿ ನೃತ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಜಾದೂಪ್ರದರ್ಶನ ಹೀಗೆ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಲಾವೈಭವ ಕಾರ್ಯಕ್ರಮಕ್ಕೆ ಜ. 4ರಂದು ಬೆಳಗ್ಗೆ 11 ಗಂಟೆಗೆ ಸಂಸದ ಈ. ತುಕಾರಾಂ ಚಾಲನೆ ನೀಡಲಿದ್ದಾರೆ. ಎಮ್ಮಿಗನೂರಿನ ಹಂಪಿಸಾವಿರ ಮಠದ ಶ್ರೀ ವಾಮದೇವ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸುವರು. ಶಾಸಕ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸುವರು. ನಗರದ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸುವರು. ಬಳಿಕ ಶಿವರುದ್ರಪ್ಪ ಮತ್ತು ತಂಡದಿಂದ ಕೃಷ್ಣಾರ್ಜುನರ ಸಂವಾದ ಬಯಲಾಟ ಹಾಗೂ ಮಯೂರ ಕಲಾ ಸಂಘದಿಂದ ನಿರಂತರ ಜೀವನ ಪಯಣ ನಾಟಕ ಪ್ರದರ್ಶನಗೊಳ್ಳಲಿದೆ. ಸಮಾರಂಭ ಶುರುಮುನ್ನ ಕಲಾತಂಡಗಳ ಮೆರವಣಿಗೆ ಜರುಗಲಿದೆ. ಎತ್ತಿನಬಂಡಿ ಮೆರವಣಿಗೆ, ಛದ್ಮವೇಷ, ಬಯಲಾಟವೇಷಗಳು, ತಾಷಾರಾಂಡೋಲ್, ಹಕ್ಕಿಪಿಕ್ಕಿ ನೃತ್ಯ, ಹಲಗೆವಾದನ, ಕಹಳೆವಾದನ, ಚೌಡಕಿವಾದನ, ಹಲಗೆವಾದನ, ಕೋಲಾಟ, ಭಜನಪದ ಸೇರಿದಂತೆ ಅನೇಕ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಈ ಕಲಾ ತಂಡಗಳು ವೇದಿಕೆಯಲ್ಲಿ ಐದೈದು ನಿಮಿಷ ಪ್ರದರ್ಶನ ನೀಡಲಿವೆ. ಮೆರವಣಿಗೆಗೆ ಉದ್ಯಮಿ ಹಾಗೂ ಸಮಾಜಸೇವಕ ಮಸೀದಿಪುರ ಸಿದ್ದರಾಮನಗೌಡ ಚಾಲನೆ ನೀಡುವರು ಎಂದು ತಿಳಿಸಿದರು.ಜ. 5ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಜಂಗಮಹೊಸಹಳ್ಳಿ ಶಂಭುಲಿಂಗ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸುವರು. ಬಳಿಕ ಜಿಲಾನಿಬಾಷಾ ತಂಡ, ನಾಗಭೂಷಣ ತಂಡ, ಪುಷ್ಪಲತಾ, ಅಭಿಷೇಕ, ಶ್ರೀಜಾರೆಡ್ಡಿ ಮತ್ತು ತಂಡಗಳಿಂದ ಸಮೂಹ ನೃತ್ಯಗಳು ಜರುಗಲಿವೆ. ಬಳಿಕ ಜಾದೂ ಪ್ರದರ್ಶನ, ಬಾಡಿದ ಹೂಗುಗಳು ನಾಟಕ ಹಾಗೂ ರಕ್ತರಾತ್ರಿ ಪೌರಾಣಿಕ ನಾಟಕಗಳ ಪ್ರದರ್ಶನಗಳು ಜರುಗಲಿವೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಹಿರಿಯ ರಂಗಭೂಮಿ ಕಲಾವಿದೆ ವೀಣಾ ಆದೋನಿ, ಕಲಾವಿದರ ಸಂಘದ ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿ ವೀರೇಶ ದಳವಾಯಿ, ಎಂ. ವಿನೋದ್, ಮಂಜುನಾಥ ಗೋವಿಂದವಾಡ ಸುದ್ದಿಗೋಷ್ಠಿಯಲ್ಲಿದ್ದರು.