ಸಾರಾಂಶ
ಬಳ್ಳಾರಿ: ಇದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ. ಇಲ್ಲಿ ಯುವಕರು ನಾನಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಭ್ರಮದಿಂದಲೇ ಪಾಲ್ಗೊಳ್ಳಬೇಕಿತ್ತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಯುವಪಡೆಯಿಂದ ನಾನಾ ಕಲಾ ಪ್ರಕಾರಗಳು ಮೇಳೈಸಬೇಕಿತ್ತು. ಆದರೆ, ಇಲ್ಲಿ ಯುವಕರು ಬೆರಳೆಣಿಕೆಯಷ್ಟೇ ಭಾಗವಹಿಸಿದ್ದರು. ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಒಂದಷ್ಟು ಸ್ಪರ್ಧಿಗಳೇ ಪ್ರೇಕ್ಷಕರಾಗಿದ್ದರು!
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಜಿಲ್ಲೆಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಜಿಲ್ಲಾ ಮಟ್ಟದ ಯುವಜನೋತ್ಸವದ ಚಿತ್ರಣ ಇದು.ಕ್ರೀಡಾ ಇಲಾಖೆ ನಿರ್ಲಕ್ಷ್ಯತೆ ಹಾಗೂ ಯುವಜನರ ಪಾಲ್ಗೊಳ್ಳುವಿಕೆ ಕೊರತೆಯಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮವೊಂದು ನಿರ್ದಿಷ್ಟ ಉದ್ದೇಶದಿಂದ ವಿಮುಖವಾಯಿತು. ಯುವಜನೋತ್ಸವ ಹೆಸರಿನಲ್ಲಿ ಲಕ್ಷಾಂತರ ರು. ಸರ್ಕಾರದ ಹಣ ಹಾಳು ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಮೂಡಿತು.
ಸಮಾರಂಭಕ್ಕೆ ಚಾಲನೆ ನೀಡಿದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ ಚಿದಾನಂದಪ್ಪ, ಯುವಜನೋತ್ಸವದಲ್ಲಿ ಯುವಕರೇ ಇಲ್ಲದಿದ್ದರೆ ಇದೆಂತಹ ಉತ್ಸವ ಎಂದು ಪ್ರಶ್ನಿಸಿದರು.ಕ್ರೀಡಾ ಇಲಾಖೆಯ ನಡೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಚಿದಾನಂದಪ್ಪ, ಕಾರ್ಯಕ್ರಮದಲ್ಲಿ ಸಾಕಷ್ಟು ಲೋಪಗಳು ಕಂಡು ಬಂದವು. ಈ ರೀತಿಯಾಗದಂತೆ ಇಲಾಖೆಯ ಅಧಿಕಾರಿಗಳು ಗಮನ ಹರಿಸುವಂತಾಗಬೇಕು ಎಂದು ಹೇಳಿದರು. ಅತಿಥಿಯಾಗಿದ್ದ ವೀರಶೈವ ಕಾಲೇಜಿನ ಪ್ರಾಧ್ಯಾಪಕ ಶ್ಯಾಮ್ ಮೂರ್ತಿ ಭಾರತದಲ್ಲಿ ಯುವಜನರ ಪಾತ್ರ ಕುರಿತು ತಿಳಿಸಿ, ಉತ್ಸವದಲ್ಲಿ ಯುವಕರ ಪಾಲ್ಗೊಳ್ಳುವಿಕೆಯ ಕೊರತೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಿಐಟಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರವೀಂದ್ರ ಹಿರೇಮಠ, ಎಂಪಿಎಂ ವೀರೇಶಸ್ವಾಮಿ ಮಾತನಾಡಿದರು.
ಕೊರ್ಲಗುಂದಿ ಬಸವನಗೌಡ, ಪುಷ್ಪಾ ಚಂದ್ರಶೇಖರ್ ಇದ್ದರು. ಅಧ್ಯಕ್ಷತೆ ವಹಿಸಿದ್ದ ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ ಗೀಗೀ ಪದ ಹಾಡಿದರು.ಪ್ರಾಸ್ತಾವಿಕ ಮಾತನಾಡಿದ ಯುವಜನ ಮತ್ತು ಕ್ರೀಡಾ ಇಲಾಖೆಯ ಕೆ.ಗ್ರೇಸಿ, ಯುವಜನರನ್ನು ಪ್ರೋತ್ಸಾಹಿಸಲು ಯುವಜನ ಉತ್ಸವಗಳನ್ನು ಇಲಾಖೆ ಹಮ್ಮಿಕೊಂಡು ಬರುತ್ತಿದೆ ಎಂದು ಹೇಳಿದರು.
ಯಾರೂ ಬರಲಿಲ್ಲ!ಯುವಜನೋತ್ಸವ ಉದ್ಘಾಟಿಸಬೇಕಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಜಿಲ್ಲೆಯ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಬುಡಾ ಅಧ್ಯಕ್ಷ, ಮೇಯರ್, ಉಪ ಮೇಯರ್ ಸೇರಿದಂತೆ ಆಹ್ವಾನ ಪತ್ರಿಕೆಯಲ್ಲಿದ್ದ 16 ಜನರಲ್ಲಿ ಯಾರೊಬ್ಬರೂ ಬಂದಿರಲಿಲ್ಲ.
ಜಿಲ್ಲಾ ಗ್ಯಾರಂಟಿ ಯೊಜನೆಗಳ ಅನುಷ್ಠಾನದ ಅಧ್ಯಕ್ಷರು ಸಮಾರಂಭಕ್ಕೆ ಚಾಲನೆ ನೀಡಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ತೀರ್ಪುಗಾರರೇ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಗಳಾದರು. ಉದ್ಘಾಟನೆ ಬಳಿಕ ಪ್ರೇಕ್ಷಕರ ಕೊರತೆ ನೀಗಿಸಲು ಕಾರ್ಯಕ್ರಮ ಆಯೋಜಕರು ಸ್ಥಳೀಯ ಶಾಲೆಗಳಿಗೆ ತೆರಳಿ ಮಕ್ಕಳನ್ನು ಕಳಿಸಿಕೊಡುವಂತೆ ಮನವಿ ಮಾಡಿಕೊಂಡರು. ಆದಾಗ್ಯೂ ಪ್ರೇಕ್ಷಕರ ಸಮಸ್ಯೆ ನೀಗಲಿಲ್ಲ.ಜಾನಪದ ಕುಣಿತ, ಡೊಳ್ಳು ಕುಣಿತದ ಜೋರಾದ ಶಬ್ದದ ನಡುವೆಯೇ ರಂಗಮಂದಿರದ ಒಂದು ಕಡೆ ಯುವಕರು ನೆಲದಲ್ಲಿಯೇ ಕುಳಿತು ಕವಿತೆ ಹಾಗೂ ಕಥೆ ಬರೆದದ್ದು ಗಮನ ಸೆಳೆಯಿತು. ಮಧ್ಯಾಹ್ನ 1 ಗಂಟೆ ಬಳಿಕವೂ ಜಿಲ್ಲೆಯಿಂದ ಎಷ್ಟು ಜನರು ಯುವಕರು ಭಾಗವಹಿಸಿದ್ದಾರೆ ಎಂಬ ಮಾಹಿತಿ ಕ್ರೀಡಾ ಇಲಾಖೆ ಸಿಬ್ಬಂದಿ ಬಳಿ ಇರಲಿಲ್ಲ.
ಉತ್ಸವಕ್ಕೆ ಬಂದವರೆಷ್ಟು?ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದಗೀತೆ, ಕಥೆ ಬರೆಯುವುದು, ಚಿತ್ರಕಲೆ, ಭಾಷಣ ಕವಿತೆ ರಚನೆ, ವಿಜ್ಞಾನ ಮೇಳಗಳ ಸ್ಪರ್ಧೆಗಳಿದ್ದವು. ಜಾನಪದ ನೃತ್ಯಕ್ಕೆ 4 ತಂಡಗಳು, ಜಾನಪದಗೀತೆ- 6 ತಂಡಗಳು, ಚಿತ್ರಕಲೆ- 5 ಜನರು, ಕವಿತೆ ರಚನೆಗೆ 10, ಕಥೆ ರಚನೆಗೆ 15, ವಿಜ್ಞಾನ ಮೇಳಕ್ಕೆ 3 ತಂಡಗಳು ಹಾಗೂ ಭಾಷಣ ಸ್ಪರ್ಧೆಗೆ 6 ಯುವಕರಷ್ಟೇ ಭಾಗವಹಿಸಿದ್ದರು. ಗಮನಾರ್ಹ ಸಂಗತಿ ಎಂದರೆ ಸ್ಪರ್ಧಿಯಲ್ಲಿ ಭಾಗವಹಿಸಿದ್ದ ಬಹುತೇಕರು ಬಳ್ಳಾರಿ ನಗರದ ಯುವಕರಾಗಿದ್ದರು.
ನಾನು ಊರಲ್ಲಿ ಇಲ್ಲ. ಟ್ರೈನಿಂಗ್‌ನಲ್ಲಿ ಇದ್ದೇನೆ. ಬಳ್ಳಾರಿಗೆ ಬಂದ ಬಳಿಕ ಯುವಜನೋತ್ಸವ ಕಾರ್ಯಕ್ರಮ ಕುರಿತು ಮಾಹಿತಿ ತರಿಸಿಕೊಳ್ಳುವೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್.ಜಿಲ್ಲಾ ಯುವಜನೋತ್ಸವದಲ್ಲಿ ಯುವಕರೇ ಇರಲಿಲ್ಲ. ನಮಗೂ ಬೇಸರ ತಂದಿತು. ಇಲಾಖೆಯ ಅಧಿಕಾರಿಗಳು ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕಿತ್ತು ಎನ್ನುತ್ತಾರೆ ಯುವಜನೋತ್ಸವದ ತೀರ್ಪುಗಾರ ಯಲ್ಲನಗೌಡ ಶಂಕರಬಂಡೆ.ತೀರ್ಪುಗಾರರಾಗಿ ವೀರಶೈವ ಕಾಲೇಜಿನ ಪ್ರಾಧ್ಯಾಪಕ ಶ್ಯಾಮ್ ಮೂರ್ತಿ, ಎ.ಎಂ.ಪಿ. ವೀರೇಶಸ್ವಾಮಿ, ಎಸ್.ಎಂ.ಹುಲುಗಪ್ಪ, ಡಾ.ವೆಂಕನಗೌಡ, ಚನ್ನತೀರ, ಯಲ್ಲನಗೌಡ ಶಂಕರಬಂಡೆ, ಡಾ.ಶಕೀಲಾ, ಜಡೇಶ ಎಮ್ಮಿಗನೂರು, ಆರ್.ಪಿ.ಮಂಜುನಾಥ ಹಾಗೂ ಅಣ್ಣಾಜಿ ಕೃಷ್ಣಾರೆಡ್ಡಿ ಭಾಗವಹಿಸಿದ್ದರು.
;Resize=(128,128))
;Resize=(128,128))