ಬಳ್ಳಾರಿ ಜೀನ್ಸ್ ಸಿದ್ಧ ಉಡುಪು ಉದ್ಯಮಕ್ಕೂ ಬರದ ಬರೆ

| Published : Nov 04 2023, 12:32 AM IST / Updated: Apr 04 2024, 06:36 AM IST

ಬಳ್ಳಾರಿ ಜೀನ್ಸ್ ಸಿದ್ಧ ಉಡುಪು ಉದ್ಯಮಕ್ಕೂ ಬರದ ಬರೆ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಇಲ್ಲಿನ ಜೀನ್ಸ್ ಹಾಗೂ ಸಿದ್ಧ ಉಡುಪು ಉದ್ಯಮ ಭಾಗಶಃ ನೆಲಕಚ್ಚಿದೆ.

ಕೆ.ಎಂ. ಮಂಜುನಾಥ್

 ಬಳ್ಳಾರಿ :  ವಾರ್ಷಿಕ ಕೋಟ್ಯಂತರ ರು. ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ "ಬಳ್ಳಾರಿ ಜೀನ್ಸ್ " ಹಾಗೂ "ಸಿದ್ಧ ಉಡುಪು " ಉದ್ಯಮಕ್ಕೂ ಈ ಬಾರಿ ಬರದ ಛಾಯೆ ಆವರಿಸಿದೆ.

ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಇಲ್ಲಿನ ಜೀನ್ಸ್ ಹಾಗೂ ಸಿದ್ಧ ಉಡುಪು ಉದ್ಯಮ ಭಾಗಶಃ ನೆಲಕಚ್ಚಿದೆ. ಈ ಬೆಳವಣಿಗೆ ಉಡುಪು ಉದ್ಯಮಕ್ಕಷ್ಟೇ ಅಲ್ಲ; ಇದೇ ವಲಯವನ್ನು ಆಶ್ರಯಿಸಿರುವ ಸಾವಿರಾರು ಕಾರ್ಮಿಕರ ಬದುಕಿಗೂ ಪೆಟ್ಟು ನೀಡಿದೆ. ಈ ಬೆಳವಣಿಗೆ ಸಗಟು ವ್ಯಾಪಾರಕ್ಕಷ್ಟೇ ಅಲ್ಲ; ರಿಟೇಲ್ ವ್ಯಾಪಾರಸ್ಥರಿಗೂ ನುಂಗಲಾರದ ತುತ್ತಾಗಿದೆ.

ದಸರಾ ಹಾಗೂ ದೀಪಾವಳಿ ಮುನ್ನ ಸದಾ ಗಿಜಿಗುಡುತ್ತಿದ್ದ ನಗರದ ಜೀನ್ಸ್ ಹಾಗೂ ಸಿದ್ಧ ಉಡುಪುಗಳ ಅಂಗಡಿಗಳು ಈಗ ಬಿಕೋ ಎನ್ನುತ್ತಿವೆ. ದಸರಾ ಹಬ್ಬಕ್ಕೆ ವ್ಯಾಪಾರ ಕೈ ಕೊಟ್ಟಿತು. ದೀಪಾವಳಿ ಹಬ್ಬಕ್ಕೂ ವ್ಯಾಪಾರವಾಗುತ್ತದೆ ಎಂಬ ಯಾವುದೇ ನಂಬಿಕೆಯಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜೀನ್ಸ್ ಉದ್ಯಮದಲ್ಲಾದ ಬೆಳವಣಿಗೆ:

ದೇಶದಲ್ಲಿಯೇ ಗಮನ ಸೆಳೆದಿರುವ ಬಳ್ಳಾರಿ ಜೀನ್ಸ್ ಉದ್ಯಮ ಹಾಗೂ ಬ್ರಿಟೀಷ್ ಕಾಲದಿಂದಲೂ ಹೆಚ್ಚು ಖ್ಯಾತಿ ಹೊಂದಿರುವ ಸಿದ್ಧ ಉಡುಪು ಉದ್ಯಮ ವಾರ್ಷಿಕ ನೂರಾರು ಕೋಟಿ ರು. ವಹಿವಾಟು ನಡೆಸುತ್ತದೆ. ಪ್ರಮುಖವಾಗಿ ಬಳ್ಳಾರಿ ಜೀನ್ಸ್‌ ಉಡುಪುಗಳು ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚು ರಫ್ತು ಮಾಡುತ್ತದೆ. ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಬಳ್ಳಾರಿಯ ಜೀನ್ಸ್ ಹಾಗೂ ಸಿದ್ಧ ಉಡುಪುಗಳು ರಫ್ತಾಗುತ್ತವೆ. ಆದರೆ, ಈ ಬಾರಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲೂ ಬರದ ಛಾಯೆ ಆವರಿಸಿರುವುದರಿಂದ ಬಳ್ಳಾರಿಯ ಸಿದ್ಧ ಉಡುಪುಗಳಿಗೆ ಬೇಡಿಕೆಯಿಲ್ಲದಂತಾಗಿದೆ.

ಕೊರೋನಾ ಬಳಿಕ ಜಿಲ್ಲೆಯ ಜೀನ್ಸ್ ಹಾಗೂ ಸಿದ್ಧ ಉಡುಪು ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ, ಕಳೆದ ವರ್ಷದಿಂದ ವ್ಯಾಪಾರ, ವಹಿವಾಟು ಕುಸಿತ ಕಂಡಿದೆ. ಈ ಬಾರಿಯಂತೂ ವಿವಿಧ ರಾಜ್ಯಗಳ ರಫ್ತಿನ ಪ್ರಮಾಣ ತೀವ್ರ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಮಾಲ್ ಕೊಟ್ರೆ ದುಡ್ಡು ಬರಲ್ಲ:

ಬಳ್ಳಾರಿಯ ಜೀನ್ಸ್ ಉಡುಪುಗಳು ಹಾಗೂ ಸಿದ್ಧ ಉಡುಪುಗಳಿಗೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ, ಈ ಬಾರಿ ಅಲ್ಲಿಂದಲೇ ನಮಗೆ ಬೇಡಿಕೆ ಬಂದಿಲ್ಲ. ಈ ಹಿಂದೆ ದಸರಾ ಹಾಗೂ ದೀಪಾವಳಿ ಮುನ್ನವೇ ಸಾಕಷ್ಟು ಬೇಡಿಕೆ ಇರುತ್ತಿತ್ತು.ಈ ಬಾರಿ ನಾವಾಗಿ ಕೇಳಿದರೂ ಆ ರಾಜ್ಯಗಳ ವ್ಯಾಪಾರಿಗಳು ಸ್ಪಂದಿಸುತ್ತಿಲ್ಲ. ಬರವಿದೆ, ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಒಂದು ವೇಳೆ ನಾವು ಒತ್ತಾಯ ಮಾಡಿ ಮಾಲ್ ಕಳಿಸಿಕೊಟ್ಟರೆ, ಬೇಗ ಹಣ ನೀಡುವುದಿಲ್ಲ. ಬಾಕಿ ಹಣ ನೀಡಲು ಆರೇಳು ತಿಂಗಳು ಕಾಯಬೇಕಾಗುತ್ತದೆ. ಅವರಿಂದಲೇ ಬೇಡಿಕೆ ಬಂದರೆ ಮುಂಗಡ ಹಣ ನೀಡಿ ಸರಕುಗಳನ್ನು ಒಯ್ಯುತ್ತಾರೆ. ಈ ಬಾರಿ ಆವರಿಸಿರುವ ಬರ, ಇಡೀ ಉದ್ಯಮವೇ ಅಲುಗಾಡುವಂತೆ ಮಾಡಿದೆ ಎನ್ನುತ್ತಾರೆ ನಗರದ ಜೀನ್ಸ್ ಉದ್ಯಮಿ ಪೊಲ್ಯಾಕ್ಸ್ ಮಲ್ಲಿಕಾರ್ಜುನ ಹಾಗೂ ಸಿದ್ಧ ಉಡುಪು ವ್ಯಾಪಾರಿ ರಾಹುಲ್.

ಬಳ್ಳಾರಿ ಜೀನ್ಸ್‌ಗೆ ಭಾರತದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶದಲ್ಲೂ ಬೇಡಿಕೆಯಿದೆ. ಆದರೆ, ಈ ಬಾರಿ ಎದುರಾಗಿರುವ ಬರ ಇಡೀ ಸಿದ್ಧ ಉಡುಪು ಉದ್ಯಮ ತತ್ತರಿಸುವಂತೆ ಮಾಡಿದ್ದು, ಮುಂದಿನ ವರ್ಷ ಹೀಗೆಯೇ ಮುಂದುವರಿದರೆ ಬೇರೆ ಉದ್ಯಮಗಳತ್ತ ವಾಲುವುದು ಅನಿವಾರ್ಯವಾಗುತ್ತದೆ ಎಂದು ವ್ಯಾಪಾರಿಗಳು ಹಾಗೂ ಉದ್ಯಮಿಗಳು ಆತಂಕ ವ್ಯಕ್ತಪಡಿಸುತ್ತಾರೆ. 

ಸ್ಪಂದನೆ ಇಲ್ಲ:

ಈ ಬಾರಿ ಎದುರಾಗಿರುವ ಬರದಿಂದ ಜೀನ್ಸ್ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ದಸರಾ ಹಾಗೂ ದೀಪಾವಳಿಗೆ ಈ ಹಿಂದೆ ದಕ್ಷಿಣ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ, ಈ ಬಾರಿ ಅಲ್ಲಿನ ವ್ಯಾಪಾರಿಗಳಿಂದ ಸ್ಪಂದನೆ ಇಲ್ಲ ಎನ್ನುತ್ತಾರೆ ಜೀನ್ಸ್ ಉದ್ಯಮಿ ಪೊಲ್ಯಾಕ್ಸ್‌ ಮಲ್ಲಿಕಾರ್ಜುನ.

ಬರದಿಂದ ಸಮಸ್ಯೆ: ದಸರಾ ಹಬ್ಬಕ್ಕೆ ವ್ಯಾಪಾರ ಆಗಲಿಲ್ಲ. ದೀಪಾವಳಿ ಹಬ್ಬಕ್ಕೂ ನಿರೀಕ್ಷೆಯಂತೆ ವ್ಯಾಪಾರ ನಡೆಯುವ ವಿಶ್ವಾಸವಿಲ್ಲ. ಮಳೆ ಬಂದರೆ ಬೆಳೆ ಬರುತ್ತದೆ. ರೈತರು ನಗರ ಪ್ರದೇಶಕ್ಕೆ ಬಂದು ವ್ಯಾಪಾರ ಮಾಡುತ್ತಾರೆ. ಬರದಿಂದ ಸಾಕಷ್ಟು ಸಮಸ್ಯೆಯಾಗಿರುವುದು ನಿಜ ಎನ್ನುತ್ತಾರೆ ಬಳ್ಳಾರಿಯ ಸಿದ್ಧ ಉಡುಪು ವ್ಯಾಪಾರಿ ವಿಜಯ್ ಕಾಂತ್.