ಬಳ್ಳಾರಿ: ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಸೋಮವಾರ ಮಹಾನಗರ ಪಾಲಿಕೆಯ 2026-27ನೇ ಸಾಲಿನ ₹264 ಕೋಟಿ ವೆಚ್ಚದ ಆಯವ್ಯಯ ಮುಂಗಡಪತ್ರವನ್ನು ಮೇಯರ್ ಪಿ.ಗಾದೆಪ್ಪ ಮಂಡಿಸಿದರು.
ಮುಂಬರುವ ಹಣಕಾಸು ವರ್ಷದಲ್ಲಿ ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಕೋನವನ್ನಿಟ್ಟುಕೊಂಡು ಹಣಕಾಸಿನ ವಿವಿಧ ಮೂಲಗಳಲ್ಲಿ ಗುರುತಿಸಿಕೊಂಡು ಪಾಲಿಕೆಯ ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡಿಸುತ್ತಿದ್ದು, ಬಜೆಟ್‌ನಲ್ಲಿ ಘೋಷಿಸಲಾದ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಶ್ರಮಿಸಲಾಗುವುದು ಎಂದರು.ಈ ಬಾರಿಯ ಬಜೆಟ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಾಲಿಕೆಯ ವಂತಿಕೆಯಾಗಿ
₹1 ಕೋಟಿ ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿರುವ 39 ವಾರ್ಡ್ ಗಳ ಸದಸ್ಯರಿಗೆ ಕುಡಿವ ನೀರಿನ ತುರ್ತು ಸಂದರ್ಭಗಳಿಗೆ ತಲಾ ₹3 ಲಕ್ಷದಂತೆ ₹1.20 ಕೋಟಿ ಅನುದಾನ ಮೀಸರಿಸಲಾಗಿದೆ. ಬಳ್ಳಾರಿ ಉತ್ಸವಕ್ಕೆ ₹2 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಮಕ್ಕಳ ಪ್ರತಿಭಾಕಾರಂಜಿಯ ಪ್ರೋತ್ಸಾಹಧನವಾಗಿ ₹5 ಲಕ್ಷ, ಪಾಲಿಕೆ ವ್ಯಾಪ್ತಿ ಕಾರ್ಯ ನಿರ್ವಹಿಸುವ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳ ಯೋಗಕ್ಷೇಮ ನಿಧಿಗೆ ₹25 ಲಕ್ಷ, ಮಹನೀಯರ ಜಯಂತಿಗಳ ಆಚರಣೆಗೆ ₹12 ಲಕ್ಷ, ಪಾಲಿಕೆಯ ನೌಕರರ ಸಂಘದ ಭವನ ನಿರ್ವಹಣೆಗೆ ₹25 ಲಕ್ಷ, ಬೀದಿನಾಯಿಗಳ ಆಶ್ರಯತಾಣಗಳ ನಿರ್ಮಾಣಕ್ಕೆ ₹1.55 ಕೋಟಿ, ಬಿಡಾಡಿ ದನಗಳ ಸ್ಥಳಾಂತರಕ್ಕೆ ₹15 ಲಕ್ಷ, ನಗರದ ಉದ್ಯಾನಗಳ ಅಭಿವೃದ್ಧಿಗೆ ₹25 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ ಎಂದರು.ಯುಜಿಡಿ ಬಳಕೆದಾರರ ಶುಲ್ಕದ ಸಂಗ್ರಹಣೆ ಹೆಚ್ಚಿಸಲು, ಪಾಲಿಕೆಯ ಆದಾಯದ ಮೂಲ ದ್ವಿಗುಣಗೊಳಿಸಲು ಅಮೃತಮಿತ್ರ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಕಮಿಷನ್ ಆಧಾರದಲ್ಲಿ ನೇಮಿಸಿಕೊಂಡು ₹3.56 ಕೋಟಿ ಗುರಿ ಮುಟ್ಟಲು ಯೋಚಿಸಲಾಗಿದೆ. ಪ್ರಾಥಮಿಕ ಹಂತವಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ವಲಯ-1ರಲ್ಲಿ ಬರುವ ಆಸ್ತಿಗಳ ನಿಖರ ಮಾಹಿತಿ ಪಡೆಯಲು ಡ್ರೋನ್ ಗಳ ಮೂಲಕ ಆಸ್ತಿ ಸರ್ವೆ ನಡೆಸಲಾಗುವುದು. ಇದಕ್ಕಾಗಿ ₹1.50 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ ಹಾಗೂ ದುರಸ್ತಿಗಾಗಿ ₹50 ಲಕ್ಷ ಸಾಮಾನ್ಯ ನಿಧಿಯಲ್ಲಿ ಕಾಯ್ದಿರಿಸಲಾಗಿದೆ. ಈ ಯೋಜನೆಯಿಂದ ಬಳ್ಳಾರಿ ನಗರ ಗುಂಡಿಮುಕ್ತಗೊಳ್ಳುವ ವಿಶ್ವಾಸವಿದೆ. ಪಾದಚಾರಿ ರಸ್ತೆ ನಿರ್ಮಾಣಕ್ಕೆ ₹75 ಲಕ್ಷ ಕಾಯ್ದಿರಿಸಲಾಗಿದೆ. ರಸ್ತೆ ಬದಿ ಚರಂಡಿ ದುರಸ್ತಿ, ನಿರ್ವಹಣೆ, ಅಭಿವೃದ್ಧಿಗೆ ₹50 ಲಕ್ಷ ಕಾಯ್ದಿರಿಸಲಾಗಿದೆ. ಪೌರ ಕಾರ್ಮಿಕರ ಬೆಳಗಿನ ಉಪಹಾರಕ್ಕೆ ₹1.50 ಕೋಟಿ, ಕಾರ್ಮಿಕರ ಸುರಕ್ಷಾಸಾಧನ, ಆರೋಗ್ಯ ತಪಾಸಣೆ, ಸಲಕರಣೆಗಳಿಗೆ ₹80 ಲಕ್ಷ, ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದಾಗ ಪರಿಹಾರಕ್ಕೆ ₹25 ಲಕ್ಷ ಕಾಯ್ದಿರಿಸಲಾಗಿದೆ. ನಗರ ನೀರು ಸರಬರಾಜು, ಒಳಚರಂಡಿ ನಿರ್ವಹಣೆಗೆ ₹25 ಲಕ್ಷ, ನೀರು ಶುದ್ಧೀಕರಣಕ್ಕಾಗಿ ₹1 ಕೋಟಿ, ಸ್ಮಶಾನ ಅಭಿವೃದ್ಧಿಗೆ ₹1 ಕೋಟಿ, ಶೌಚಾಲಯ ನಿರ್ವಹಣೆಗೆ ₹50 ಲಕ್ಷ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹಕ್ಕೆ ₹25 ಲಕ್ಷ, ಪುನರ್ವಸತಿ ಕೇಂದ್ರಗಳ ನಿರ್ವಹಣೆಗೆ ₹36 ಲಕ್ಷ, ಪರಿಶಿಷ್ಟರು ಹಾಗೂ ಇತರೆ ಬಡಜನರ ಕಲ್ಯಾಣಕ್ಕಾಗಿ ₹2.42 ಕೋಟಿ, ರಸ್ತೆಗಳಿಗೆ ನಾಮಫಲಕ ಅಳವಡಿಕೆಗೆ ₹25 ಲಕ್ಷ ಮೀಸಲಿರಿಸಲಾಗುತ್ತಿದೆ. 16ನೇ ಹಣಕಾಸು ಯೋಜನೆಯಡಿ ₹22 ಕೋಟಿ ಅನುದಾನ, ಅಮೃತ್ ಯೋಜನೆಯಡಿ ₹8.93 ಅನುದಾನ ನಿರೀಕ್ಷಿಸಲಾಗುತ್ತಿದೆ. 2026-27ನೇ ಸಾಲಿಗೆ ₹4.57 ಕೋಟಿ ಕೊರತೆ ಆಯ-ವ್ಯಯ ಮಂಡಿಸುತ್ತಿದ್ದೇನೆ ಎಂದು ಮೇಯರ್ ಪಿ.ಗಾದೆಪ್ಪ ತಿಳಿಸಿದರು.
ಬಜೆಟ್‌ನ್ನು ಸ್ವಾಗತಿಸಿದ ಆಡಳಿತಾರೂಢ, ಪ್ರತಿಪಕ್ಷದ ಸದಸ್ಯರು ಉದ್ಯಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ತೆರಿಗೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಕುಬೇರ ಬಜೆಟ್ ಪ್ರಸ್ತಾಪಿಸಿದರು. ಉಪ ಮೇಯರ್ ಮುಬೀನಾಬಿ, ಆಯುಕ್ತ ಪಿ.ಎಸ್. ಮಂಜುನಾಥ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪೇರಂ ವಿವೇಕ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಕೆ.ಹೊನ್ನಪ್ಪ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಹನುಮಂತಪ್ಪ ಇದ್ದರು.