ಬಳ್ಳಾರಿ: ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿ ನಡೆದ ವಾಗ್ವಾದದ ವೇಳೆ ಮಹಾನಗರ ಪಾಲಿಕೆಯ ಸಹಾಯಕ ಸಿವಿಲ್ ಎಂಜಿನಿಯರ್ ಜಿ.ಎಂ. ವೀರೇಶ್ ಮೇಲೆ ಪಾಲಿಕೆ ಸದಸ್ಯ ಕುಬೇರ ಎಂಬುವರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಶಾಸಕ ನಾರಾ ಭರತ್ ರೆಡ್ಡಿ ವಾರ್ಡ್‌ಗಳನ್ನು ಭೇಟಿ ನೀಡುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಸದಸ್ಯ ಕುಬೇರ ಅವರು ವೀರೇಶ್ ಅವರನ್ನು ಥಳಿಸಿದ್ದಾರೆ. ಬಳಿಕ ವೀರೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಇದೇ ವೇಳೆ ತಮ್ಮ ಮೇಲಿನ ಹಲ್ಲೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವೀರೇಶ್, ನಗರದ ಇನ್‌ಫ್ಯಾಂಟ್ರಿ ರಸ್ತೆಯ ಫುಟ್‌ಪಾತ್‌ನಲ್ಲಿ ತಾತ್ಕಾಲಿಕ ಶೆಡ್ ವೊಂದನ್ನು ನಿರ್ಮಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಪಾಲಿಕೆ ಸದಸ್ಯ ಕುಬೇರ ಎರಡು ದಿನಗಳ ಹಿಂದೆ ಸೂಚಿಸಿದ್ದರು. ಶೆಡ್ ಮಾಲೀಕರಿಗೆ ತೆರವಿಗೆ ಸೂಚಿಸಿದ್ದೆವು. ಇಂದು ಶಾಸಕರು ವಾರ್ಡ್‌ವಾರು ಭೇಟಿ ವೇಳೆ ಶೆಡ್ ತೆರವು ಕುರಿತು ಪ್ರಶ್ನಿಸಿದ ಕುಬೇರ, ಶೆಡ್ ತೆರವುಗೊಳಿಸಲು ವಿಳಂಬ ಮಾಡುತ್ತಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿದರು ಎಂದು ತಿಳಿಸಿದರು. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅವರು ವೀರೇಶ್ ಆರೋಗ್ಯ ವಿಚಾರಿಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ನಾರಾ ಭರತ್ ರೆಡ್ಡಿ, ಇಂದು ನಾನು ಸಲಾಂ ಬಳ್ಳಾರಿ ಹಾಗೂ ಕಿಟ್ ವಿತರಣೆ ಕಾರ್ಯಕ್ರಮದಲ್ಲಿದ್ದೆ. ಪಾಲಿಕೆ ಸದಸ್ಯ ಕುಬೇರ, ಸಹಾಯಕ ಎಂಜಿನಿಯರ್ ವೀರೇಶ್ ನಡುವಿನ ಮಾತಿನ ಚಕಮಕಿ ನಡೆದಿದ್ದು ಇಬ್ಬರನ್ನೂ ಸಮಾಧಾನ ಮಾಡಿ ಕಳಿಸಿಕೊಟ್ಟಿದ್ದೆ. ಬಳಿಕ ಹಲ್ಲೆಯಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ತೆರಳಿ ವೀರೇಶ್ ಆರೋಗ್ಯ ವಿಚಾರಿಸಿದ್ದೇನೆ. ವೀರೇಶ್ ದಕ್ಷ ಅಧಿಕಾರಿ. ಪಾಲಿಕೆ ಸದಸ್ಯ ಅಧಿಕಾರಿ ಮೇಲೆ ಹಲ್ಲೆ ನಡೆಸುವುದು ತಪ್ಪು ಎಂದರು.ಪಾಲಿಕೆ ಬಿಜೆಪಿ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಇಬ್ರಾಹಿಂಬಾಬು, ಗೋವಿಂದರಾಜುಲು, ಮಲ್ಲನಗೌಡ, ಪಾಲಿಕೆ ಸಿಬ್ಬಂದಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ವೀರೇಶ್ ಆರೋಗ್ಯ ವಿಚಾರಿಸಿದರು. ಹಲ್ಲೆ ಖಂಡಿಸಿ ಪಾಲಿಕೆ ಎದುರು ಪ್ರತಿಭಟಿಸಿದರು.
ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು ಮಾತನಾಡಿ, ವಾರ್ಡ್ ಸದಸ್ಯ ಕುಬೇರ ಸಹಾಯಕ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಕುಬೇರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕುಡಿವ ನೀರು ಸರಬರಾಜು, ಒಳಚರಂಡಿ ಸ್ವಚ್ಛತೆ, ಬೀದಿದೀಪ ನಿರ್ವಹಣೆಯಿಂದ ದೂರ ಉಳಿಯುತ್ತೇವೆ ಎಂದು ಎಚ್ಚರಿಸಿದರು.
ಪಾಲಿಕೆ ಸಹಾಯಕ ಎಂಜಿನಿಯರ್ ವೀರೇಶ್‌ಗೆ ಹಲ್ಲೆಯಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದೆ. ಸರ್ಕಾರಿ ನೌಕರರ ನೈತಿಕ ಸ್ಥೈರ್ಯ ಕುಂದಿಸುವ ಕೆಲಸವಿದು. ಸಿಬ್ಬಂದಿ ಕೊರತೆ ನಡುವೆ ಕೆಲಸ ಮಾಡುತ್ತಿರುವ ಅಧಿಕಾರಿಗಳ ಮೇಲೆ ದಾಳಿ ಸರಿಯಲ್ಲ. ಇದು ಅಮಾನವೀಯ ಕೃತ್ಯ ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ.