ಬಳ್ಳಾರಿ ವಿವಿಯಲ್ಲಿ ನಿಲ್ಲದ ಪ್ರಭಾರಿ ಕುಲಪತಿ- ಕುಲಸಚಿವರ ಮುಸುಕಿನ ಜಗಳ

| Published : Feb 09 2024, 01:48 AM IST

ಬಳ್ಳಾರಿ ವಿವಿಯಲ್ಲಿ ನಿಲ್ಲದ ಪ್ರಭಾರಿ ಕುಲಪತಿ- ಕುಲಸಚಿವರ ಮುಸುಕಿನ ಜಗಳ
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ಮತ್ತೆ ಆಡಳಿತ ಕುಲಸಚಿವರ ಸ್ಥಾನಕ್ಕೆ ಮಹಿಳಾ ಪ್ರೊಫೆಸರ್‌ವೊಬ್ಬರನ್ನು ನೇಮಿಸಿರುವುದು ವಿವಿಯಲ್ಲಿ ಮತ್ತೊಂದು ವಿವಾದಕ್ಕೆಡೆ ಮಾಡಿಕೊಟ್ಟಂತಾಗಿದೆ.

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಹಾಗೂ ಕುಲಸಚಿವರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಆಡಳಿತ ಕುಲಸಚಿವರ ಅಧಿಕಾರ ಕಸಿದು ಮಹಿಳಾ ಪ್ರೊಫೆಸರ್‌ವೊಬ್ಬರನ್ನು ಕುಲಪತಿಗಳು ನೇಮಕ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದಿಲ್ಲೊಂದು ವಿವಾದಗಳಿಗೆ ಸುದ್ದಿಯಾಗುತ್ತಿರುವ ಬಳ್ಳಾರಿ ವಿವಿಯಲ್ಲಾಗುತ್ತಿರುವ ಬೆಳವಣಿಗೆ ಶೈಕ್ಷಣಿಕ ವಲಯದಲ್ಲಿ ತೀವ್ರ ಮುಜುಗರಕ್ಕೀಡು ಮಾಡಿದೆ.ಆಗಿರುವುದೇನು?: ಈ ಮೊದಲು ಮೌಲ್ಯಮಾಪನ ಕುಲಸಚಿವರ ಹುದ್ದೆಗೆ ಬೇರೆಯೊಬ್ಬರನ್ನು ನೇಮಿಸಲು ಪ್ರಭಾರಿ ಕುಲಪತಿಗಳು ಮುಂದಾಗಿದ್ದು, ಈ ಸಂಬಂಧ ಉನ್ನತ ಶಿಕ್ಷಣ ಸಚಿವರಿಗೆ ಪತ್ರವನ್ನು ಸಹ ಬರೆದಿದ್ದರು. ಆದರೆ, ಶಿಕ್ಷಣ ಸಚಿವರಿಗೆ ಬರೆದ ಪತ್ರದಿಂದ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಆಡಳಿತ ಕುಲಸಚಿವರನ್ನು ಬದಲಾಯಿಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಅಧಿಕಾರವನ್ನು ಹಿಂಪಡೆದಿದ್ದರು. ಈ ಬೆಳವಣಿಗೆ ತೀವ್ರ ವಿವಾದಕ್ಕೀಡುಗುತ್ತಿದ್ದಂತೆ ಮತ್ತೆ ನೇಮಕ ಆದೇಶ ಹಿಂದಕ್ಕೆ ಪಡೆದರು. ಇದೀಗ ಮತ್ತೆ ಆಡಳಿತ ಕುಲಸಚಿವರ ಸ್ಥಾನಕ್ಕೆ ಮಹಿಳಾ ಪ್ರೊಫೆಸರ್‌ವೊಬ್ಬರನ್ನು ನೇಮಿಸಿರುವುದು ವಿವಿಯಲ್ಲಿ ಮತ್ತೊಂದು ವಿವಾದಕ್ಕೆಡೆ ಮಾಡಿಕೊಟ್ಟಂತಾಗಿದೆ.ರಾಜ್ಯಪಾಲರ ಆದೇಶದಂತೆ ವಿವಿಗೆ ಕಾಯಂ ಕುಲಪತಿ ನೇಮಕವಾಗುವವರೆಗೆ ಬಡ್ತಿ ಮತ್ತು ನೇಮಕಾತಿ ಸೇರಿದಂತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಬಿ.ಎಸ್‌. ಪ್ರಶಾಂತ್‌ ಕುಮಾರ್‌ ಅವರು ಜ. 11ರಂದು ವಿವಿಯ ಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ಇದರ ನಡುವೆಯೂ ಪ್ರಭಾರ ಕುಲಪತಿಗಳು ಆಡಳಿತ ಕುಲಸಚಿವರ ಅಧಿಕಾರವನ್ನು ಹಿಂಪಡೆದು ಆ ಸ್ಥಾನಕ್ಕೆ ಮತ್ತೊಬ್ಬರನ್ನು ನಾಮನಿರ್ದೇಶನ ಮಾಡಲು ಮುಂದಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.ನಿಯಮ ಉಲ್ಲಂಘಿಸಿಲ್ಲ: ಕಳೆದ ಮೂರು ತಿಂಗಳಿನಿಂದ ವಿವಿಯ ಹೊರಗುತ್ತಿಗೆ ನೌಕರರಿಗೆ ಸಂಬಳ ಮಾಡಿಲ್ಲ. ದಿನವೂ ಸುಳ್ಳು ನೆಪ ಹೇಳುತ್ತಿದ್ದಾರೆ. ವಿವಿಯ ಆಡಳಿತಾತ್ಮಕ ದೃಷ್ಟಿಯಿಂದ ಈ ನಿಲುವು ತೆಗೆದುಕೊಳ್ಳಲಾಗಿದೆ. ಸರ್ಕಾರದ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಬಳ್ಳಾರಿ, ವಿವಿಯ ಪ್ರಭಾರಿ ಕುಲಪತಿ ಪ್ರೊ. ಡಾ. ಅನಂತ್ ಎಲ್. ಝಂಡೇಕರ್ ತಿಳಿಸಿದರು.