ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಬಳ್ಳಾರಿ ಸನ್ಮಾರ್ಗ ಗೆಳಯರ ಬಳಗ ಮಕ್ಕಳಿಗೆ ಪಠ್ಯ ವಿಷಯ ಹಾಗೂ ಪರೀಕ್ಷಾ ಕೌಶಲ್ಯಗಳನ್ನು ತಿಳಿಸಿದರು.
ಕೊಪ್ಪಳ: ಕುಷ್ಟಗಿ ಪಟ್ಟಣದಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್, ಸಿವಿಸಿ ಸಂಸ್ಥೆಯಿಂದ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಬಳ್ಳಾರಿ ಸನ್ಮಾರ್ಗ ಗೆಳಯರ ಬಳಗ ಮಕ್ಕಳಿಗೆ ಪಠ್ಯ ವಿಷಯ ಹಾಗೂ ಪರೀಕ್ಷಾ ಕೌಶಲ್ಯಗಳನ್ನು ತಿಳಿಸಿದರು.
ಕಾರ್ಯಾಗಾರದುದ್ದಕ್ಕೂ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬುತ್ತ ಕಲಿಕಾ ವಿಷಯ ಮಂಡಿಸಿದರು. ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಪರೀಕ್ಷಾ ಕ್ರಮಗಳನ್ನು ಹಂತ-ಹಂತವಾಗಿ ತಿಳಿಸಿದರು. ಸಭಾಂಗಣದ ತುಂಬ ತುಂಬಿದ್ದ ಮಕ್ಕಳು ಏಕಚಿತ್ತರಾಗಿ ತಿಳಿಸುತ್ತಿದ್ದ ವಿಷಯಗಳನ್ನು ಅವಲೋಕಿಸುತ್ತಿದ್ದರು.ಪರೀಕ್ಷೆ ಉಳಿದಿರುವ ಬಾಕಿ ದಿನಗಳಲ್ಲಿ ಎಲ್ಲ ವಿಷಯ ಹೇಗೆ ಓದಬೇಕು. ಮನನ ಹೇಗೆ ಮಾಡಬೇಕು. ಕಠಿಣ ಎನಿಸಿರುವ ವಿಷಯಗಳ ಗ್ರಹಿಕೆಗೆ ಕ್ರಮಗಳಾವವು, ಪರೀಕ್ಷಾ ಕೊಠಡಿಗೆ ಕಾಲಿರಿಸಿದ ಕ್ಷಣದಿಂದ ಪರೀಕ್ಷೆ ಹೇಗೆ ಬರೆಯಬೇಕು. ಹೇಗೆ ಉತ್ಸಾಹದಿಂದ ಪ್ರಶ್ನೆಗಳನ್ನು ಅವಲೋಕನ ಮಾಡಿಕೊಂಡು ಉತ್ತರ ಬರೆಯಬೇಕು ಎಂದು ಮನದಟ್ಟು ಮಾಡಿದರು. ವಿಷಯಗಳ ಬಗ್ಗೆ ಮಾಡಿದ ಅವಲೋಕನ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿತು. ಮಕ್ಕಳ ಮನಸ್ಸಿಗೆ ತಲುಪುವಂತೆ ವಿಷಯವಾರು ಅಧ್ಯಯನ ಮಾಡುವ ರೀತಿ ತಿಳಿಸಿದರು.
ಉಳ್ಳವರ ಮಕ್ಕಳು ನಾನಾ ತರಬೇತಿಗೆ ಹೋಗಿ ಪರೀಕ್ಷೆಗೆ ಸಿದ್ದರಾಗುತ್ತಾರೆ. ಆದರೆ, ಗ್ರಾಮೀಣ ಪ್ರದೇಶದ ಮಕ್ಕಳು ಸಹ ಪರೀಕ್ಷೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಬೇಕು ಎಂಬುದನ್ನು ತಿಳಿಸಿಕೊಡಲಾಯಿತು.ಬಳ್ಳಾರಿ ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಕಪ್ಪಗಲ್ ವಿ. ಚಂದ್ರಶೇಖರ ಆಚಾರ್, ಇಂಗ್ಲೀಷ್ ಮತ್ತು ಗಣಿತ ವಿಷಯ ಭೋದನಕಾರ ಪುರುಷೋತ್ತಮ, ಕನ್ನಡ ವಿಷಯದ ಹರಿಪ್ರಸಾದ್, ವಿಜ್ಞಾನ ವಿಷಯದ ಸಿದ್ದಲಿಂಗೇಶ ಗದಗಿನ ಮಕ್ಕಳಿಗೆ ತರಬೇತಿ ನೀಡಿದರು.