ಬೆಳ್ಳೂರು: ಹುಲಿ ಘರ್ಜನೆ ಬೆನ್ನಲ್ಲೇ ಕೂಂಬಿಂಗ್ ಶುರು

| Published : Dec 11 2024, 12:45 AM IST

ಬೆಳ್ಳೂರು: ಹುಲಿ ಘರ್ಜನೆ ಬೆನ್ನಲ್ಲೇ ಕೂಂಬಿಂಗ್ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಹುದಿಕೇರಿ ಗ್ರಾ. ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಮತ್ತೆ ಹುಲಿಯ ಘರ್ಜನೆ ಶಬ್ದ ಗ್ರಾಮಸ್ಥರು ಕೇಳಿದ ಬೆನ್ನಲ್ಲೇ ಮಂಗಳವಾರದಿಂದ ಹೆಚ್ಚಿನ ಸಿಬ್ಬಂದಿಯೊಂದಿಗೆ ಹುಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಹುದಿಕೇರಿ ಗ್ರಾ. ಪಂ. ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಮತ್ತೆ ಹುಲಿಯ ಘರ್ಜನೆ ಶಬ್ದ ಗ್ರಾಮಸ್ಥರು ಕೇಳಿದ ಬೆನ್ನಲ್ಲೇ ಮಂಗಳವಾರದಿಂದ ಹೆಚ್ಚಿನ ಸಿಬ್ಬಂದಿಯೊಂದಿಗೆ ಹುಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ.

ನ.30ರಂದು ಗ್ರಾಮದ ಬೆಳೆಗಾರ ನೂರೆರ ರಮೇಶ್ ಅವರ ಹಸುವನ್ನು ಹುಲಿ ಬಲಿ ಪಡೆದಿತ್ತು. ನಂತರ ಡಿ.1ರಿಂದ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಸಂದರ್ಭ ಹುಲಿ ಸುಳಿವು ಪತ್ತೆ ಆಗಿರಲಿಲ್ಲ. ಆದರೆ ನಂತರ ಸುರಿದ ಮಳೆಯಿಂದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದೀಗ ಮಂಗಳವಾರ ಬೆಳಗ್ಗೆ ಬೆಳ್ಳೂರು ಗ್ರಾಮದಲ್ಲಿ ಹಾಗೂ ಸೋಮವಾರ ರಾತ್ರಿ ಹೈಸೊಡ್ಲೂರು ಗ್ರಾಮದಲ್ಲಿ ಹುಲಿಯ ಘರ್ಜನೆ ಗರ್ಜನೆಯನ್ನು ಗ್ರಾಮಸ್ಥರು ಹೇಳಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಇದೀಗ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ. ಸ್ಥಳದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಬೀಡು ಬಿಟ್ಟಿದ್ದು ಕಾರ್ಯಾಚರಣೆ ಆರಂಭವಾಗಿದೆ.

ಕಾರ್ಯಾಚರಣೆಯಲ್ಲಿ ಶ್ರೀಮಂಗಲ, ಪೊನ್ನಂಪೇಟೆ, ನಾಗರಹೊಳೆ, ಮಾಕುಟ್ಟ, ವಿರಾಜಪೇಟೆ ಅರಣ್ಯ ಇಲಾಖೆಯ 88 ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಹುಲಿಯ ಹೆಜ್ಜೆ ಗುರುತು ಬೆಳ್ಳೂರು ಗ್ರಾಮದ ಖಾಸಗಿ ಅರಣ್ಯದಲ್ಲಿ ಕಂಡುಬಂದಿದ್ದು ಈ ಸ್ಥಳದಲ್ಲಿ ಕಾಡು ಹಂದಿಯೊಂದನ್ನು ಹುಲಿ ಹಿಡಿದು ತಿಂದಿರುವ ಗುರುತು ಹಾಗೂ ಅಲ್ಲಿ ರಕ್ತದ ಗುರುತು ಕಂಡು ಬಂದಿದೆ.

ಈ ಕುರಿತು ಮಾಹಿತಿ ನೀಡಿದ ಸಂಕೇತ್‌ ಪೂವಯ್ಯ, ಈಗಾಗಲೇ ಹೆಚ್ಚಿನ ಸಿಬ್ಬಂದಿಯೊಂದಿಗೆ ಹುಲಿ ಕಾರ್ಯಾಚರಣೆ ವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ. ಹುಲಿ ಇರುವ ಜಾಗದ ಸುಳಿಗಾಗಿ ಕೂಂಬಿಂಗ್ ನಡೆಸಲಾಗುತ್ತಿದೆ. ಸುಳಿವು ದೊರೆತ ಕೂಡಲೇ ಹುಲಿಯನ್ನು ಅರವಳಿಕೆ ಗುಂಡು ಹಾರಿಸಿ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಕಾಫಿ ತೋಟದ ಒಳಗೆ ಸಾಕಾನೆ ಸಹಿತ ಕಾರ್ಯಚರಣೆಯಿಂದ ಬೆಳೆ ನಷ್ಟ ಉಂಟಾಗುವ ಹಿನ್ನಲೆ ಸಿಬ್ಬಂದಿಯ ಹಲವು ತಂಡ ಮಾಡಿ ಕೂಂಬಿಂಗ್ ನಡೆಸಲಾಗುತ್ತಿದೆ ಎಂದರು.

ಹುಲಿ ಖಾಸಗಿ ತೋಟದ ಅರಣ್ಯದಲ್ಲಿ ಇರುವ ಸುಳಿವು ದೊರೆತರೆ ಸಾಕಾನೆಗಳನ್ನು ಕೂಡಲೇ ಕರೆಸಿ ಹುಲಿಯನ್ನು ಅರಿವಳಿಕೆ ತಜ್ಞರ ಮೂಲಕ ಅರಿವಳಿಕೆ ಗುಂಡು ಹಾರಿಸಿ ಸೆರೆ ಹಿಡಿಯಲಾಗುವುದು. ಹುಲಿ ಸೆರೆಗೆ ಎಲ್ಲ ಅನುಮತಿ ಪತ್ರ ಕಾರ್ಯಾಚರಣೆ ತಂಡದ ಕೈಯಲ್ಲಿದೆ ಎಂದು ಹೇಳಿದರು.

ಬೋನು ಇರಿಸಲಾಗಿದೆ:

ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ಬೆಳ್ಳೂರು ಗ್ರಾಮದಲ್ಲಿ ಹಸುವನ್ನು ಹುಲಿ ಕೊಂದ ನಂತರ ಆ ಸ್ಥಳದಲ್ಲಿ ಜಾನುವಾರುವಿನ ಕಲೆ ಬರಹ ಇರಿಸಿ ಬೋನು ಇರಿಸಲಾಗಿದೆ. ಆದರೆ ಅಲ್ಲಿಗೆ ಹುಲಿ ಬಂದಿರುವ ಕುರುಹು ಇಲ್ಲ. ಆದರೆ ಕಳೆದ 10 ದಿನಗಳಿಂದ ಹುಲಿಯ ಸುಳಿವು ಸಿಕ್ಕಿರಲಿಲ್ಲ, ಆದರೆ ಇದೀಗ ಹುಲಿಯ ಘರ್ಜನೆ ಗ್ರಾಮಸ್ಥರು ಕೇಳಿದ ಬೆನ್ನಲ್ಲೇ ಹುಲಿ ಸುಳಿವು ಸಿಕ್ಕಿದರೆ ಅದನ್ನು ಸೆರೆ ಹಿಡಿಯಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಹುಲಿಯಿಂದ ಸ್ಥಳೀಯ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. 7 ಜನರಿರುವ 12 ತಂಡದಿಂದ ಕೂಂಬಿಂಗ್ ನಡೆಯುತ್ತಿದೆ,ಕೆಲವು ವರ್ಷಗಳಿಂದ ನಾಗರಹೊಳೆ ಮತ್ತು ಬ್ರಹ್ಮಗಿರಿ ಅರಣ್ಯದ ನಡುವಿನ ಗ್ರಾಮದಲ್ಲಿ ನುಸುಳುವ ಹುಲಿಗಳ ಮ್ಯಾಪಿಂಗ್ ತಯಾರಿಸಿದ್ದು, ಈ ಮಾಹಿತಿ ಕೂಂಬಿಂಗ್ ಅನುಕೂಲವಾಗಲಿದೆ ಎಂದು ತಿಳಿಸಿದರು.

ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಹುದಿಕೇರಿ ವಲಯ ಅಧ್ಯಕ್ಷ ಚಂಗುಲಂಡ ಸೂರಜ್, ಇಟ್ಟೀರ ಪೊನ್ನಣ್ಣ, ಭವೀನ್ ಕುಶಾಲಪ್ಪ, ರಮೇಶ್, ಮಂಡಂಗಡ ಯೋಗೇಶ್ ಮತ್ತಿತರರು ಹಾಜರಿದ್ದರು.