ಪ್ರಾಕೃತಿಕ ವಿಕೋಪ ಎದುರಿಸಲು ಬೆಳ್ತಂಗಡಿ ತಾಲೂಕು ಸಜ್ಜು

| Published : May 29 2024, 12:59 AM IST

ಸಾರಾಂಶ

ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆ ಹಾಗೂ ಗಾಳಿ ಬೀಸಿ ಅನಾಹುತ ಎದುರಾಗುತ್ತದೆ. ತುರ್ತು ಸಹಕಾರಕ್ಕೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ದಿನದ ೨೪ ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮಳೆಗಾಲ ಸಮೀಪಿಸುತ್ತಿದ್ದು ನದಿ ಸಮೀಪದ ಮನೆ ಮಂದಿ ಸುರಕ್ಷತೆಗೆ, ಶಾಲೆಗಳಿಗೆ ಸಾಗುವ ಮಕ್ಕಳ ಮೇಲೆ ನಿಗಾ ಸೇರಿದಂತೆ ಗ್ರಾಮ ಮಟ್ಟದಲ್ಲಿ ಸಂಭವನೀಯ ಅಪಘಾತವನ್ನು ತಪ್ಪಿಸಲು ಹಾಗೂ ಮುಂಜಾಗೃತೆಯಾಗಿ ಬೆಳ್ತಂಗಡಿ ತಾಲೂಕು ಆಡಳಿತವು ತಹಸೀಲ್ದಾರ್ ಮೂಲಕ ಸಿದ್ಧತೆ ನಡೆಸಿದೆ.

ಅಣುಕು ಪ್ರದರ್ಶನ: ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯ ತಡೆಗಟ್ಟುವ ವಿಚಾರವಾಗಿ ಅಗ್ನಿಶಾಮಕ ತಂಡದಿಂದ ಅಣುಕು ಪ್ರದರ್ಶನ ನಡೆಸಲಾಯಿತು. ಮಣ್ಣುಕುಸಿತ ಹಾಗೂ ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ಕಟ್ಟಡದೊಳಗಿಂದ ನಿಚ್ಚಣಿಕೆ ಮೂಲಕ ಹಾಗೂ ಸ್ಟ್ರೆಚರ್‌ ಮೂಲಕ ರಕ್ಷಿಸುವ ಕಾರ್ಯದ ಅಣುಕು ಪ್ರದರ್ಶನವನ್ನು ಬೆಳ್ತಂಗಡಿ ವಿಘ್ನೇಶ್ ಸಿಟಿ ಕಟ್ಟಡದಲ್ಲಿ ನಡೆಸಲಾಯಿತು. ನೀರಿಗೆ ಬಿದ್ದ ವ್ಯಕ್ತಿಯನ್ನು ಬೋಟ್ ಮೂಲಕ ರಕ್ಷಿಸುವ ಕಾರ್ಯದ ಅಣುಕು ಪ್ರದರ್ಶನವು ಗುರುವಾಯನ ಕೆರೆಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ನಡೆಸಲಾಯಿತು. ಗಾಳಿಯಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯದ ಅಣುಕು ಪ್ರದರ್ಶನ ನಡೆಸಲಾಯಿತು.

ತಾಲೂಕಿನ ಪ್ರಮುಖ ಕಾಳಜಿ ಕೇಂದ್ರಗಳು: ತಾಲೂಕಿನಲ್ಲಿ ೨೦೧೯ರಲ್ಲಿ ದಿಡುಪೆ ಸುತ್ತಮುತ್ತ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ೧೫ ಕ್ಕೂ ಅಧಿಕ ಗ್ರಾಮಗಳು ನೇರವಾಗಿ ಗಂಭೀರ ಹಾನಿಗೊಳಗಾದರೆ ಉಳಿದ ೧೦ಕ್ಕೂ ಅಧಿಕ ಗ್ರಾಮಗಳು ನೆರೆಗೆ ತುತ್ತಾಗಿದ್ದವು. ಈ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರಕ್ಕೆ ತಾಲೂಕಿನಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಮಿತ್ತಬಾಗಿಲು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಭಂಡಾರಿಕೋಡಿ, ಕಡಿರುದ್ಯಾವರ ಗ್ರಾಮದ ಕೊಡಿಯಾಲು ಬಲು, ಬೆಳ್ತಂಗಡಿ ಕಸಬಾ ಅಂಬೇಡ್ಕರ್ ಭವನ, ವೇಣೂರು ಗ್ರಾಮದ ಸರ್ಕಾರಿ ಪ.ಪೂ. ಕಾಲೇಜು, ಚಾರ್ಮಾಡಿ ಗ್ರಾಮದ ಮಟ್ಟೂರು ಮಹಾಲಿಂಗೇಶ್ವರ ದೇವಸ್ಥಾನ, ಮಿತ್ತಬಾಗಿಲು ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಿಲ್ಲೂರು, ಮಲವಂತಿಗೆ ಗ್ರಾಮದ ಕಜಕೆ ಹಿ.ಪ್ರಾ.ಶಾಲೆ ಕಿಲ್ಲೂರು, ಕರಿಯಾಲ ಹಿ.ಪ್ರಾ. ಶಾಲೆ, ಬಂದಾರು ಗ್ರಾಮದ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ, ಕೊಕ್ಕಡ ಗ್ರಾಮದ ದ.ಕ.ಜಿ.ಹಿ.ಪ್ರಾ.ಶಾಲೆಯನ್ನು ಗುರುತಿಸಲಾಗಿದೆ.

ಕಂಟ್ರೋಲ್ ರೂಂ ಸ್ಥಾಪನೆ: ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿಪರೀತ ಮಳೆ ಹಾಗೂ ಗಾಳಿ ಬೀಸಿ ಅನಾಹುತ ಎದುರಾಗುತ್ತದೆ. ತುರ್ತು ಸಹಕಾರಕ್ಕೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ದಿನದ ೨೪ ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಿದೆ. ಜತೆಗೆ ದಿನದ ೨೪ ತಾಸು ಸಿಬಂದಿ ಹಾಜರಿರುವಂತೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ತುರ್ತು ಸೇವಾ ನಂಬರ್: ೦೮೨೫೬-೨೩೨೦೪೭ ಸಂಪರ್ಕಿಸಲು ಕೋರಲಾಗಿದೆ.

ಮುಂಗಾರು ಋತುವಿನಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳೆಡೆಗೆ ಗಮನ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಈಗಾಗಲೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು ಕಂಟ್ರೋಲ್ ರೂಂ ತೆರೆಯಲಾಗುತ್ತದೆ. ನದಿ, ತೋಡು, ಮರಮಟ್ಟು ಇರುವ ಕಡೆ ಜನ ಸಮಾನ್ಯರು ಅಗತ್ಯವಾಗಿ ಮುನ್ನೆಚ್ಚರಿಕೆ ವಹಿಸಬೇಕು

- ಪೃಥ್ವಿ ಸಾನಿಕಮ್‌, ಬೆಳ್ತಂಗಡಿ ತಹಸೀಲ್ದಾರರು