ಸಾರಾಂಶ
ಮೂವರ ಮೃತದೇಹಗಳನ್ನು ಪೋಲಿಸರು, ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರ ಸಹಕಾರದಿಂದ ನೀರಿನಿಂದ ಹೊರತೆಗೆಯಲಾಗಿದೆ. ಯುವಕರು ಮಂಗಳೂರಿನ ಮಂಗಳಾ ಕಾಲೇಜಿನಲ್ಲಿ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ.
ಕನ್ನಡ್ರಪಭ ವಾರ್ತೆ ಬೆಳ್ತಂಗಡಿ
ಸ್ನಾನಮಾಡಲು ನದಿಗಿಳಿದ ಮೂವರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವೇಣೂರು ಸಮೀಪ ಬುಧವಾರ ಸಂಜೆ ನಡೆದಿದೆ.ಕುಪ್ಪೆಪದವು ನಿವಾಸಿ ಲಾರೆನ್ಸ್ ಫೆರ್ನಾಂಡೀಸ್ (20), ಪುಂಜಾಲಕಟ್ಟೆ ಬಸವನಗುಡಿ ನಿವಾಸಿ ಸೂರಜ್ ಸಿ.ಎಸ್. (19), ಬಂಟ್ವಾಳ ಕಾಡಬೆಟ್ಟು ಎಂಬಲ್ಲಿನ ಜೋಯ್ಸನ್ ಡಿಸೋಜ (19) ಮೃತರು.
ಇವರು ವೇಣೂರಿನ ಚರ್ಚೊಂದರ ವಾರ್ಷಿಕ ಹಬ್ಬಕ್ಕೆಂದು ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಬಂದಿದ್ದರು. ಬಳಿಕ ಮಧ್ಯಾಹ್ನದ ಊಟ ಮುಗಿಸಿ ನಡ್ತಿಕಲ್ಲು ಬರ್ಕಜೆ ಎಂಬಲ್ಲಿನ ಕಿಂಡಿಅಣೆಕಟ್ಟೆಯ ಸಮೀಪದ ನೀರಿನಿಂದ ತುಂಬಿಕೊಂಡಿದ್ದ ಗಗ್ಗರ ಎರುಗುಂಡಿ ಎಂಬಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಮೂವರೂ ಯುವಕರು ಮೃತಪಟ್ಟಿದ್ದಾರೆ.ಮೂವರ ಮೃತದೇಹಗಳನ್ನು ಪೋಲಿಸರು, ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರ ಸಹಕಾರದಿಂದ ನೀರಿನಿಂದ ಹೊರತೆಗೆಯಲಾಗಿದೆ. ಯುವಕರು ಮಂಗಳೂರಿನ ನೀರುಮಾರ್ಗ ಎಂಬಲ್ಲಿರುವ ನ್ಯೂ ಮಂಗಳಾ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.