ಬೆಳ್ತಂಗಡಿ: ನೆನೆಗುದಿಗೆ ಬಿದ್ದಿದ್ದ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ

| Published : Feb 03 2024, 01:50 AM IST

ಬೆಳ್ತಂಗಡಿ: ನೆನೆಗುದಿಗೆ ಬಿದ್ದಿದ್ದ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತಾಧಿಕಾರಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪರವಿರೋಧ ಚರ್ಚೆಯ ನಡಯವೆಯೂ ಕಡೆಗೂ ತಾತ್ಕಾಲಿಕವಾಗಿ ಮಂಜೂರು ಮಾಡಲಾಯಿತು‌.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪಟ್ಟಣದ ವ್ಯಾಪ್ತಿಯಲ್ಲಿ ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾಯೋಜನೆಗೆ ಕಡೆಗೂ ತಾತ್ಕಾಲಿಕವಾಗಿ ಅನುಮೋದನೆ ದೊರೆತಿದೆ. ಆಡಳಿತಾಧಿಕಾರಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪರವಿರೋಧ ಚರ್ಚೆಯ ನಡಯವೆಯೂ ಕಡೆಗೂ ತಾತ್ಕಾಲಿಕವಾಗಿ ಮಂಜೂರು ಮಾಡಲಾಯಿತು‌.ಭವಿಷ್ಯದಲ್ಲಿ ಪಟ್ಟಣಕ್ಕೆ ವ್ಯವಸ್ಥಿತ ಸವಲತ್ತು ಒದಗಿಸುವ ದೃಷ್ಟಿಕೋನದಡಿ ನಗರದಂತೆ ಬೆಳ್ತಂಗಡಿ ಪಟ್ಟಣದ ವ್ಯಾಪ್ತಿಗೂ ಮಹಾಯೋಜನೆ ಜಾರಿಗೊಳಿಸುವ ಸಲುವಾಗಿ ಮಂಗಳೂರು ಯೋಜನಾ ಪ್ರಾಧಿಕಾರದಿಂದ ನೀಲಿ ನಕಾಶೆ ತಯಾರಿಸಲಾಗಿತ್ತು. ಆದರೆ ಜನರಿಗೆ ಇದರಿಂದ ಸಮಸ್ಯೆ ಎದುರಾಗುತ್ತಿದೆ ಎಂಬ ಕಾರಣ ನೀಡಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ತೀವ್ರ ವಿರೋಧದಿಂದ ಪಟ್ಟಣದ ವ್ಯಾಪ್ತಿಯಲ್ಲಿ ಮಹಾಯೋಜನೆಗೆ ಒಪ್ಪಿಗೆ ದೊರೆತಿರಲಿಲ್ಲ. ಇದೀಗ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಆಡಳಿತಾಧಿಕಾರಿ ನೇತೃತ್ವದಲ್ಲಿ ಮಹಾಯೋಜನೆಯನ್ನು ತಾತ್ಕಾಲಿಕವಾಗಿ ಅಂಗೀಕರಿಸಲಾಯಿತು.

ಇದಕ್ಕೂ ಮುನ್ನ ಸದಸ್ಯ ಜಗದೀಶ್ ಅವರು ಮಹಾಹೋಜನೆ ಅಂಗೀಕಾರದ ಉದ್ದೇಶ ಏನು? ನಗರದಲ್ಲಿ ಜಾಗ ಖರೀದಿದಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಾಂಪೌಡ್ ಕಟ್ಟಲೂ ಆಗದ ಪರಿಸ್ಥಿಯಿದೆ. ಇದಕ್ಕೆಲ್ಲ ಪರಿಹಾರ ಹೇಗೆ ಎಂದು ಪ್ರಶ್ನಿಸಿದರು. ಆಡಳಿತಾಧಿಕಾರಿ ಉತ್ತರಿಸಿ, ಭವಿಷ್ಯದ ಯೋಜನೆಗೆ ಮಹಾ ಯೋಜನೆ ಇಂದಲ್ಲ ನಾಳೆ ಬೇಕೆ ಬೇಕು. ಹಾಗಾಗಿ ಮುಂದಕ್ಕೆ ಪರಿಹಾರ ಸಿಗಲಿದೆ. ಖಾಸಗಿಯಾಗಿದ್ದಲ್ಲಿ ಪಂಚಾಯಿತಿಗೆ ದಾನ ಪತ್ರ ನೀಡಿದರೆ ಉಳಿದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. ಕೃಷಿಗೆ ಸಂಪರ್ಕ ಉಚಿತವಿಲ್ಲ: ಪ್ರಸಕ್ತ ಮಳೆ ಕ್ಷೀಣಿಸಿದೆ,‌ ಪಂಪ್‌ಸೆಟ್ ಅತಿ ಹೆಚ್ಚು ಸಂಪರ್ಕ ಪಡೆಯುತ್ತಿದ್ದಾರೆ. 2023 ಸೆ.22 ರ ಒಳಗೆ ಕೃಷಿ ವಿಚಾರವಾಗಿ ಉಚಿತ ಅರ್ಜಿ ನೀಡಿದವರಿಗೆ ಮಾತ್ರ ಸರ್ಕಾರದಿಂದ ಕಂಬ ಸಹಿತ ಅಗತ್ಯ ಪರಿಕರ ಒದಗಿಸಲಾಗುತ್ತದೆ. ನಂತರದ ಅರ್ಜಿಗಳಿಗೆ ರಿಯಾಯಿತಿ ಇರುವುದಿಲ್ಲ. ಜತೆಗೆ ಬೋರ್‌ವೆಲ್‌ನಿಂದ ಮೆಸ್ಕಾಂ ವಿದ್ಯುತ್ ಕಂಬ 500 ಮೀಟರ್ ದೂರವಿದ್ದಲ್ಲಿ ಕಡ್ಡಾಯವಾಗಿ ಸೋಲಾರ್ ಪಂಪ್ ಬಳಸಬೇಕು ಎಂದು ಸರ್ಕಾರದ ಆದೇಶವಿದೆ ಎಂದು ಸಭೆಗೆ ತಿಳಿಸಿದರು.ಧಾರ್ಮಿಕ ಕಾರ್ಯದ ಫ್ಲೆಕ್ಸ್‌ಗೆ ರಿಯಾಯಿತಿ: ಅಯೋಧ್ಯೆ ದೇವಸ್ಥಾನದ ಶುಭಹಾರೈಸಿದ ಫ್ಲೆಕ್ಸ್, ಸಾಹಿತ್ಯ ಪರಿಷತ್ ನ ಫ್ಲೆಕ್ಸ್ ಕಳೆದ ಬಾರಿ ಪ.ಪಂ. ತೆಗೆದಿದ್ದಾರೆ. ಪ.ಪಂ. ಸಭೆಯಲ್ಲಿ ನಿರ್ಣಯ ಪಾಲನೆಯಾಗುತ್ತಿಲ್ಲ. ಮತ್ತೆ ಗೊಂದಲ ಏರ್ಪಡುತ್ತದೆ. ಇನ್ನು ಮುಂದೆ ಸ್ಥಳದಲ್ಲೇ ನಿರ್ಣಯ ಬರೆಯದಿದ್ದರೆ ನಾವು ಸದಸ್ಯರು ಸಹಿ ಹಾಕುವುದಿಲ್ಲ ಎಂದು ಜಯಾನಂದ್ ಆಗ್ರಹಿಸಿದರು. ಧಾರ್ಮಿಕ ವಿಚಾರಕ್ಕೆ ಯಾವುದೇ ಧರ್ಮಕ್ಕೆ ಸಂಭವಿಸಿದಂತೆ ಅನುಮತಿ ನೀಡಬೇಕು. ಜತೆಗೆ ವಯಕ್ತಿಕ ಬ್ಯಾನರ್ ಬಳಸಿದವರ ಭಾವಚಿತ್ರವಿದ್ದರೆ ಅದಕ್ಕೆ ದಂಡ ವಿಧಿಸಬೇಕು‌. ಧಾರ್ಮಿಕ ಕಾರ್ಯಕ್ರಮಕ್ಕೆ ಶುಭಕೋರುವ ಕಾರ್ಯಕ್ರಮಕ್ಕೆ ಒಂದು ದಿನಕ್ಕೆ ಉಚಿತ ಅನುಮತಿ ನೀಡಬೇಕು ಎಂದು ಆಡಳಿತಾಧಿಕಾರಿ ಸಮ್ಮುಖದಲ್ಲಿ ಚರ್ಚಿಸಲಾಯಿತು.4.91 ಕೋ.ರೂ. ಮುಂಗಡ ಬಜೆಟ್: ಪಟ್ಟಣ ಪಂಚಾಯಿತಿ 2024- 25ನೇ ಸಾಲಿನಲ್ಲಿ 4,91,81,800 ಕೋ. ರು. ಮುಂಗಡ ಬಜೆಟ್ ಮಂಡಿಸಿದೆ. ಆಸ್ತಿ ತೆರಿಗೆ, ನೀರಿನ ಕರ, ಸ್ಟಾಲ್ ಬಾಡಿಗೆ, ಆರೋಗ್ಯ ಕರ, ಎಸ್.ಎಫ್.ಸಿ. ಮುಕ್ತನಿಧಿ ಅನುದಾನ, ಕಟ್ಟಡ ಪರಾವನಿಗೆ ಶುಲ್ಕ ಸೇರಿ ಒಟ್ಟು 4.91 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ. ಒಳಚರಂಡಿ, ಕುಡಿವ ನೀರು, ರಸ್ತೆ, ಘನತ್ಯಾಜ್ಯ ನಿರ್ವಹಣೆಗೆ ಆಧ್ಯತೆ ನೀಡಲಾಗಿದ್ದು 4.72 ಕೋ.ರೂ. ಒಟ್ಟು ಖರ್ಚು ಅಂದಾಜಿಸಲಾಗಿದೆ. ಆರಂಭಿಕ ಶಿಲ್ಕು 35,33,396 ರೂ., ಜಮೆ 4,91,81,800, ಒಟ್ಟು 5,27,15,196 ಕೋ.ರೂ., ಖರ್ಚು 4,72,66,800 ರೂ. ಅಂತಿಮ ಶಿಲ್ಕು 54,48,396 ರೂಪಾಯಿ ಬಜೆಟ್ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.