ಸಾರಾಂಶ
ಮೇ ೧೬ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಸ್ತಾಂತರ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಮುಖ್ಯಮಂತ್ರಿ ಸಿದ್ದರಾಮಯ್ಯ ಮೇ ೧೬ರಂದು ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಉದ್ಘಾಟನೆ ಮಾಡಲಿದ್ದು, ಈ ಸಂದರ್ಭದಲ್ಲಿ ಬೆಳ್ತಂಗಡಿಯ ೨೦೦೦ ಸಹಿತ ಜಿಲ್ಲೆಯ ೧೦ ಸಾವಿರ ಮಂದಿಗೆ ಜಮೀನು ಪೋಡಿ ಮಾಡಿ ಆರ್‌ಟಿಸಿ ಕೊಡುವ ಹಾಗೂ ಇತರ ಸೌಲಭ್ಯ ವಿತರಣೆ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಗುರುವಾಯನಕೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಎಲ್ಲವನ್ನೂ ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡುತ್ತಿದೆ. ಮಾತಿನಲ್ಲಿ ಮಾತ್ರವಲ್ಲ ಕೃತಿಯಲ್ಲೂ ಜಟಿಲ ಸಮಸ್ಯೆಗೆ ಪರಿಹಾರ ಸರ್ಕಾರ ಮಾಡಿದೆ. ನೀಡಿದ ಆಶ್ವಾಸನೆಯನ್ನು ಈಡೇರಿಸುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ ಎಂದರು.ಮುಖ್ಯಮಂತ್ರಿಗಳು ಅದೇ ದಿನ ಸುಮಾರು ೩೦ ಕೋಟಿ ವೆಚ್ಚದ ಸ್ಪೋರ್ಟ್ಸ್ ಒಳಾಂಗಣ ಕಟ್ಟಡ ಉದ್ಘಾಟಿಸಲಿದ್ದು, ಉಳ್ಳಾಲದ ಉರೂಸ್ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳಿಗೆ ಇಲ್ಲಿಯ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿರುವ ಸಿಬ್ಬಂದಿಗಳ ಕೊರತೆಯ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪೋಡಿ ಮುಕ್ತ ಕರ್ನಾಟಕ ಎಂದು ತಿಳಿಸಿದಂತೆ ಅದನ್ನು ಅನುಷ್ಟಾನಕ್ಕೂ ತಂದು ಕಾಂಗ್ರೆಸ್ ಬಡವರ ಪಾಲಿನ ಸರ್ಕಾರ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡಿದೆ. ತಾಲೂಕಿನಲ್ಲಿ ೩೨ ಮಂದಿ ಸರ್ವೇಯರ್ ಸೇರಿಕೊಂಡು ಪೋಡಿ ಕೆಲಸ ಆಗಿದೆ. ಸರ್ಕಾರವೇ ಮುಂದೆ ನಿಂತು ಈ ರೀತಿಯ ಕೆಲಸ ಮಾಡಿ ಕೊಡುತ್ತಿರುವುದು ಜಾಗತಿಕ ದಾಖಲೆಯಾಗಿದೆ. ಆ ಮೂಲಕ ಕಂದಾಯ ಇಲಾಖೆಯನ್ನು ಜನರ ಅಲೆದಾಟ ಮುಕ್ತ ಇಲಾಖೆಯಾಗಿ ಮಾರ್ಪಡಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ ಕುಕ್ಕೇಡಿ, ಪದ್ಮನಾಭ ಸಾಲಿಯನ್, ಕೆ.ಶಾಹುಲ್ ಹಮೀದ್, ಸುರೇಶ್ ನಾವೂರು, ಉಷಾ ಅಂಜನ್, ಜಯವಿಕ್ರಮ್, ಪ್ರವೀಣ್ ಹಳ್ಳಿ ಮನೆ ಇದ್ದರು.