ಕಳೆದ ಕೆಲವು ತಿಂಗಳಿನಿಂದ ಮಳೆಯ ಕಾರಣದಿಂದ ನಿಂತು ಹೋಗಿದ್ದ ಪಟ್ಟಣದಲ್ಲಿನ ಹೊಸ ಬಸ್ ನಿಲ್ದಾಣದ ಕಾಮಗಾರಿ ಇದೀಗ ಮತ್ತೆ ಆರಂಭಗೊಂಡಿದೆ.

ಬೆಳ್ತಂಗಡಿ: ಕಳೆದ ಕೆಲವು ತಿಂಗಳಿನಿಂದ ನಿಂತು ಹೋಗಿದ್ದ ಪಟ್ಟಣದಲ್ಲಿನ ಹೊಸ ಬಸ್ ನಿಲ್ದಾಣದ ಕಾಮಗಾರಿ ಇದೀಗ ಮತ್ತೆ ಆರಂಭಗೊಂಡಿದೆ. 2023ರಲ್ಲಿ ಆರಂಭವಾಗಿರುವ ನೂತನ ಬಸ್ ನಿಲ್ದಾಣದ 12 ಕೋಟಿ ರು. ಅನುದಾನದ ಕಾಮಗಾರಿಯಲ್ಲಿ ಕಳೆದ ಬೇಸಿಗೆಯಲ್ಲಿ ನೆಲಮಟ್ಟದ ಕೆಲಸಗಳು ನಡೆದಿದ್ದು ಮಳೆ ಆರಂಭವಾಗುತ್ತಿದ್ದಂತೆ ಕಾಮಗಾರಿ ನಿಂತಿತ್ತು.ಮಳೆಗಾಲದಲ್ಲಿ ಇಲ್ಲಿ ಮಣ್ಣು ಕುಸಿದು ಈಗಿರುವ ಬಸ್ ನಿಲ್ದಾಣಕ್ಕೆ ಕೆಸರು ನೀರು ಹರಿದು ಬರುತ್ತಿತ್ತು. ಕಾಮಗಾರಿಗೆ ತಂದು ಹಾಕಿದ್ದ ಕಬ್ಬಿಣ ತುಕ್ಕು ಹಿಡಿಯುತ್ತಿತ್ತು. ಪರಿಸರದಲ್ಲಿ ಗಲೀಜು ಇದ್ದು ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ಕಾರಣವಾಗಿ ಮಾರ್ಪಟ್ಟಿತ್ತು. ಪ್ರತಿದಿನ ಸಾವಿರಾರು ಜನ, ನೂರಾರು ಬಸ್ ಓಡಾಟ ಇರುವ ಈ ಸ್ಥಳದಲ್ಲಿ ಸಾಂಕ್ರಾಮಿಕ ರೋಗ ಭೀತಿಯು ಎದುರಾಗಿತ್ತು.ಇದರ ಬೆನ್ನಲ್ಲಿಯೇ ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದರು. ಇದೀಗ ಕೊನೆಗೂ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಿದೆ.

ಛಾವಣಿಗೆ ಕಬ್ಬಿಣ ಹಾಕುವ ಸಹಿತ ಇನ್ನಿತರ ಕೆಲಸಗಳು ಪ್ರಗತಿಯಲ್ಲಿವೆ. ಮುಂದಿನ ಹಂತದಲ್ಲಿ ಹೆಚ್ಚಿನ ಕಾಮಗಾರಿಗಳು ತ್ವರಿತವಾಗಿ ನಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆ ಜಾಗದ ಸಮಸ್ಯೆ:

ಸುಮಾರು 1.20 ಎಕರೆ ಸ್ಥಳದಲ್ಲಿ ನಿರ್ಮಾಣವಾಗಲಿರುವ ಈ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಜಾಗವಿದ್ದು ವಲಯ ಅರಣ್ಯಾಧಿಕಾರಿ ಕಚೇರಿಯು ಕಾರ್ಯನಿರ್ವಹಿಸುತ್ತಿದೆ. ಅರಣ್ಯ ಇಲಾಖೆಯ ಜಾಗ ಹಸ್ತಾಂತರದ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಣಯವಾಗಿರುವುದನ್ನು ಶಾಸಕರು ಈ ಹಿಂದೆಯೇ ಹೇಳಿದ್ದರು.

ಅರಣ್ಯ ಇಲಾಖೆಗೆ ಬದಲಿ ಜಾಗ ಗುರುತಿಸಲು ಮುಂದಾಗಿತ್ತು . ಆದರೆ ಅರಣ್ಯ ಇಲಾಖೆ ಇದುವರೆಗೂ ಸಂಬಂಧಿತ ಜಾಗವನ್ನು ಬಿಟ್ಟು ಕೊಟ್ಟಿಲ್ಲ. ಈ ಕಾರಣ ಆ ಭಾಗದ ಕಾಮಗಾರಿ ಆರಂಭಿಸಲು ತೊಡಕಾಗಿದೆ‌ ಈ ಬಗ್ಗೆ ಈಗಾಗಲೇ ಶಾಸಕರು, ಕೆಎಸ್ಸಾರ್ಟಿಸಿ ಅಧಿಕಾರಿಗಳು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಅರಣ್ಯ ಇಲಾಖೆ ಇನ್ನೂ ಕೂಡ ಜಾಗ ಬಿಟ್ಟು ಕೊಟ್ಟಿಲ್ಲ.

ಮಳೆ ಕಡಿಮೆಯಾಗಿದ್ದು ಕಾಮಗಾರಿ ಪುನರಾರಂಭಿಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಕಾಮಗಾರಿ ನಡೆಯುತ್ತಿದೆ. ಹೊಸ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರಿಗೆ ಬೇಕಾದ ಅಗತ್ಯ ಸೇವೆಗಳನ್ನು ಕಲ್ಪಿಸುವ ಕೆಲಸಗಳನ್ನು ಪ್ರಥಮ ಆದ್ಯತೆ ಮೇರೆಗೆ ನಡೆಸಲಾಗುವುದು.

-ಶರತ್‌, ಕೆಎಸ್ಸಾರ್ಟಿಸಿ ವಿಭಾಗೀಯ ಎಂಜಿನಿಯರ್‌.