ಬೆಳ್ತಂಗಡಿ: ಸುಖವಿರುವಲ್ಲಿ ವಿದ್ಯೆ ಖಂಡಿತ ಬರುವುದಿಲ್ಲ. ವಿದ್ಯೆ ಕರಗತವಾಗಲು ಶ್ರದ್ಧೆ ಮತ್ತು ಭಕ್ತಿ ಬೇಕು. ಗುರುವನ್ನು ಮೀರಿಸುವ ಶಿಷ್ಯ ಬೆಳೆದಾಗ ಮನಸ್ಸು ಅಪ್ಯಾಯಮಾನವಾಗುವುದು ಎಂದು ನಾಟ್ಯಾಂಜಲಿ ಕಲಾ ಅಕಾಡೆಮಿ ನಿರ್ದೇಶಕ ಕಲಾಶ್ರೀ ಗುರು ಚಂದ್ರಶೇಖರ ನಾವಡ ಹೇಳಿದರು.

ಫೆ. 21ರಂದು ಉಜಿರೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಮಂಗಳೂರು ನಾಟ್ಯಾರಾಧನಾ ಕಲಾ ಕೇಂದ್ರದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಹೋದರಿಯರ ಭರತ ನೃತ್ಯ ರಂಗಪ್ರವೇಶ ಕಾರ್‍ಯಕ್ರಮದ ಸಭಾ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಂಗಳೂರಿನ ಅಭಿನವ ಡಾನ್ಸ್ ಕಂಪನಿ ನಿರ್ದೇಶಕಿ ನಿರುಪಮಾ ರಾಜೇಂದ್ರ ಅವರು ಪ್ರೇಕ್ಷಕನಿಗೆ ಮನೋವಿಕಾಸ ಮಾಡುವ, ಭಗವಂತನಿಗೆ ಇಷ್ಟವಾಗುವ, ಚಿತ್ತಶುದ್ಧಿ ಮಾಡುವ ಭರತನೃತ್ಯ ಕಲೆ ಭಿಡೆ ಸಹೋದರಿಯರಿಗೆ ಸಿದ್ಧಿಸಿದೆ. ಅನುಭವವಾಗಿದೆ ಎಂದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಕಲೆಯನ್ನು ಆರಾಧಿಸಿ ಅದನ್ನು ದೈವತ್ವಕ್ಕೇರಿಸಿ ಆರಾಧಿಸುವವರು ನಾವು. ಸಹೋದರಿಯರಲ್ಲಿ ದೈವತ್ವದ ಅಂಶ ಕಾಣುತ್ತೇವೆ ಎಂದರು. ಎಸ್ ಡಿಎಂ ಶಿಕ್ಷಣ ಸಂಸ್ಥೆ ಕಾರ್‍ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಕಲಾವಿದೆಯರನ್ನು ಅಭಿನಂದಿಸಿದರು.

ಕಲಾವಿದೆಯರ ನೃತ್ಯಗುರು ಸುಮಂಗಲಾ ರತ್ನಕರ ರಾವ್ ಮಾತನಾಡಿದರು.


ಕಲಾವಿದರಾದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಅವರ ಮಾತಾಪಿತರಾದ ಚಿತ್ರಾ ಮತ್ತು ಧನಂಜಯ ಭಿಡೆ ಉಪಸ್ಥಿತಿಯಲ್ಲಿ ನೃತ್ಯ ಗುರು ಸುಮಂಗಲಾ ರತ್ನಾಕರ ರಾವ್ ಅವರಿಗೆ ಗುರು ವಂದನೆ ಸಲ್ಲಿಸಿದರು. ಅಭಿನವ ಡಾನ್ಸ್ ಕಂಪನಿಯ ಟಿ.ಡಿ. ರಾಜೇಂದ್ರ ಉಪಸ್ಥಿತರಿದ್ದರು.

ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾಶ್ರೀ ರಾಧಾಕೃಷ್ಣ ನಿರೂಪಿಸಿದರು. ಭವ್ಯಾ ಸಂಕಮಾರ್ ಸ್ವಾಗತಿಸಿ, ಚಿತ್ರಾ ಭಿಡೆ ವಂದಿಸಿದರು. ರಾಮಾಯಣ ದೃಶ್ಯಾವಳಿಯ ನೃತ್ಯ ಸಂಯೋಜನೆಯೊಂದಿಗೆ ರಂಗಪ್ರವೇಶದಲ್ಲಿ ಇಬ್ಬರು ಸಹೋದರಿಯರು ಭಾವಾಭಿನಯದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.