ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಜಿಲ್ಲೆಯಲ್ಲಿ ಅತಿ ಹೆಚ್ಚು ದಿನಬಳಕೆಯ ಪದಾರ್ಥ ತೆಂಗಿನಕಾಯಿ. ಅದೀಗ ಕೊರತೆಯಲ್ಲಿದ್ದು ಊಟೋಪಚಾರದ ಕಾರ್ಯಕ್ರಮಗಳನ್ನು ನಡೆಸುವವರಿಗೆ ತೊಂದರೆಯಾಗುತ್ತಿರುವುದು ಕಂಡು ಬರುತ್ತಿದೆ. ಯಾವುದೇ ಕಾರ್ಯಕ್ರಮಗಳಿಗೆ, ದೇಗುಲಗಳಿಗೆ, ಆಹಾರ ಪದಾರ್ಥ ತಯಾರಿಸಲು ಅಗತ್ಯವಿರುವ ತೆಂಗಿನಕಾಯಿಯ ಬೇಡಿಕೆ ಹೆಚ್ಚಿದೆ ಆದರೆ, ಬೆಳ್ತಂಗಡಿ ಪರಿಸರದಲ್ಲಿ ಲಭ್ಯತೆ ಇಲ್ಲ.
ತೆಂಗಿನಕಾಯಿಗೆ ಸದ್ಯ ಕೆ.ಜಿ.ಗೆ 55-60 ರು. ತನಕ ದರವಿದ್ದರೂ ಮಾರುಕಟ್ಟೆಗೆ ತೆಂಗಿನಕಾಯಿ ಹರಿದು ಬರುತ್ತಿಲ್ಲ. ಇದರಿಂದ ಜಾತ್ರೋತ್ಸವ, ಬ್ರಹ್ಮಕಲಶೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅಗತ್ಯ ಬೇಕಾದ ತೆಂಗಿನಕಾಯಿಗಳನ್ನು ಹೊಂದಿಸುವುದೇ ಸಂಘಟಕರಿಗೆ ಸಮಸ್ಯೆಯಾಗಿದೆ.ಈ ಬಾರಿಯ ವಿಪರೀತ ಮಳೆಗೆ ತೆಂಗಿನ ಮೊಗ್ಗು ಕೊಳೆತು ಹೋಗಿರುವುದು, ಎಲೆಚುಕ್ಕಿ ಮೊದಲಾದ ರೋಗ ತೆಂಗಿನ ಬೆಳೆಗೆ ಹೊಡೆತ ನೀಡಿದೆ. ಇನ್ನೊಂದೆಡೆ ಮಂಗಗಳ ಕಾಟದಿಂದ ಇರುವ ಕಲ್ಪವೃಕ್ಷದ ಬೆಳೆ ರಕ್ಷಿಸಲು ಹರಸಾಹಸ ಪಡುವಂತಾಗಿದೆ. ಇವೆಲ್ಲ ಸಮಸ್ಯೆಗಳು ತೆಂಗಿನ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ತೋಟಗಳಲ್ಲಿ ಸಾಕಷ್ಟು ತೆಂಗಿನ ಮರಗಳಿದ್ದರೂ ಕೃಷಿಕರು ಮಾರುಕಟ್ಟೆಯಿಂದ ತೆಂಗಿನಕಾಯಿ ಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
ಇತ್ತ ಬೇರೆ ರಾಜ್ಯಗಳಿಂದ ಎಳನೀರಿಗೆ ಹೆಚ್ಚಿನ ಬೇಡಿಕೆ ಇದ್ದು ಉತ್ತಮ ದರವು ಇದೆ. ಸಾಮಾನ್ಯವಾಗಿ ಒಂದು ಎಳನೀರಿಗೆ 45-50 ರು. ತನಕ ದರವಿದ್ದು ಕೃಷಿಕರು ಎಳನೀರು ಮಾರಾಟ ಮಾಡುತ್ತಿದ್ದಾರೆ. ಮಂಗಗಳ ಕಾಟದಿಂದ ತೆಂಗಿನಕಾಯಿ ಬೆಳೆಯುವ ತನಕ ಕಾಯುವುದು ಸವಾಲಾಗಿದ್ದು ಎಳನೀರು ಮಾರಾಟ ಮಾಡುವುದು ಸುಲಭವೂ, ಲಾಭದಾಯಕವು ಆಗಿರುವುದು ಇದಕ್ಕೆ ಕಾರಣ.ತೆಂಗಿನಕಾಯಿಯ ಕೊರತೆಯ ಕಾರಣದಿಂದ ತೆಂಗಿನ ಎಣ್ಣೆಗೂ ಬೆಲೆ ಏರಿಕೆಯಾಗಿದ್ದು ಉತ್ತಮ ಗುಣಮಟ್ಟದ ತೆಂಗಿನ ಎಣ್ಣೆಯ ದರ ಲೀಟರ್‌ಗೆ 280-300ರ ಆಸುಪಾಸು ತಲುಪಿದೆ.
.................ಕೃಷಿಕರು ಅಡಿಕೆಗೆ ಗಮನಕೊಡುವಷ್ಟು ತೆಂಗು ಬೆಳೆಗೆ ಕೊಡದಿರುವುದೇ ಕಾಯಿಗಳ ಇಳುವರಿ ಕಡಿಮೆಗೆ ಕಾರಣ. ಸೂಕ್ತ ಬೆಲೆಯೂ ಇಲ್ಲ ಎಂಬ ಭಾವನೆ ತೆಂಗು ಕೃಷಿಯನ್ನು ಕಡೆಗಣಿಸಲಾಗಿದೆ. ಅಲ್ಲದೆ ಇತ್ತೀಚೆಗೆ ವಾನರಗಳ ಕಾಟ ಅತಿಯಾಗಿ ಎಲ್ಲೆಡೆ ಇರುವುದು ಮುಖ್ಯ ಕಾರಣ. ಮಂಗಗಳನ್ನು ಕೊಲ್ಲುವುದು ಪಾಪ. ಆದರೆ ಅದು ಕೃಷಿ ಹಾಳು ಮಾಡದಂತೆ ಸರ್ಕಾರ ಗಮನಕೊಡಬೇಕಾದ್ದು ಅತೀ ಅಗತ್ಯ.
-ಪ್ರವೀಣಕುಮಾರ್ ಜೈನ್ ಪಿಲ್ಯ, ತೆಂಗಿನಕಾಯಿ ಉದ್ಯಮಿ---------------------ಅಡಕೆ ತೋಟದ ಮಧ್ಯೆ ತೆಂಗಿನ ಮರಗಳು ಸಾಕಷ್ಟು ಇದ್ದರೂ ಮಂಗಗಳ ಉಪದ್ರವ ವಿಪರೀತವಾಗಿರುವುದರಿಂದ ಮಾರಾಟ ಮಾಡಲು ಬಿಡಿ, ದಿನದ ಉಪಯೋಗಕ್ಕೂ ತತ್ವಾರ ಉಂಟಾಗಿದೆ.-ಅರವಿಂದ ಗೋಖಲೆ ಮುಂಡಾಜೆ, ಕೃಷಿಕರು