ಬೇಲೂರು: ಪುರಸಭೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಅಕ್ರ ಶರೀಫ್ ಅವರನ್ನು ಪಟ್ಟಣದ ಗಾಣಿಗರ ಸಂಘದಿಂದ ಸನ್ಮಾನಿಸಲಾಯಿತು.

ಪುರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಾಣಿಗರ ಸಂಘದ ಪದಾಧಿಕಾರಿಗಳು ಅಕ್ರಮ್ ಶರೀಫ್ ಅವರಿಗೆ ಶಾಲು ಹೊದಿಸಿ ಸನ್ಮಾನಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಅಕ್ರಂ ಶರೀಫ್, ಪುರಸಭೆ ವ್ಯಾಪ್ತಿಯಲ್ಲಿ ಶೀಘ್ರದಲ್ಲೇ ನಿರಂತರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುವುದು, ಇದರಿಂದ ಪಟ್ಟಣದ ೨೩ ವಾರ್ಡ್ ಗಳ ಸಾರ್ವಜನಿಕರು ದಿನದ ೨೪ ಗಂಟೆಗಳ ಕಾಲವೂ ಕುಡಿಯುವ ನೀರಿನ ಸೌಲಭ್ಯ ಪಡೆಯಬಹುದು ಎಂದರು.

ಸಾರ್ವಜನಿಕರು ನೇರವಾಗಿ ನನ್ನನ್ನು ಭೇಟಿಯಾಗುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು ಎಂದರಲ್ಲದೆ, ನನ್ನ ಆಡಳಿತ ಅವಧಿಯಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಗಾಣಿಗರ ಸಂಘದ ಅಧ್ಯಕ್ಷ ಬಿ.ಎಲ್.ನಾಗರಾಜು ಮಾತನಾಡಿ, ಅಧ್ಯಕ್ಷ ಅಕ್ರಂ ಶರೀಫ್ ರವರು ಕಳೆದು ೧೦ ವರ್ಷಗಳಿಂದ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಅಧ್ಯಕ್ಷರಾಗಿ ಅಧಿಕಾರ ಪಡೆದಿದ್ದಾರೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಅರಿತಿರುವ ಅವರು ಅತ್ಯಂತ ಹೆಚ್ಚಿನ ಕೆಲಸ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಶುಭ ಹಾರೈಸಿದರು.

ಗಾಣಿಗರ ಸಂಘದ ಕಾರ್ಯದರ್ಶಿ ಎನ್. ಅನಂತು ಮಾತನಾಡಿ, ನೂತನ ಅಧ್ಯಕ್ಷ ಅಕ್ರಂ ಶರೀಫ್ ಯುವಕರಾಗಿದ್ದು, ಪ್ರವಾಸಿ ಕೇಂದ್ರವಾದ ಪಟ್ಟಣವನ್ನು ಸಮಗ್ರ ಅಭಿವೃದ್ಧಿ ಮಾಡುವತ್ತ ಹೆಚ್ಚಿನ ಗಮನ ಹರಿಸಿ, ಸರ್ಕಾರದ ಅನುದಾನ ತರಲು ಆದ್ಯತೆ ನೀಡಬೇಕು ಎಂದರು.


ಸಮಾರಂಭದಲ್ಲಿ ಪುರಸಭೆ ಸದಸ್ಯ ಬಿ.ಎಲ್.ಪ್ರಭಾಕರ್, ಗಾಣಿಗರ ಸಂಘದ ಉಪಾಧ್ಯಕ್ಷರಾದ ಅಶೋಕ್, ಚಂದ್ರಶೇಖರ್ ಹಾಗೂ ಸಂಘದ ಪ್ರಮುಖರಾದ ರಮೇಶ್, ಯಶ್ವಂತ್, ಜಗದೀಶ್, ಸಂಜು, ಜಗದೀಶ್ ಉಪಸ್ಥಿತರಿದ್ದರು.