ಸಾರಾಂಶ
ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು - ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಬೇಲೂರು ಬಸ್ ನಿಲ್ದಾಣದಿಂದ ಹಿರೇಮಗಳೂರುವರೆಗೆ ಇನ್ನು ಮುಂದೆ ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ ಎಂದು ನಾಮಕರಣ ಮಾಡಿರುವುದು ತುಂಬಾ ಸಂತೋಷ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಸರ್.ಎಂ. ವಿಶ್ವೇಶ್ವರಯ್ಯನವರ್ ಜನ್ಮ ದಿನದ ಅಂಗವಾಗಿ ಚಿಕ್ಕಮಗಳೂರು ಸಿವಿಲ್ ಇಂಜಿನಿಯರ್ ಸಂಘ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮ ಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಚಾಲನೆ ನೀಡಿ ಮಾತನಾಡಿ ವಿಶ್ವೇಶ್ವರಯ್ಯ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ಅವರ ಹೆಸರು ಅಜರಾಮರವಾಗಿರಬೇಕು ಎಂದು ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ವ್ಯಕ್ತಿಯ ಹೆಸರು ಶಾಶ್ವತವಲ್ಲ, ಅವರ ವ್ಯಕ್ತಿತ್ವ ಶಾಶ್ವತ. ಯಾವುದೇ ವ್ಯಕ್ತಿ ತನ್ನ ಹುಟ್ಟು, ಸಾವಿನ ಮಧ್ಯೆ ಜೀವನದಲ್ಲಿ ಯಾವ ರೀತಿ ಬದುಕುತ್ತಾನೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ಉಳಿಯುತ್ತದೆ ಎಂಬುದಕ್ಕೆ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಒಂದು ಉದಾಹರಣೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಸರ್.ಎಂ. ವಿಶ್ವೇಶ್ವರಯ್ಯ. ಮೈಸೂರಿನ ಒಡೆಯರ ಕಾಲದಲ್ಲಿ ರಾಜ್ಯಕ್ಕೆ ಕೊಟ್ಟ ಅವರ ಕೊಡುಗೆಗಳು ಇನ್ನೂ ನೆನಪಾಗಿಯೇ ಉಳಿದುಕೊಂಡಿವೆ. ರಾಜ್ಯಕ್ಕೆ ಅವರು ನೀಡಿದ ಕೊಡುಗೆಗಳ ಅವಲೋಕನ ಮಾಡಬೇಕಾಗಿದೆ. ಗುಣಮಟ್ಟದ ಕಾಮಗಾರಿಗೆ ನೀಡಿದ ಮಹತ್ವ ಬಹಳ ಮುಖ್ಯವಾಗಿದ್ದು, ಇಂದು ಕಟ್ಟುತ್ತಿರುವಾಗಲೇ ಕಟ್ಟಡ, ಸೇತುವೆಗಳು ನೆಲಕ್ಕುರುಳಿರುವಂತಹ ಉದಾಹರಣೆಗಳು ನಮ್ಮ ಕಣ್ಣಮುಂದೆ ಬಂದು ಹೋಗಿವೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ಜಿ. ರಮೇಶ್ ಮಾತನಾಡಿ, ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರಿಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಇದನ್ನು ಅನುಷ್ಠಾನಗೊಳ್ಳುವಲ್ಲಿ ಸಿವಿಲ್ ಇಂಜಿನಿಯರ್ ಸಂಘದ ಮಾಜಿ ಅಧ್ಯಕ್ಷ ಸೇರಿದಂತೆ ಹಲವರ ಕೊಡುಗೆ ಇದ್ದು, ಇದನ್ನು ಕಾರ್ಯರೂಪಕ್ಕೆ ತರಲು ಕಾರಣರಾದ ಎಲ್ಲರಿಗೂ ಇಂಜಿನಿಯರ್ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದರು.ನಗರಸಭೆ ಅಧ್ಯಕ್ಷೆ ಬಿ.ಸಿ. ಸುಜಾತಾ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್ ಸಮಾರಂಭದಲ್ಲಿ ಮಾತನಾಡಿ ದರು. ಸಿವಿಲ್ ಇಂಜಿನಿಯರ್ ಸಂಘದ ಕೋ-ಆರ್ಡಿನೇಟರ್ ಕೆ.ಜಿ. ವೆಂಕಟೇಶ್, ಇಂಜಿನಿಯರ್‌ಗಳಾದ ಬಿ.ಎಸ್. ಹರೀಶ್, ಎಂ.ಎ. ನಾಗೇಂದ್ರ ಹಾಗೂ ಗುರು ಉಪಸ್ಥಿತರಿದ್ದರು. ಸಂಘದ ಖಜಾಂಚಿ ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.20 ಕೆಸಿಕೆಎಂ 3ಚಿಕ್ಕಮಗಳೂರಿನ ಬೇಲೂರು ರಸ್ತೆಗೆ ಸರ್.ಎಂ. ವಿಶ್ವೇಶ್ವರಯ್ಯ ಹೆಸರು ನಾಮಕರಣಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಅವರು ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ ಇದ್ದರು.