ಸಾರಾಂಶ
ನೂರಾರು ಗುತ್ತಿಗೆ ಕಾರ್ಮಿಕರು ಹಲವು ವರ್ಷಗಳ ಸೇವೆ ಸಲ್ಲಿಸಿ, ನಿವೃತ್ತಿಯ ಸಂದರ್ಭದಲ್ಲಿ ಯಾವುದೇ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರದ ಸುತ್ತೋಲೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಳೆದ ಹಲವು ದಿನಗಳಿಂದ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಬೆಮಲ್ ನೌಕರರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಇಲ್ಲಿಯ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು. ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಮತ್ತು ಸೌಲಭ್ಯಗಳನ್ನು ನೀಡಿ ಸುಮಾರು ೩೦ ವರ್ಷಗಳಿಂದ ದುಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.ನಿವೃತ್ತರಿಗೂ ಪರಿಹಾರ ನೀಡಿಲ್ಲ
ನೂರಾರು ಗುತ್ತಿಗೆ ಕಾರ್ಮಿಕರು ೩೦ ವರ್ಷಗಳ ಸೇವೆ ಸಲ್ಲಿಸಿ, ನಿವೃತ್ತಿಯ ಸಂದರ್ಭದಲ್ಲಿ ಯಾವುದೇ ಪರಿಹಾರ ಇಲ್ಲದೇ ಬರಿಗೈಯಲ್ಲಿ ಮನೆಗೆ ಹೋಗುತ್ತಿದ್ದಾರೆ. ಕೇಂದ್ರ ಸರ್ಕಾರದ ಸುತ್ತೋಲೆಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ತಾಲೂಕು ಸಂಚಾಲಕ ಬಿ.ಎಲ್.ಕೇಶವರಾವ್ ಮಾತನಾಡಿ, ಬೆಮೆಲ್ ಆಡಳಿತ ಮಂಡಳಿಯು ಕಾಯಂ ನೌಕರರ ನೇಮಕಾತಿಯ ಸಂದರ್ಭದಲ್ಲಿ ಸೇವಾ ಹಿರಿತನ ಮತ್ತು ನೈಪುಣ್ಯತೆ ಆಧಾರದ ಮೇಲೆ ಗುತ್ತಿಗೆ ನೌಕರರಿಗೆ ಕಲ್ಪಿಸಿದ್ದ ಅವಕಾಶವನ್ನು ಇತ್ತೀಚೆಗೆ ಕೈಬಿಡಲಾಗಿದೆ. ಈ ಕುರಿತು ಬೆಮೆಲ್ ಕೆಜಿಎಫ್‌ನ ಗುತ್ತಿಗೆ ಕಾರ್ಮಿಕರ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಬೆಮಲ್ ಗುತ್ತಿಗೆ ಕಾರ್ಮಿಕರ ಹಿರಿತನ ಮತ್ತು ನೈಪುಣ್ಯತೆಯನ್ನು ಪರಿಗಣಿಸಿ ಅವಕಾಶ ನೀಡುವಂತೆ ನೀಡಿರುವ ಆದೇಶವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. ಎಂಪಿ, ಶಾಸಕರ ಭರವಸೆ ಈಡೇರಿಲ್ಲತಾಲೂಕು ಮುಖಂಡ ಟಿ.ಅಪ್ಪಯ್ಯಣ್ಣ ಮಾತನಾಡಿ, ಕಳೆದ ಆಗಸ್ಟ್ ತಿಂಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶಬಾಬು, ಕೆಜಿಎಫ್ ಶಾಸಕಿ ಎಂ.ರೂಪಕಲಾ ಶಶಿಧರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ ಇದು ಪ್ರಯೋಜನವಾಗಲಿಲ್ಲವೆಂದು ಟೀಕಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಮೋಹನ್, ಸಿಐಟಿಯು ರೈತ ಮುಖಂಡ ಸಿ.ಆರ್.ಮೂರ್ತಿ, ಡಿ.ಕೆ.ಹಳ್ಳಿ ಗ್ರಾ.ಪಂ ಸದಸ್ಯ ಜಿ.ಗಣೇಶನ್, ಎ.ಸಿ.ವೆಲಾಯುದನ್, ರವಿಶೇಖರ್, ಕರುಪಯ್ಯ, ಸೋಮಶೇಖರ್, ವೆಂಕಟೇಶ್, ಪದ್ಮನಾಭಯ್ಯ ಇದ್ದರು.