ಸಾರಾಂಶ
- ಉಪಾಧ್ಯಕ್ಷರಾಗಿ ಎಂ.ಎಸ್.ಗೀತಾ ಅವರಿಗೆ ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬೆಮ್ಮನೆ ಮೋಹನ್, ಉಪಾಧ್ಯಕ್ಷರಾಗಿ ಎಂ.ಎಸ್.ಗೀತಾ ಅವಿರೋಧವಾಗಿ ಆಯ್ಕೆಯಾದರು.
ಸೀತೂರು ವಿ.ಎಸ್.ಎಸ್.ಎನ್. ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೆಮ್ಮನೆ ಮೋಹನ್, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ಗೀತಾ ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ರಿಟರ್ನಿಂಗ್ ಆಫೀಸರ್ ನವೀನ್ ಕುಮಾರ್ ಸೀತೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಬೆಮ್ಮನೆ ಮೋಹನ್ ಹಾಗೂ ಉಪಾಧ್ಯಕ್ಷೆ ಎಂ.ಎಸ್.ಗೀತಾ ಅವಿರೋಧ ಆಯ್ಕೆ ಘೋಷಿಸಿದರು.ಅಭಿನಂದನಾ ಕಾರ್ಯಕ್ರಮ: ಸೀತೂರು ಅನಂತರಾಮ ಉಪಾಧ್ಯ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಸಹಕಾರ ಭಾರತಿ ಉಪಾಧ್ಯಕ್ಷ ಹಾಗೂ ಸೀತೂರು ವಿ.ಎಸ್.ಎಸ್.ಎನ್ ನಿರ್ದೇಶಕ ವೈ.ಎಸ್.ಸುಬ್ರಮಣ್ಯ ಮಾತನಾಡಿ, ಸಹಕಾರ ಭಾರತಿ ನೇತೃತ್ವದಲ್ಲಿ ನಡೆದ ಸಹಕಾರ ಸಂಘದ ಈ ಚುನಾವಣೆಯಲ್ಲಿ ಅದ್ಭುತ ಗೆಲುವು ಕಂಡಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಭರವಸೆ ಈಡೇರಿಸಲು ಅಧ್ಯಕ್ಷ,ನಿರ್ದೇಶಕರು ಒಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ಕೆ.ಎಸ್.ಉಮೇಶ್ ಮಾತನಾಡಿ, ಹಿಂದಿನ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ಸಂಘವನ್ನು ಉತ್ತಮವಾಗಿ ಬೆಳೆಸಿದ್ದಾರೆ. ಅವರ ಹೆಜ್ಜೆ ಗುರುತನ್ನು ಅನುಸರಿಸಬೇಕು. ಈ ವರ್ಷ ಸೀತೂರು ಸಹಕಾರ ಸಂಘಕ್ಕೆ 75 ವರ್ಷ ತುಂಬಿದ ನೆನಪಿನಲ್ಲಿ ಸಂಭ್ರಮಾಚರಣೆ ಮಾಡಬೇಕಾಗಿದೆ ಎಂದರು.ನೂತನ ಅಧ್ಯಕ್ಷ ಬೆಮ್ಮನೆ ಮೋಹನ್ ಮಾತನಾಡಿ, ಹಿಂದಿನ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ ಅವರು ಹಾಕಿಕೊಟ್ಟ ದಾರಿಯಲ್ಲೇ ಮುಂದುವರಿ ಯುತ್ತೇವೆ. ಜನರ ನಿರೀಕ್ಷೆ ಹುಸಿ ಮಾಡದೆ ಎಲ್ಲಾ ನಿರ್ದೇಶಕರನ್ನು ಒಂದು ತಂಡವಾಗಿ ತೆಗೆದುಕೊಂಡು ಹೋಗಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಗ್ರಾಪಂ ಸದಸ್ಯ ಎಚ್.ಇ. ದಿವಾಕರ, ಮುಖಂಡರಾದ ಎ.ಎಸ್. ವೆಂಕಟರಮಣ, ಶಶಿನಾಥ್, ಬಿ.ಎಸ್.ಶ್ರೀನಿವಾಸ್ ಅಭಿನಂದಿಸಿ ಮಾತನಾಡಿದರು. ಸಭೆಯಲ್ಲಿ ಸಂಘದ ನೂತನ ಉಪಾಧ್ಯಕ್ಷೆ ಎಂ.ಎಸ್.ಗೀತಾ, ನಿರ್ದೇಶಕರಾದ ಎಸ್.ಉಪೇಂದ್ರರಾವ್, ಎಚ್.ವಿ.ಸಂದೀಪ್ ಕುಮಾರ್, ಕೆ.ಎಂ.ಜಗದೀಶ್, ಕೆ.ಜಿ.ರಮೇಶ್, ಜಿ.ಕೆ.ಜಯರಾಂ, ಎಚ್.ಎನ್.ಸತೀಶ್, ವೈ.ವಿ.ಲೋಲಾಕ್ಷಿ, ಎಚ್.ಎಚ್. ನಾರಾಯಣ, ಸುಧಾಕರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಇದ್ದರು.