ಪಂಚ ಗ್ಯಾರಂಟಿಗೆ ಅರ್ಹ ಫಲಾನುಭವಿಗಳು ವಂಚಿತರಾಗಬಾರದು :ಅಧ್ಯಕ್ಷ ಮೂಡ್ಲೀಗೌಡ

| Published : Mar 01 2025, 01:01 AM IST

ಪಂಚ ಗ್ಯಾರಂಟಿಗೆ ಅರ್ಹ ಫಲಾನುಭವಿಗಳು ವಂಚಿತರಾಗಬಾರದು :ಅಧ್ಯಕ್ಷ ಮೂಡ್ಲೀಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಿಂದ ತಾಲೂಕಿನ ಯಾವೊಬ್ಬ ಅರ್ಹ ಫಲಾನುಭವಿಗಳೂ ಸಹ ವಂಚಿತರಾಗಬಾರದೆಂಬ ಕಾರಣಕ್ಕೆ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ, ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಿಂದ ತಾಲೂಕಿನ ಯಾವೊಬ್ಬ ಅರ್ಹ ಫಲಾನುಭವಿಗಳೂ ಸಹ ವಂಚಿತರಾಗಬಾರದೆಂಬ ಕಾರಣಕ್ಕೆ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ, ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, 5 ಗ್ಯಾರಂಟಿ ಯೋಜನೆಗಳಿಂದ ಬಹುತೇಕ ಬಡ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿರುವ ತಾಲೂಕಿನ 1375 ಮಂದಿ ಅರ್ಹ ಫಲಾನುಭವಿಗಳ ಪಡಿತರ ಕಾರ್ಡ್‌ನಲ್ಲಿರುವ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಯೋಜನೆ ಸವಲತ್ತು ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಯುವನಿಧಿ ಯೋಜನೆಗೆ ಅರ್ಹರಾಗುವ ಎಲ್ಲಾ ಯುವಕ- ಯುವತಿಯರು ನೋಂದಣಿ ಮಾಡಿಸಿಕೊಂಡು ಯೋಜನೆ ಸೌಲಭ್ಯ ಪಡೆದುಕೊಳ್ಳಬೇಕು. ತಾಂತ್ರಿಕ ಸಮಸ್ಯೆ ಸರಿಪಡಿಸಿ ವಂಚಿತ ಅರ್ಹ ಫಲಾನುಭವಿಗಳಿಗೂ ಸವಲತ್ತು ಸಿಗುವಂತೆ ಮಾಡಬಹುದು ಎಂದರು.

ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ ಮಾತನಾಡಿ, ಶಕ್ತಿ ಯೋಜನೆಯಡಿ ನಾಗಮಂಗಲ ಡಿಪೋಗೆ ಸೇರಿದ ಸಾರಿಗೆ ಬಸ್‌ಗಳಲ್ಲಿ ಪ್ರತಿನಿತ್ಯ 24 ಸಾವಿರ ಮಹಿಳೆಯರು ಉಚಿತ ಪ್ರಯಾಣದಿಂದ ದಿನಕ್ಕೆ7.5 ಲಕ್ಷ ರು. ಆದಾಯ ಬರುತ್ತಿದೆ. ಜನವರಿ ತಿಂಗಳಲ್ಲಿ ಸಂಸ್ಥೆಗೆ 2.33 ಕೋಟಿ ರು. ಆದಾಯ ಬಂದಿದೆ ಎಂದು ತಿಳಿಸಿದರು.

ಆಹಾರ ನಿರೀಕ್ಷಕ ಅನಿಲ್ ಕುಮಾರ್, ಅನ್ನ ಭಾಗ್ಯ ಯೋಜನೆಯಡಿ ಪಡಿತರದಾರರ ಮಾಹಿತಿ ನೀಡಿದರು.

ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಕುಸುಮ, ಯುವ ನಿಧಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿರುವ 658 ಮಂದಿ ಫಲಾನುಭವಿಗಳ ಪೈಕಿ 490 ಮಂದಿ ಅರ್ಹ ಫಲಾನುಭವಿಗಳಿಗೆ 71.4 ಲಕ್ಷ ರು. ಡಿಬಿಟಿ ಮೂಲಕ ಸಂದಾಯವಾಗಿದೆ ಎಂದರು.

ಸೆಸ್ಕಾಂ ನಾಗಮಂಗಲ ಉಪ ವಿಭಾಗದ ಎಇಇ ಜಯಪ್ರಕಾಶ್ ಮಾಹಿತಿ ನೀಡಿ, ತಾಲೂಕಿನಲ್ಲಿ 57, 985 ಮಂದಿ ಗ್ರಾಹಕರು ಗೃಹ ಜ್ಯೋತಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಹೊಸದಾಗಿ ಗೃಹಬಳಕೆ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ 58 ಯುನಿಟ್‌ನಷ್ಟು ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.

ತಾಲೂಕಿನಲ್ಲಿ 49,204 ಮಂದಿ ಅರ್ಹ ಫಲಾನುಭವಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿದ್ದಾರೆ. ಪಡಿತರ ಕಾರ್ಡ್ ತಿದ್ದುಪಡಿ, ಎನ್‌ಪಿಸಿಐ ಮ್ಯಾಪಿಂಗ್ ಮತ್ತು ಆಧಾರ್ ಸೀಡಿಂಗ್ ಆಗದ 1375 ಮಂದಿ ಫಲಾನುಭವಿಗಳ ತಾಂತ್ರಿಕ ಸಮಸ್ಯೆ ಬಗೆಹರಿದರೆ ಶೇ.100 ರಷ್ಟು ಗುರಿ ಸಾಧನೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ರವಿಕಾಂತೇಗೌಡ, ವಿನಯ್‌ಗೌಡ, ನೀಲಾಮೂರ್ತಿ, ಪಿ.ಗೀತಾ, ನವೀನ್, ತಮ್ಮಣ್ಣಗೌಡ, ಸಿ.ಎನ್.ರಾಘವೇಂದ್ರ, ದಿನೇಶ್, ತಾಪಂ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಅಧಿಕಾರಿಗಳಾದ ಸಂದೀಪ್, ಗಿರೀಶ್ ಸೇರಿ ಹಲವರು ಇದ್ದರು.