ಸಂವಿಧಾನದ ಫಲಾನುಭವಿಗಳು ಸಮುದಾಯದವರನ್ನು ತಿರುಗಿ ನೋಡಬೇಕು: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ

| Published : Sep 28 2024, 01:16 AM IST

ಸಂವಿಧಾನದ ಫಲಾನುಭವಿಗಳು ಸಮುದಾಯದವರನ್ನು ತಿರುಗಿ ನೋಡಬೇಕು: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅಂಬೇಡ್ಕರ್ ಸಂವಿಧಾನದ ಹಕ್ಕುಗಳ ಫಲಾನುಭವಿಗಳಾಗಿ ಉನ್ನತ ಸ್ಥಾನ ಪಡೆದವರು ತಮ್ಮ ಸಮುದಾಯದವರನ್ನು ತಿರುಗಿ ನೋಡಬೇಕು, ಕೈಲಾದ ಸಹಾಯ ಮಾಡಬೇಕು, ಅಂಬೇಡ್ಕರ್ ಅವರಂತಾಗಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳನ್ನು ಎಲರಿಗೂ ತಲುಪಿಸುವ ಕೆಲಸ ಮಾಡಬೇಕು, ಆಗ ಮಾತ್ರ ಅಂಬೇಡ್ಕರ್ ಜಯಂತಿ, ಪರಿನಿಬ್ಬಾಣ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ಕುವೆಂಪು ಕಲಾಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂಬೇಡ್ಕರ್ ಸಂವಿಧಾನದ ಹಕ್ಕುಗಳ ಫಲಾನುಭವಿಗಳಾಗಿ ಉನ್ನತ ಸ್ಥಾನ ಪಡೆದವರು ತಮ್ಮ ಸಮುದಾಯದವರನ್ನು ತಿರುಗಿ ನೋಡಬೇಕು, ಕೈಲಾದ ಸಹಾಯ ಮಾಡಬೇಕು, ಅಂಬೇಡ್ಕರ್ ಅವರಂತಾಗಲು ಪ್ರಯತ್ನಿಸಬೇಕು. ಅವರ ವಿಚಾರಧಾರೆಗಳನ್ನು ಎಲರಿಗೂ ತಲುಪಿಸುವ ಕೆಲಸ ಮಾಡಬೇಕು, ಆಗ ಮಾತ್ರ ಅಂಬೇಡ್ಕರ್ ಜಯಂತಿ, ಪರಿನಿಬ್ಬಾಣ ದಿನಾಚರಣೆಗಳಿಗೆ ಅರ್ಥ ಬರುತ್ತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.

ಕೆಎಸ್‌ಆರ್‌ಟಿಸಿ ಸಂಸ್ಥೆ ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಶ್ರೇಯೋಭಿವೃದ್ಧಿ ಸಂಘ ಶುಕ್ರವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರ ಭವನದಿಂದ ಹಿಡಿದು ಗ್ರಾಮ ಪಂಚಾಯತ್‌ವರೆಗಿನ ಎಲ್ಲ ಜಾತಿ, ಧರ್ಮದವರಿಗೆ, ಬಡವ, ಶ್ರೀಮಂತ, ಮಹಿಳೆ ಎನ್ನದೇ ಎಲ್ಲರಿಗೂ ಮತದಾನ ಮಾಡುವ ಹಕ್ಕು ನೀಡಿದವರು ಅಂಬೇಡ್ಕರ್. ಈ ಕಾರಣಕ್ಕಾಗಿಯಾದರೂ ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ನೆನೆಯಲೇಬೇಕು ಎಂದರು.

ಭಾರತ ದೇಶದ ಚರಿತ್ರೆಯನ್ನು ರಾಜ ಮಹಾರಾಜ ಖಡ್ಗ, ಈಟಿಯಂತಹ ಯಾವ ಆಯುಧದಿಂದಲೂ ಆಗಲಿಲ್ಲ. ದೇವರು, ಧರ್ಮಗಳಿಂದಲೂ ಆಗಲಿಲ್ಲ, ಆದರೆ, 40 ವರ್ಷಗಳ ತಮ್ಮ ಜೀವನದಲ್ಲಿ ಅಂಬೇಡ್ಕರ್ ಕೇವಲ ಒಂದು ಪೆನ್ನಿನಿಂದ ಭಾರತದ ಚರಿತ್ರೆಯನ್ನೇ ಬದಲಾಯಿಸಿದರು ಎಂದು ಲಾರ್ಡ್ ಮೌಂಟ್ ಬ್ಯಾಟನ್ ಬರೆದಿದ್ದಾರೆ. ಶೋಷಿತ ಸಮುದಾಯಗಳ ಹಕ್ಕುಗಳಿಗೆ ಎಲ್ಲವನ್ನೂ ತ್ಯಾಗ ಮಾಡಿದ ಅಂಬೇಡ್ಕರ್ ಅವರ ಕನಸಿನ ರಥ ನಿಂತಲ್ಲೇ ನಿಂತಿದೆ. ಅವರ ಶ್ರಮದ ಫಲಾನುಭವಿಗಳಾಗಿರುವ ನಾವು ಶೋಷಿತ ಸಮುದಾಯಗಳಿಗೆ ಮರುಜನ್ಮ ನೀಡಿದ ಅಂಬೇಡ್ಕರ್ ವಿಚಾರಧಾರೆಗಳನ್ನು ಮರೆಯುತ್ತಿದ್ದೇವೆ. ದೇವರು, ಧರ್ಮ ಅಮಲಿನಲ್ಲಿ ತೇಲಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಬಿ.ಬಿ.ನಿಂಗಯ್ಯ ಮಾತನಾಡಿ, ಶೋಷಿತ, ಧಮನಿತರ ಪಾಲಿನ ಸೂರ್ಯ ಅಂಬೇಡ್ಕರ್. ಶೋಷಿತ ಸಮುದಾಯಗಳ ಸ್ವಾತಂತ್ರ್ಯ, ಸಮಾನತೆಗೆ ಅವರು ತಮ್ಮ ಜೀವನನ್ನೇ ಮುಡಿಪಾಗಿಟ್ಟಿದ್ದರು. ಸಂವಿಧಾನದ ಮೂಲಕ ದೇಶದ ಕಟ್ಟಕಡೆ ವ್ಯಕ್ತಿಗೂ ಸ್ವಾತಂತ್ರ್ಯ, ಸಮಾನತೆ, ಗೌರವ ತಂದುಕೊಟ್ಟ ಮಹಾನ್‌ ಮಾನವತಾವಾದಿ. ದೇಶದ ಎಲ್ಲ ಜಾತಿ, ಧರ್ಮ ದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ರಚಿಸಿದ ಸಂವಿಧಾನ ಜಗತ್ತಿನ ಶ್ರೇಷ್ಠ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ಪಡೆದಿದೆ. ಈ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬುನಾದಿಯಾಗಿದೆ. ಸಂವಿಧಾನದ ಮೂಲಕ ದೇಶದ ಕಟ್ಟಕಡೆ ವ್ಯಕ್ತಿಗೂ ಅವರು ಬದುಕಿನ ರಕ್ಷಣೆ ನೀಡಿದ್ದಾರೆ ಎಂದರು.

ಪ್ರಗತಿಪರ ಚಿಂತಕ ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಗುಲಾಮಗಿರಿಗೆ ತಳ್ಳಿದ ಸಮುದಾಯದವರಿಗೆ ನಾಗರಿಕ ಹಕ್ಕುಗಳನ್ನು ಕೊಡಿಸಲು ಜೀವನ ಮುಡಿಪಾಗಿಟ್ಟ ಸಂತ ಅಂಬೇಡ್ಕರ್. ಅವರ ಕನಸಿನ ಭಾರತ ನಿರ್ಮಾಣಕ್ಕೆ ಶಿಕ್ಷಣ, ಸಂಘಟನೆ, ಹೋರಾಟದ ಅಸ್ತ್ರದೊಂದಿಗೆ ಹೋರಾಡಬೇಕು. ಸಮುದಾಯದ ವಿದ್ಯಾವಂತರು, ಅಧಿಕಾರಿಗಳು ತಮ್ಮ ಸಮುದಾಯದವರನ್ನು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತಲು ಮುಂದಾಗಬೇಕು ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಎಸ್ಸಿ, ಎಸ್ಟಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಉಮೇಶ್, ಚಿಕ್ಕಮಗಳೂರು ವಿಭಾಗದ ನಿಯಂತ್ರಣಾಧಿಕಾರಿ ಜಗದೀಶ್ ಮಾತನಾಡಿದರು. ವಕೀಲ ಅನಿಲ್‌ಕುಮಾರ್ ಸಂವಿಧಾನದ ಪೀಠಿಕೆ ಬೋಧಿಸಿದರು. ಸಂಘದ ಗೌರವಾಧ್ಯಕ್ಷ ಎಚ್.ರಾಮಚಂದ್ರ, ಸಂಘದ ರಾಜ್ಯ ಖಜಾಂಚಿ ರೇಣುಕಾ, ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್, ಮುಖಂಡರಾದ ಕಾವ್ಯ ಸಂತೋಷ್ ವೇದಿಕೆಯಲ್ಲಿದ್ದರು. 27 ಕೆಸಿಕೆಎಂ 5ಕೆಎಸ್‌ಆರ್‌ಟಿಸಿ ಸಂಸ್ಥೆಯ ಜಿಲ್ಲಾ ಎಸ್ಸಿ, ಎಸ್ಟಿ ನೌಕರರ ಶ್ರೇಯೋಭಿವೃದ್ಧಿ ಸಂಘ ಶುಕ್ರವಾರ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಉದ್ಘಾಟಿಸಿದರು.