ಫಲಾನುಭವಿಗಳು ಪುರಸಭೆಗೆ ಸೂಕ್ತ ದಾಖಲಾತಿ ಒದಗಿಸಿ

| Published : Jul 03 2025, 11:48 PM IST

ಫಲಾನುಭವಿಗಳು ಪುರಸಭೆಗೆ ಸೂಕ್ತ ದಾಖಲಾತಿ ಒದಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರಗಂಗೆ ರಸ್ತೆಯಲ್ಲಿ 10 ಎಕರೆಯಲ್ಲಿ ಪುರಸಭೆಗೆ ಸಂಬಂಧಿಸಿದ ಆಸ್ತಿ ನಂ. 566/2ರಲ್ಲಿ 411 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಈಗಾಗಲೇ 139 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಬಹುದಿನಗಳ ಕಾಲ ನೆನೆಗುದಿಗೆ ಬಿದ್ದಿರುವಂತ ಆಸ್ತಿ ನಂ.473/ 474 ಪ್ರದೇಶದಲ್ಲಿ 339 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಆ ಫಲಾನುಭವಿಗಳು ಕೂಡಲೇ ಪುರಸಭೆಗೆ ಸೂಕ್ತ ದಾಖಲಾತಿಗಳನ್ನು ಒದಗಿಸಬೇಕು ಎಂದು ಆಶ್ರಯ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಮನಗೂಳಿ ಹೇಳಿದರು.

ಪಟ್ಟಣದ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಗುರುವಾರ ತಮ್ಮ ಅಧ್ಯಕ್ಷತೆ ಮತ್ತು ಪುರಸಭೆ ಅಧ್ಯಕ್ಷ ಡಾ.ಶಾಂತವೀರ್ ಮನಗೂಳಿ ನೇತೃತ್ವದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಅಂತರಗಂಗೆ ರಸ್ತೆಯಲ್ಲಿ 10 ಎಕರೆಯಲ್ಲಿ ಪುರಸಭೆಗೆ ಸಂಬಂಧಿಸಿದ ಆಸ್ತಿ ನಂ. 566/2ರಲ್ಲಿ 411 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಈಗಾಗಲೇ 139 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಅವರು ಸಹ ಸೂಕ್ತ ದಾಖಲಾತಿ ಪುರಸಭೆಗೆ ನೀಡಬೇಕು. ಬಾಕಿ ಉಳಿದ 263 ನಿವೇಶನಗಳನ್ನು ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ನೀಡಲಾಗುವುದು ಎಂದರು.

750 ನಿವೇಶನಗಳು ಅಂಬೇಡ್ಕರ್ ವಸತಿ ಹಾಗೂ ವಾಜಪೇಯಿ ವಸತಿ ನಿಗಮದಿಂದ ಮಂಜೂರಾಗಿವೆ. ಇದರಲ್ಲಿ 424 ಸಾಮಾನ್ಯ ವರ್ಗ, 81 ನಿವೇಶನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿದೆ. ಉಳಿದ 245 ನಿವೇಶನಗಳನ್ನು ದಾಖಲಾತಿ ಸರಿ ಇಲ್ಲದ ಕಾರಣ ಅವುಗಳನ್ನ ಪುನಃ ಪರಿಶೀಲಿಸಿ ಮುಂದಿನ ದಿನಮಾನಗಳಲ್ಲಿ ನೀಡಲಾಗುವುದು. ಸ್ಲಂ ಬೋರ್ಡ್ ದಿಂದ ಮಂಜೂರಾದ 104 ಮನೆಗಳು ತಲಾ ₹7.50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿವೆ. ಅದರಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಇನ್ನು 196 ಫಲಾನುಭವಿಗಳಿಗೆ ಸ್ಲಂ ಬೋರ್ಡ್‌ಗೆ ವಂತಿಗೆ ಹಣ ಸಂದಾಯ ಮಾಡಿ ಅವರಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮ ಮಾಡಲಾಗುವುದು ಎಂದರು.

ಮಲಗಾನ ರಸ್ತೆಯಲ್ಲಿನ 2.6 ಎಕರೆ ಜಮೀನಿನಲ್ಲಿ ಪೌರಕಾರ್ಮಿಕರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗುವುದು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದ ಅವರು, ಯಾವ ವ್ಯಕ್ತಿಗೂ ಅನ್ಯಾಯ ಮಾಡದಂತೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯು ಕೂಡ ಸಮಾಜದಲ್ಲಿ ಮುಂದೆ ಬರುವಂತಾಗಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಅವುಗಳನ್ನ ಪ್ರಾಮಾಣಿಕವಾಗಿ ನಾನು ನಿರ್ವಹಿಸುತ್ತೇನೆ ಎಂದರು.

ಈ ವೇಳೆ ಆಶ್ರಯ ಸಮಿತಿಯ ಸದಸ್ಯರಾದ ಭೀಮು ರೋಡಗಿ, ರಾಜು ಖೇಡ್, ಮಲ್ಲು ಸದುಗೋಳ್ ಶೈಲಾಜಿ ಭಾಸ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.