ಯಾವುದೇ ಕಾರಣಕ್ಕೂ ಸರ್ಕಾರದ ವಸತಿ ಯೋಜನೆಯಲ್ಲಿ ಮನೆಗಳನ್ನು ಪಡೆದ ಫಲಾನುಭವಿಗಳು ಮನೆ ಮಾರಾಟ ಮಾಡಬಾರದು.
ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿಯ ಸಭೆ
ಕನ್ನಡಪ್ರಭ ವಾರ್ತೆ ಹಳಿಯಾಳಆಶ್ರಯ ಇಲ್ಲ ಎಂದು ನಂಬಿ ಮನೆಗಳನ್ನು ಮಂಜೂರು ಮಾಡಿದರೇ ಪಡೆದ ಮನೆ ಮಾರಾಟ ಮಾಡುವುದೆಂದರೇ ಏನರ್ಥ?. ಯಾವುದೇ ಕಾರಣಕ್ಕೂ ಸರ್ಕಾರದ ವಸತಿ ಯೋಜನೆಯಲ್ಲಿ ಮನೆಗಳನ್ನು ಪಡೆದ ಫಲಾನುಭವಿಗಳು ಮನೆ ಮಾರಾಟ ಮಾಡಬಾರದು. ಮೇಲಾಗಿ ಮಾರಾಟ ಮಾಡುವ ಹಕ್ಕು ಸಹ ಅವರು ಹೊಂದಿಲ್ಲ, ಅಂತಹ ಮನೆಗಳನ್ನು ನೋಂದಣಿ ಮಾಡಿಕೊಳ್ಳುವುದು ಸಹ ಕಾನೂನು ಬಾಹಿರವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.ಗುರುವಾರ ಪುರಸಭೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ನಡೆದಿರುವ ಆಶ್ರಯ ಮನೆ ಮಾರಾಟ, ಬಾಡಿಗೆ ನೀಡುವುದು ಪರಭಾರೆ ಮಾಡುವರ ಸಂಖ್ಯೆಯು ಹೆಚ್ಚಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.ನಿಯಂತ್ರಣವಾಗಲಿ:ಹಳಿಯಾಳಕ್ಕೆ ಎಷ್ಟೊಂದು ಮನೆಗಳನ್ನು ಮಂಜೂರು ಮಾಡಿ ತಂದರು ಸಾಕಾಗುತ್ತಿಲ್ಲ. ಮನೆ ಪಡೆದವರೇ ಮಾರಾಟ ಮಾಡುತ್ತಾರೆ, ಮತ್ತೇ ಅರ್ಜಿ ಹಾಕುತ್ತಾರೆ, ಮತ್ತೇ ಇವರು ಹೇಗೆ ಮನೆ ಪಡೆಯುತ್ತಾರೆಂಬುದು ನನಗೂ ಆರ್ಥವಾಗುತ್ತಿಲ್ಲ. ಇಂತಹ ಪದ್ಧತಿಯ ನಿಯಂತ್ರಣವಾಗಬೇಕು, ವಸತಿ ಯೋಜನೆ ಸಂಪೂರ್ಣ ಶುದ್ಧಿಕರಿಸಬೇಕೆಂದರು.
ಹಣದ ಆಸೆಗಾಗಿ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಅಥವಾ ಆಶ್ರಯ ಸಮಿತಿಯ ಸದಸ್ಯರು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿದರೇ ಅಂತಹ ಪ್ರಕರಣಗಳು ನನ್ನ ಗಮನಕ್ಕೆ ಬಂದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.ನನಗೆ ನಾಲ್ಕು ಕಣ್ಣುಗಳಿವೆ, ಮುಂದೇ ಎರಡು, ಹಿಂದೇ ಎರಡು. ಹುಷಾರಾಗಿರಿ ನನಗೆ ಎಲ್ಲವೂ ಗೊತ್ತಾಗುತ್ತದೆ. ಪಿನ್-ಟು-ಪಿನ್ ಮಾಹಿತಿ ನನ್ನ ಬಳಿ ಇರುತ್ತದೆ ಎಂದು ಎಚ್ಚರಿಸಿದರು. ನೋಂದಣಿ ಮಾಡಬೇಡಿ:ಇದೇ ಸಂದರ್ಭ ಹಳಿಯಾಳ ಉಪನೋಂದಣಾಧಿಕಾರಿಗೆ ಕರೆ ಮಾಡಿದ ಶಾಸಕರು ಸರ್ಕಾರದ ವಸತಿ ಯೋಜನೆ ಮನೆಗಳನ್ನು ಮಾರಾಟ ಮಾಡುವುದಾಗಲಿ ಅಥವಾ ಪರಬಾರೆ ಮಾಡುವುದು ಕಾನೂನು ಬಾಹಿರವಾಗಿದ್ದು, ಅವುಗಳ ನೋಂದಣಿ ಮಾಡಬಾರದು, ಇಂತಹ ಪ್ರಕರಣಗಳು ನಿಮ್ಮ ಕಚೇರಿಗೆ ಬಂದರೇ ತಕ್ಷಣ ಪುರಸಭೆಯ ಗಮನಕ್ಕೆ ತರಬೇಕೆಂದರು. ಇಲ್ಲವಾದಲ್ಲಿ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸುವೆ ಎಂದು ಎಚ್ಚರಿಸಿದರು. 110 ಆಶ್ರಯ ಮನೆಗಳ ಮಾರಾಟ:
ಆಶ್ರಯ ಮನೆಗಳ ಮಾರಾಟವಾಗುತ್ತಿರುವ ಕುರಿತು ಪುರಸಭೆಯವರು ಮಾಡಿದ ಸಮೀಕ್ಷಾ ವರದಿಯನ್ನು ಶಾಸಕರೆದುರು ವಸತಿ ಯೋಜನಾ ವಿಭಾಗದ ಅಧಿಕಾರಿ ಅನಿಲ ಚಲವಾದಿ ಮಂಡಿಸಿ, ಪಟ್ಟಣದಲ್ಲಿರುವ 6 ಆಶ್ರಯ ಬಡಾವಣೆಗಳಲ್ಲಿ 110 ಮನೆಗಳನ್ನು ಮಾರಾಟ ಮಾಡಲಾಗಿದೆ. ಮಾರಾಟವಾದ ಮನೆಗಳ ನೋಂದಣಿಯು ಸಹ ನಡೆದಿದೆ ಎಂದು ಶಾಸಕರ ಗಮನಕ್ಕೆ ತಂದರು. ಹೊಸದಾಗಿ ಮನೆಗಳನ್ನು ಕೊಡಲು ಮಂಜೂರಾಗಿರುವ 6 ಎಕರೆ ಜಮೀನಿನಲ್ಲಿ 207 ಫಲಾನುಭವಿಗಳಿಗೆ ನಿವೇಶನಗಳು ಸಿಗಲಿದ್ದು, ಈಗಾಗಲೇ 1749 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.ವರದಿಯನ್ನು ಆಲಿಸಿದ ಶಾಸಕರು ಸಲ್ಲಿಸಿದ ಅರ್ಜಿದಾರರ ಕುರಿತು ಸಮೀಕ್ಷೆ ನಡೆಸಬೇಕು, ಅವರಿಗೆ ವಸತಿ ಇಲ್ಲವೆಂದು ಖಾತ್ರಿ ಆದರೆ ಮಾತ್ರ ಅಂತಹವರನ್ನು ಪರಿಗಣಿಸಬಹುದು. ಬಡವರು, ನಿರ್ಗತಿಕರನ್ನು ಆಯ್ಕೆ ಮಾಡಬೇಕು ಎಂದು ದೇಶಪಾಂಡೆ ಸಲಹೆ ನೀಡಿದರು. ಜಿ-ಪ್ಲಸ್-2: ಜಿ-ಪ್ಲಸ್ 2 ಮನೆಗಳ ನೋಂದಣಿಯಾಗುತ್ತಿಲ್ಲ ಎಂಬ ವಿಷಯ ಸಭೆಯಲ್ಲಿ ಪ್ರಸ್ತಾಪವಾದಾಗ ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ನೋಂದಣಿ ಮಾಡಲು ಇರುವ ಅಡೆತಡೆಗಳ ಕುರಿತು ಮುಖ್ಯಾಧಿಕಾರಿಗಳು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತಾಪಿಸಬೇಕೆಂದರು. ಇಂದಿರಾನಗರದಲ್ಲಿ ಕೆಲವರ ಮನೆಗಳು ನೋಂದಣಿಯಾಗದಿರುವುದರ ಬಗ್ಗೆ ಸಮಿತಿಯ ಸದಸ್ಯ ಉಮೇಶ ಬೊಳಶೆಟ್ಟಿ ಸಭೆಯ ಗಮನಕ್ಕೆ ತಂದರು.ಸಭೆಯಲ್ಲಿ ಆಶ್ರಯ ಸಮಿತಿಯ ಸದಸ್ಯ ಉಮೇಶ ಬೊಳಶೆಟ್ಟಿ, ಅಣ್ಣಪ್ಪ ವಡ್ಡರ, ಇಜಾಜಹ್ಮದ ಮುಗದ, ರಾಜಶ್ರೀ ಬಾಳೆಕುಂದ್ರಿ, ಪುರಸಭೆಯ ವ್ಯವಸ್ಥಾಪಕ ಈರಣ್ಣ ಕೊಡ್ಲಿ, ಗ್ರೇಡ್-2 ತಹಸೀಲ್ದಾರ ರವೀಂದ್ರ ನೇಸರಗಿ ಹಾಗೂ ಇತರರು ಇದ್ದರು.