ಪಡಿತರ ಅಕ್ಕಿ ಮಾರಿದರೆ ಫಲಾನುಭವಿ ಕಾರ್ಡ್ ರದ್ದು

| Published : Mar 24 2025, 12:30 AM IST

ಸಾರಾಂಶ

ಅಂತ್ಯೋದಯ ಯೋಜನೆಯ ಕಾರ್ಡುದಾರರಿಗೆ ಕುಟುಂಬ ಸದಸ್ಯರು ೩ ಜನ ಇದ್ದರೆ ೩೫ ಕೆ.ಜಿ. ನೀಡಲಾಗುವುದು. ಅದಕ್ಕೂ ಹೆಚ್ಚು ಜನ ಇದ್ದರೆ ಅದಕ್ಕೆ ತಕ್ಕ ಹಾಗೆ ಅಕ್ಕಿ ನೀಡಲಾಗುತ್ತಿದೆ. ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲ ಕೇಳಿ ಪಡೆಯಬೇಕು. ನ್ಯಾಯಬೆಲೆ ಅಂಗಡಿಯವರು ಇದರಲ್ಲಿ ವ್ಯತ್ಯಾಸ ಮಾಡಿದರೆ ಗ್ಯಾರಂಟಿ ಕಚೇರಿಗೆ ದೂರು ನೀಡಿ.

ಕನ್ನಡಪ್ರಭ ವಾರ್ತೆ ಕೋಲಾರ

ನ್ಯಾಯಬೆಲೆ ಅಂಗಡಿಗಳವರು ಫಲಾನುಭವಿಗಳಿಗೆ ತೂಕದಲ್ಲಿ ಲೋಪ ಮಾಡಿರುವುದು ಕಂಡುಬಂದರೆ ಅವರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ಎಚ್ಚರಿಸಿದ್ದಾರೆ. ನಗರದ ಜಿಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ೫ ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ ೫ ಕೇಜಿ ಅಕ್ಕಿಗೆ ಹಣ ನೀಡಲಾಗುತ್ತಿತ್ತು. ಮಾರ್ಚ್ ತಿಂಗಳಿನಿಂದ ಪ್ರತಿ ಕುಟುಂಬ ಸದಸ್ಯನಿಗೆ ೧೦ ಕೆ.ಜಿ.ಅಕ್ಕಿಯನ್ನು ನೀಡಲಾಗುತ್ತಿದೆ ಎಂದರು. ಅಕ್ಕಿ ಕೇಳಿ ಪಡೆಯಿರಿ

ಅಂತ್ಯೋದಯ ಯೋಜನೆಯ ಕಾರ್ಡುದಾರರಿಗೆ ಕುಟುಂಬ ಸದಸ್ಯರು ೩ ಜನ ಇದ್ದರೆ ೩೫ ಕೆ.ಜಿ. ನೀಡಲಾಗುವುದು. ಅದಕ್ಕೂ ಹೆಚ್ಚು ಜನ ಇದ್ದರೆ ಅದಕ್ಕೆ ತಕ್ಕ ಹಾಗೆ ಅಕ್ಕಿ ನೀಡಲಾಗುತ್ತಿದೆ. ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲ ಕೇಳಿ ಪಡೆಯಬೇಕು. ನ್ಯಾಯಬೆಲೆ ಅಂಗಡಿಯವರು ಇದರಲ್ಲಿ ವ್ಯತ್ಯಾಸ ಮಾಡಿದರೆ ಗ್ಯಾರಂಟಿ ಯೋಜನೆಯ ಕಛೇರಿಗೆ ದೂರು ನೀಡಬಹುದು ಎಂದರು. ನ್ಯಾಯಬೆಲೆ ಅಂಗಡಿಗಳವರು ಅಕ್ಕಿ ವಿತರಣೆ ಮಾಡುವಲ್ಲಿ ನಿಯಮಗಳ ಪ್ರಕಾರ ಅಂಗಡಿಯನ್ನು ತೆರೆದು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಅಕ್ಕಿ ತರಣೆ ಮಾಡಬೇಕು. ಹೆಚ್ಚುವರಿ ಅಕ್ಕಿ ಬರುತ್ತಿದೆ ಎಂದು ಫಲಾನುಭವಿಗಳು ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡುಬಂದರೆ ಅಂಥವರ ಕಾರ್ಡ್‌ ರದ್ದುಪಡಿಸಲಾಗುವುದು ಎಂದರು. ಗೃಹಲಕ್ಷ್ಮೀ ಯೋಜನೆ:

ಗೃಹಲಕ್ಷ್ಮೀ ಯೋಜನೆಯಲ್ಲಿ ಫಲಾನುಭವಿಗಳ ಸಂಖ್ಯೆ ೫೦,೯೦,೦೦೭ ಆಗಿದ್ದು, ಡಿಸೆಂಬರ್ ೨೦೨೪ರ ಮಾಹೆಯಿಂದ ಒಟ್ಟು ೧೭ ತಿಂಗಳಿಗೆ ೧೦೧೮.೦೦ ಕೋಟಿ ರೂ.ಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಅಗಿದೆ. ಜನವರಿ ಮತ್ತು ಫೆಬ್ರವರಿ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕಾಗಿದೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ವಿರೋಧಪಕ್ಷದವರು ವಿನಾಕಾರಣ ಗ್ಯಾರಂಟಿ ಯೋಜನೆಗಳಿಂದ ಅನಾನುಕೂಲ ಆಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅಕ್ಕಿ ವಿತರಣೆಯಲ್ಲಿ ಕಡಿಮೆ ನೀಡಿದಲ್ಲಿ ಗ್ಯಾರಂಟಿ ಯೋಜನೆಗಳ ಸದಸ್ಯರ ಗಮನಕ್ಕೆ ಫಲಾನುಭವಿಗಳು ತರಬೇಕು ಎಂದು ತಿಳಿಸಿದರು.