ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪುಇಲ್ಲಿನ ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ, ಕಾಪು ರೈತ ಸಂಪರ್ಕ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಬಂಟಕಲ್ಲು ಶ್ರೀದುರ್ಗಾಪರಮೆಶ್ವರಿ ದೇವಳದ ವಠಾರದಲ್ಲಿ ಏರ್ಪಡಿಸಿದ ‘ಮಲ್ಲಿಗೆ ಹಾಗೂ ಅಡಕೆ ಕೃಷಿ ಕುರಿತ ಮಾಹಿತಿ ಕಾರ್ಯಾಗಾರ’ವನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಸರ್ಕಾರ ಸಹಾಯಧನ ಒದಗಿಸುವುದಲ್ಲದೆ ಕೃಷಿ ಇಲಾಖೆಯ ಮೂಲಕ ಆಧುನಿಕ ವೈಜ್ಞಾನಿಕ ಕೃಷಿ ಪದ್ಧತಿಯ ಬಗ್ಗೆ ಸಕಾಲಿಕ ಮಾಹಿತಿ ನೀಡುತ್ತಿದೆ. ಕೃಷಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆಯಿತ್ತರು.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಔಪಚಾರಿಕ ಯೋಜನೆ ಉಡುಪಿ ಇದರ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮಾತನಾಡಿ, ಬೆಳೆಗಳಿಗೆ ಮೌಲ್ಯವರ್ಧನೆ ಆದಾಗ ಕೃಷಿಕರಿಗೆ ಪ್ರಯೋಜನವಾಗುತ್ತದೆ. ಸರ್ಕಾರ ಶೇ.೫೦ ಸಬ್ಸಿಡಿಯಲ್ಲಿ ಗ್ರಾಮೀಣ ಮಟ್ಟದಿಂದ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಅದನ್ನು ಪಡೆದುಕೊಳ್ಳುವ ಕ್ರಮದ ಬಗ್ಗೆ ಮಾಹಿತಿ ನೀಡಿದರು.ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿ, ವೈಜ್ಞಾನಿಕ ಪದ್ಧತಿಯಲ್ಲಿ ಲಾಭದಾಯಕ ಅಡಕೆ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇಲ್ಲಿನ ಪ್ರಾಧ್ಯಾಪಕ (ತೋಟಗಾರಿಕೆ) ಡಾ.ಚೈತನ್ಯ ಎಚ್.ಎಸ್. ಮಾತನಾಡಿ, ಮಲ್ಲಿಗೆ ಕೃಷಿಯನ್ನು ಲಾಭದಾಯಕವಾಗಿ ಮಾಡುವ ವಿಧಾನದ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ರಾಜಾಪುರ ಸಾರಸ್ವತ ಸೇವಾ ವೃಂದದ ಉಪಾಧ್ಯಕ್ಷ ರಮೇಶ್ಚಂದ್ರ ನಾಯಕ್ ಪಂಜಿಮಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಬಂಟಕಲ್ಲು ಪುಂಡಲೀಕ ಮರಾಠೆ, ಪ್ರಗತಿಪರ ಮಲ್ಲಿಗೆ ಕೃಷಿಕೆ ವಾಲೆಟ್ ಕಸ್ತಲಿನೊ, ಹಿರಿಯ ಪ್ರಗತಿಪರ ರೈತ ನಿತ್ಯಾನಂದ ನಾಯಕ್ ಪಾಲಮೆ, ಕಾಪು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುಪ್ಪಲತಾ ಭಾಗವಹಿಸಿದ್ದರು.
ರಾಜಾಪುರ ಸಾರಸ್ವತ ಸೇವಾ ವೃಂದದ ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸಹಾಯಕ ತಾಂತ್ರಿಕ ಕೃಷಿ ವ್ಯವಸ್ಥಾಪಕ ಅರುಣ್ ಕುಮಾರ್ ವಂದಿಸಿದರು. ಕೃಷ್ಣಮೂರ್ತಿ ಪಾಟ್ಕರ್ ಪ್ರಾರ್ಥಿಸಿದರು.