ಸಾರಾಂಶ
- ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜೀವ- ಭಾವ ಕಾರ್ಯಕ್ರಮ, ಶ್ರೀಮಾತಾ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ, ಹೊರನಾಡುಯಾವುದೇ ಕ್ಷೇತ್ರಗಳು ಸಮಾಜದಿಂದ ಅನುಕೂಲ ಪಡೆದುಕೊಂಡು ಮತ್ತೆ ಅದನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಅದು ಜೀವ ಮತ್ತು ಭಾವಕ್ಕೆ ವಿಶೇಷ ಒತ್ತು ನೀಡಿದಂತಾಗುತ್ತದೆ ಎಂದು ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿಯ ಧರ್ಮದರ್ಶಿ ಬಾಲಚಂದ್ರ ಭಟ್ ಹೇಳಿದರು.
ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರಜೋಷಿ ಅವರ 34ನೇ ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಭಾನುವಾರ ನಡೆದ ಜೀವ-ಭಾವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ಷೇತ್ರಕ್ಕೆ ಬರುವ ಆದಾಯದ ಬಹುಪಾಲನ್ನು ವಿವಿಧ ಯೋಜನೆಗಳ ಮೂಲಕ ಈ ಸಮಾಜಕ್ಕಾಗಿ ವಿನಿಯೋಗಿಸುತ್ತಿರುವುದು ಇಂದು ನಡೆಯುತ್ತಿರುವ ಜೀವ - ಭಾವ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಕೊಡುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಜೀವದ ಜೊತೆಯಲ್ಲಿ ಭಾವನ್ನು ಈ ಪ್ರಪಂಚದಲ್ಲಿ ಪರಮಾತ್ಮ ಕೊಟ್ಟಿರುವುದು ಮನುಷ್ಯನಿಗೆ ಮಾತ್ರ. ಮನುಷ್ಯ ಸ್ವಾರ್ಥದಿಂದ ನಿಶ್ವಾರ್ಥಕ್ಕೆ ಬದಲಾವಣೆ ಆಗಬೇಕು. ಈ ಜೀವನ ನಮಗೆ ಮಾತ್ರ ಸೀಮಿತವಾಗದೆ ಅದು ಇತರರಿಗೂ ಪೂರಕವಾಗುವಂತೆ ಆಗಬೇಕು ಎಂದರು.ಮನುಷ್ಯನ ಜೀವನ ಎಲ್ಲಾ ಋಣಗಳಿಂದ ಮುಕ್ತವಾದಾಗ ಮಾತ್ರ ಆತನ ಜೀವನ ಶ್ರೇಷ್ಠತೆ ಕಾಣುತ್ತದೆ. ನಮ್ಮ ಜೀವನದ ಶ್ರೇಷ್ಠತೆ ಜೊತೆಯಲ್ಲಿ ಇನ್ನೊಬ್ಬರ ಕಷ್ಟಗಳಿಗೆ ನಾವು ಆಶ್ರಯವಾಗಿ ನಾವು ಅವರಿಗೆ ಬೆಳಕಾದರೆ ಮಾತ್ರ ನಮ್ಮ ಜೀವನ ಅರ್ಥಪೂರ್ಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಒಂದು ಲಕ್ಷ ರು. ನಗದು ಜೊತೆಗೆ ಶ್ರೀ ಮಾತಾ ಪ್ರಶಸ್ತಿಯನ್ನು ಬೆಂಗಳೂರಿನ ಗಾಂಧಿ ವೃದ್ಧಾಶ್ರಮಕ್ಕೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಧರ್ಮಕರ್ತರ ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಧರ್ಮಕರ್ತರ ಹಸ್ತದಿಂದ ಶ್ರೀಮಾತೆಗೆ ಅಭಿಷೇಕ ಮತ್ತು ವಿಶೇಷ ಪೂಜೆ, ನವಗ್ರಹ ಹೋಮ ಹಾಗೂ ಉಚಿತ ಆರೋಗ್ಯ ತಪಾಸಣೆ ನಡೆಯಿತು.ಈ ಸಂದರ್ಭದಲ್ಲಿ ಗಾಂಧಿ ವೃದ್ಧಾಶ್ರಮದ ಅಧ್ಯಕ್ಷೆ ಲಕ್ಷ್ಮೀದೇವಿ, ಶ್ರೀಕ್ಷೇತ್ರ ಶಕಟಪುರಮ್ ಮಠದ ರಾಘವ, ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ, ಆಡಳಿತ ಮಂಡಳಿ ಕಾರ್ಯದರ್ಶಿ ರಾಜಗೋಪಾಲ ಜೋಷಿ, ಗಿರಿಜಾ ಶಂಕರ ಜೋಷಿ, ಸಾವಿತ್ರಿಜೋಷಿ ಇದ್ದರು.
-- ಕೋಟ್--ಹೆತ್ತು ಹೊತ್ತು ಬೆಳೆಸಿ ಎಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ನಿಮ್ಮ ತಂದೆ ತಾಯಿಯರನ್ನು ಅವರು ವೃದ್ಧರಾಗುತ್ತಿದ್ದಂತೆ ದಯವಿಟ್ಟು ಆಶ್ರಮಕ್ಕೆ ಸೇರಿಸಬೇಡಿ. ತಂದೆ ತಾಯಿ ಸೇವೆ ಮಾಡಿ ನಿಮ್ಮ ಋಣ ತೀರಿಸಿಕೊಳ್ಳಿ.ಉಗ್ರಯ್ಯ,ಕಾರ್ಯದರ್ಶಿ,
ಗಾಂಧಿ ವೃದ್ಧಾಶ್ರಮ- 6 ಕೆಸಿಕೆಎಂ 1ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಜೀವ-ಭಾವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾಂಧಿ ವೃದ್ಧಾಶ್ರಮಕ್ಕೆ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಜೋಷಿ ಇದ್ದರು.