ಬೆಂ.ಗ್ರಾ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬರ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು. | Kannada Prabha
Image Credit: KP
ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಮಳೆಕೊರತೆಯಿಂದ 49559.57 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಕುರಿತು ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದು ಬೆಂ.ಗ್ರಾ. ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.
ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಮಳೆಕೊರತೆಯಿಂದ 49559.57 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಕುರಿತು ಕೇಂದ್ರ ಬರ ಅಧ್ಯಯನ ತಂಡಕ್ಕೆ ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದು ಬೆಂ.ಗ್ರಾ. ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ ತಂಡಕ್ಕೆ ಜಿಲ್ಲೆಯ ವಾಸ್ತವಿಕ ಚಿತ್ರಣದ ಸಮಗ್ರ ಮಾಹಿತಿ ನೀಡಿದ ಶಿವಶಂಕರ್ ಅವರು, ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಅಪಾರ ಬೆಳೆಹಾನಿಯಾಗಿದೆ. ಆದರೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 85 ಕೋಟಿ ರುಪಾಯಿ ಆಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ರಾಗಿ 4,60,003.44 ಹೆಕ್ಟೇರ್, ಮುಸುಕಿನ ಜೋಳ 3477.68 ಹೆಕ್ಟೇರ್, ತೊಗರಿ 68.95 ಹೆಕ್ಟೇರ್, ನೆಲಗಡಲೆ 9.50 ಹೆಕ್ಟೇರ್ ಸೇರಿದಂತೆ ಒಟ್ಟು 49559.57 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬಗೆಯ ಬೆಳೆಗಳು ಹಾನಿಯಾಗಿರುತ್ತವೆ ಎಂದು ತಿಳಿಸಿದರು. ಬರ ಪರಿಸ್ಥಿತಿ-ಕೇಂದ್ರ ತಂಡಕ್ಕೆ ಮನವರಿಕೆ: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ತಂಡಕ್ಕೆ ಅಂಕಿ-ಅಂಶಗಳು ಮತ್ತು ಛಾಯಾಚಿತ್ರ ಸಮೇತ ಮಾಹಿತಿಯನ್ನು ಬರಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. ಜಿಲ್ಲೆಯ ಎಲ್ಲಾ ನಾಲ್ಕು ತಾಲೂಕುಗಳಲ್ಲಿ ಬಿತ್ತನೆ ಸಂದರ್ಭದಲ್ಲಿ ಮೂರು ವಾರಕ್ಕಿಂತ ಹೆಚ್ಚು ಅವಧಿಯವರೆಗೆ ಮಳೆಯಾಗಿರಲಿಲ್ಲ. ಆದ್ದರಿಂದ ಬರ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ. ಜೂನ್ ಮಾಹೆಯಲ್ಲಿ ಮಳೆ ಬಾರದಿರುವುದರಿಂದ ಯಾವುದೇ ರೀತಿಯ ಬಿತ್ತನೆಕಾರ್ಯ ಆರಂಭಗೊಂಡಿಲ್ಲ. ಜುಲೈ ಮೊದಲ ಮೂರು ವಾರ ಮಳೆ ಬಂದಿರಲಿಲ್ಲ, ಕೊನೆಯ ವಾರದಲ್ಲಿ ಮಾತ್ರ ಮಳೆಯಾಗಿದ್ದರಿಂದ ಆಗ ಬಿತ್ತನೆಕಾರ್ಯ ಆರಂಭಗೊಂಡಿತು. ಆಗಸ್ಟ್ ಮಾಹೆಯಲ್ಲೂ ಮಳೆಕೊರತೆಯಾಗಿದ್ದರಿಂದ ರಾಜ್ಯ ಸರಕಾರವು ಬರ ಪರಿಸ್ಥಿತಿಯನ್ನು ಘೋಷಿಸಿತು ಎಂದು ಜಿಲ್ಲಾಧಿಕಾರಿ ವಿವರಿಸಿದರು. ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆ: ರೈತರ ಜಮೀನುಗಳಿಗೆ ಭೇಟಿ ನೀಡುವ ಮುನ್ನ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ತಂಡಕ್ಕೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಬೆಳೆಹಾನಿಯಾಗಿದೆ. ಬೆಳೆಹಾನಿ, ಕುಡಿಯುವ ನೀರಿನ ಕೊರತೆ, ಮೇವು ಕೊರತೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಕೊರತೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು ಎಂದು ತಿಳಿಸಿದರು. ಕೇಂದ್ರ ತಂಡವು ಜಿಲ್ಲೆಗೆ ಭೇಟಿ ನೀಡಿದ್ದು, ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಚರಿಸಿ ಬೆಳೆಹಾನಿಯನ್ನು ವೀಕ್ಷಿಸುವ ಮುಂಚೆ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿತು. ಇದಾದ ಬಳಿಕ ಜಿಲ್ಲೆಯ ಬರ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನು ಕೇಂದ್ರ ಅಧ್ಯಯನ ತಂಡವು ವೀಕ್ಷಿಸಿತು. ಬೆಂಗಳೂರು ಗ್ರಾಮಾಂತರ ಜಿಪಂ ಸಿಇಒ ಡಾ. ಕೆ.ಎನ್.ಅನುರಾಧ, ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಡಿವೈಎಸ್ಪಿ ರವಿ, ಉಪವಿಭಾಗಾಧಿಕಾರಿ ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತ ರೆಡ್ಡಿ, ಉಪ ನಿರ್ದೇಶಕಿ ವಿನುತಾ, ತೊಟಗಾರಿಕೆ ಉಪ ನಿರ್ದೇಶಕ ಗುಣವಂತ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಫೋಟೋ- 8ಕೆಡಿಬಿಪಿ5- ಬೆಂ.ಗ್ರಾ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬರ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.