ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಕಬ್ಬಿನ ಎಫ್ಆರ್‌ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು, ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು, 2022- 23ರ ಸಾಲಿನಲ್ಲಿ ಕಬ್ಬಿಗೆ ಟನ್‌ಗೆ 150 ಹೆಚ್ಚುವರಿ ದರ ಕೂಡಲೇ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕು. ಇಲ್ಲವೇ ಸರ್ಕಾರವೇ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿ ಫೆ.6ರಂದು ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು ಚಲೋ ನಡೆಸಲಾಗುತ್ತಿದ್ದು, ಜಿಲ್ಲೆಯಿಂದಲೂ ಸಾವಿರಾರು ರೈತರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರವೇ ವಿಮಾ ಕಂತು ಪಾವತಿಸಿ ₹5 ಲಕ್ಷ ಜೀವ ವಿಮೆ ಪಾಲಿಸಿ ನೀಡಲಾಗಿದೆ. ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಸಿಗುತ್ತದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಬೇಕು.
ರೈತರ ಎಲ್ಲ ಕೃಷಿ ಉತ್ಪನ್ನಗಳನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಪಂಜಾಬ್, ಹರಿಯಾಣ, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಎಂಎಸ್‌ಪಿ ಖರೀದಿ ಕೇಂದ್ರ ತೆರೆದು, ರೈತರಿಂದ ಖರೀದಿಸುವ ಮಿತಿಯನ್ನ ರದ್ದುಗೊಳಿಸಬೇಕು. ಬರಗಾಲ ಪೀಡಿತ ಪ್ರದೇಶದ ರೈತರಿಗೆ, ತಮಿಳುನಾಡಿಗೆ ನೀರು ಹರಿಸಿ ಕಾವೇರಿ ಆಚ್ಚುಕಟ್ಟು ರೈತರಿಗೆ ವಂಚನೆ ಮಾಡಿರುವ ಸರ್ಕಾರ ರೈತರಿಗೆ ಕೂಡಲೇ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.ರೈತರು ಬೆಳೆದ ಎಲ್ಲಾ ಪೌಷ್ಟಿಕ ಸಿರಿಧಾನ್ಯಗಳನ್ನು ಉತ್ಪಾದನಾ ವೆಚ್ಚಕ್ಕೆ ಬೆಂಬಲ ಬೆಲೆ ಹೆಚ್ಚುವರಿ ಬೆಲೆ ನಿಗದಿ ಮಾಡಿ ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂಥ ವ್ಯವಸ್ಥೆ ಜಾರಿಗೆ ಬರಬೇಕು. ರೈತರ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು. ಬೆಳೆವಿಮೆ ಪದ್ದತಿ ಕೆಲವು ನೀತಿಗಳು ಬದಲಾಗಬೇಕು. ಬೆಳೆನಷ್ಟಕ್ಕೆ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಸಿಗುವಂತಾಗಬೇಕು. ಸಕ್ಕರೆ ಕಾರ್ಖಾನೆಗಳ ಹಾಗೂ ಕಟಾವಿಗೆ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ಆರ್‌ಇಜಿ ಯೋಜನೆಯನ್ನು ಕಬ್ಬು ಕಟಾವು ಹಾಗೂ ಬಿತ್ತನೆಗೆ ಬಳಸಿಕೊಳ್ಳಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು. ಇಳುವರಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು. ಕಬ್ಬಿನ ಎಥನಾಲ್ ಉತ್ಪಾದನಾ ಲಾಭದ ಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು. ರಾಜ್ಯ ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು. ರೈತರ ಅಭಿವೃದ್ಧಿ ಪೂರ್ವಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.