ಸಾರಾಂಶ
ಹರಪನಹಳ್ಳಿ : ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ರಾಜ್ಯ ಸರ್ಕಾರ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಕ್ಕೆ ಅನ್ಯಾಯ ಎಸಗಿದ್ದು ಇದನ್ನು ಖಂಡಿಸಿ ಸರ್ಕಾರದ ವಿರುದ್ಧ ಸೆ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೊಲಂಬೋ ಸಮುದಾಯದ ಮುಖಂಡ ಎಸ್.ಪಿ. ಲಿಂಬ್ಯಾನಾಯ್ಕ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಅಂತರ್ ಹಿಂದುಳಿದಿರುವಿಕೆಯನ್ನು ಸಾಬೀತುಪಡಿಸಬೇಕು, ಅಧ್ಯಯನದ ಮೂಲಕ ವಾಸ್ತವಿಕ ದತ್ತಾಂಶ ಪತ್ತೆ ಹಚ್ಚಬೇಕಿದೆ, ಆದರೆ ಸರ್ಕಾರ ತರಾತುರಿಯಲ್ಲಿ ಏಕಪಕ್ಷಿಯವಾಗಿ ದೋಷಪೂರಿತ ದತ್ತಾಂಶ ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳಿಗಿದ್ದ ಮೀಸಲಾತಿಯ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಏರಿಸಿತ್ತು. ಬಂಜಾರ, ಭೋವಿ, ಕೊರಚ ಮತ್ತು ಕೊರಮ ಜಾತಿಗಳಿಗೆ ಒಳಮೀಸಲಾತಿಯಲ್ಲಿ ಶೇ.4.5 ಪ್ರಮಾಣವನ್ನು ನೀಡಿ ಇತರೆ ಅಲೆಮಾರಿ ಸಮುದಾಯದವರಿಗೆ ಶೇ.1 ಪ್ರಮಾಣ ನೀಡಿತ್ತು. ಆದರೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಕೊಲಂಬೋ ಹಾಗೂ ಅಲೆಮಾರಿ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶೇ.5ರಷ್ಟು ಮೀಸಲಾತಿ ನೀಡುವ ಮೂಲಕ ನಮ್ಮ ಸಮಾಜಕ್ಕೆ ಮರಣ ಶಾಸನ ನೀಡಿದೆ ಈ ಅನ್ಯಾಯದ ವಿರುದ್ಧ ನಾವೆಲ್ಲರೂ ಉಗ್ರವಾದ ಹೋರಾಟ ಕೈಗೊಳ್ಳುತ್ತೇವೆ ಎಂದರು.
ಕೊರಚ ಸಮಾಜದ ತಾಲೂಕು ಅಧ್ಯಕ್ಷ ಹೊನ್ನಪ್ಪ, ಭೋವಿ ಸಮಾಜದ ಮುಖಂಡ ಗುರುಸಿದ್ದಪ್ಪ, ಕೊರಮ ಸಮಾಜದ ಮುಖಂಡ ವಿನಾಯಕ ಭಜಂತ್ರಿ ಮಾತನಾಡಿದರು.
ತಾಪಂ ಮಾಜಿ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ್, ಕೊರಚ ಸಮಾಜದ ಮುಖಂಡ ಯಲ್ಲಾಪುರ ಕೆಂಚಪ್ಪ, ಗಂಗಾನಾಯ್ಕ್, ಪಂಪಾನಾಯ್ಕ್, ವರ‍್ಯಾನಾಯ್ಕ್, ಗೋಪಿನಾಯ್ಕ್, ವ್ಯಾಸನತಾಂಡ ಬಸವರಾಜನಾಯ್ಕ್, ಎ.ರಾಜಕುಮಾರ, ಅಶೋಕ, ವೆಂಕಟೆಶನಾಯ್ಕ್, ಜೋತಿನಾಯ್ಕ, ಶಿಲ್ಯಾನಾಯ್ಕ್, ಲಿಂಬ್ಯಾನಾಯ್ಕ, ಸೇವ್ಯಾನಾಯ್ಕ, ರಾಜುನಾಯ್ಕ್, ಚೇತನ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.