ಸಾರಾಂಶ
ಬೆಂಗಳೂರು : ಕೋಲ್ಕತಾದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೇಣದ ಬತ್ತಿ ಹಚ್ಚಿ, ಐದು ರುಪಾಯಿಗೆ ಒಂದು ಪ್ಲೇಟ್ ಪಾನಿ ಪುರಿ ಮಾರಾಟ ಮಾಡಿ ವೈದ್ಯ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೋಲ್ಕತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣ ತೀವ್ರ ಖಂಡನೀಯ. ಕೃತ್ಯಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನೂ ಬಂಧಿಸಿ ತ್ವರಿತ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು. ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಆಸ್ಪತ್ರೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರೋಗಿಗಳ ಜೀವವನ್ನು ಉಳಿಸುವ ವೈದ್ಯರಿಗೇ ದೇಶದಲ್ಲಿ ರಕ್ಷಣೆ ಇಲ್ಲದಂತೆ ಆಗಿರುವುದು ವೈದ್ಯ ವಲಯದಲ್ಲಿ ಆತಂಕ ಉಂಟು ಮಾಡಿದೆ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಿಸುವ ವಿದ್ಯಾರ್ಥಿನಿಯರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದ್ದರಿಂದ ಪಶ್ಚಿಮ ಬಂಗಾಳ ಸರ್ಕಾರ ತಕ್ಷಣ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ವಾತಂತ್ರ್ಯ ಉದ್ಯಾನವನಕ್ಕೆ ಆಗಮಿಸಿದ ಸಂಸದ ಡಾ। ಸಿ.ಎನ್.ಮಂಜುನಾಥ್ ಅವರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಬಂದ್‌ಗೆ ಆಫ್ತ್ಯಾಲ್ಮಿಕ್ ಸೊಸೈಟಿ ಬೆಂಬಲ
ಬೆಂಗಳೂರು : ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಹಾಗೂ ಆಸ್ಪತ್ರೆ ಮೇಲಿನ ದಾಳಿ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಆ.17ರಂದು ಕರೆ ನೀಡಿರುವ ಹೊರರೋಗಿಗಳ ವಿಭಾಗ (ಒಪಿಡಿ) ಸೇವೆ ಬಂದ್‌ಗೆ ಬೆಂಗಳೂರು ಆಫ್ತ್ಯಾಲ್ಮಿಕ್ ಸೊಸೈಟಿ (ಬಿಒಎಸ್) ಬೆಂಬಲ ಸೂಚಿಸಿದೆ.ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಲ್ಲಿ ಶನಿವಾರ (ಆ.17) ಬೆಳಗ್ಗೆ 6 ಗಂಟೆಯಿಂದ ಭಾನುವಾರ 6 ಗಂಟೆಯವರೆಗೆ ಒಪಿಡಿ ಸಂಪುರ್ಣವಾಗಿ ಸ್ಥಗಿತವಾಗಲಿದೆ.ಈ ಪ್ರಕರಣ ವೈದ್ಯ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಸರ್ಕಾರ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳ ಮೇಲಿನ ದಾಳಿಯ ಬಗ್ಗೆ ಶೂನ್ಯ ಅಸಹಿಷ್ಣುತೆ ಪಾಲಿಸಿಯನ್ನು ಜಾರಿಗೊಳಿಸಬೇಕು. ವೈದ್ಯರಿಗೆ ಕಾನೂನಿನ ರಕ್ಷಣೆಯನ್ನು ಹೆಚ್ಚಿಸಬೇಕು ಹಾಗೂ ಪ್ರಕರಣಗಳನ್ನ ಶೀಘ್ರವಾಗಿ ಇತ್ಯರ್ಥಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಬಿಒಎಸ್ ಒತ್ತಾಯಿಸಿದೆ.