ಬಿಬಿಎಂಪಿ ವ್ಯಾಪ್ತಿಯಲ್ಲಿಆಸ್ತಿ ತೆರಿಗೆ ಬಾಕಿ ಉಳಿಸಿದವರ ಬ್ಯಾಂಕ್‌ ಖಾತೆಯ ಹಣ ಜಪ್ತಿ!

| Published : Aug 17 2024, 01:45 AM IST / Updated: Aug 17 2024, 05:50 AM IST

ಸಾರಾಂಶ

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ಮಾಲೀಕರ ಬ್ಯಾಂಕ್‌ ಖಾತೆಯಲ್ಲಿ ಹಣವಿದ್ದರೆ, ಆ ಹಣವನ್ನು ಬಿಬಿಎಂಪಿಯೂ ಜಪ್ತಿ ಮಾಡಿಕೊಳ್ಳಬಹುದಾಗಿದೆ.

 ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡ ಮಾಲೀಕರ ಬ್ಯಾಂಕ್‌ ಖಾತೆಯಲ್ಲಿ ಹಣವಿದ್ದರೆ, ಆ ಹಣವನ್ನು ಬಿಬಿಎಂಪಿಯೂ ಜಪ್ತಿ ಮಾಡಿಕೊಳ್ಳಬಹುದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದ ಆಸ್ತಿಗಳಲ್ಲಿರುವ ಚರಾಸ್ತಿ ಮಾರಾಟ, ಆಸ್ತಿಗಳ ಮುಟ್ಟುಗೋಲು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿ ಅಂತಿಮ ಅಧಿಸೂಚನೆಯನ್ನು ರಾಜ್ಯ ಪತ್ರದ ಮೂಲಕ ಹೊರಡಿಸಲಾಗಿದೆ.

ಈ ನಿಯಮಾವಳಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದಿರುವ ಮಾಲೀಕರ ಸ್ಥಿರಾಸ್ತಿ, ಚರಾಸ್ತಿ ಹಾಗೂ ಬ್ಯಾಂಕ್‌ ಖಾತೆ ಸೀಜ್‌ ಮಾಡುವ ಬಗ್ಗೆ ನಿರ್ಧಿಷ್ಟ ಕ್ರಮಗಳನ್ನು ಸೂಚಿಸಲಾಗಿದೆ.

ಬಿಬಿಎಂಪಿ ಕಾಯ್ದೆ– 2020ರ ವಿವಿಧ ಸೆಕ್ಷನ್‌ಗಳಿಗೆ ತಿದ್ದುಪಡಿ ತಂದು, ‘ಆಸ್ತಿ ತೆರಿಗೆ ವಿಮರ್ಶೆ, ವಸೂಲಿ ಮತ್ತು ನಿರ್ವಹಣೆ’ಗಾಗಿ ಹೊಸ ನಿಯಮಗಳನ್ನು (ಬಿಬಿಎಂಪಿ ನಿಯಮಗಳು–2024) ಜಾರಿಗೆ ತರಲಾಗಿದೆ. ಆಸ್ತಿ ತೆರಿಗೆ ಪಾವತಿ ಮಾಡದ ಮಾಲೀಕರಿಗೆ ಈ ಹಿಂದೆ ನೋಟಿಸ್ ನೀಡಲಾಗುತ್ತಿದ್ದರೂ, ಕಾನೂನು ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಹೆಚ್ಚಿನ ಅವಕಾಶ ಇರಲಿಲ್ಲ. ಹೀಗಾಗಿ, ಹೊಸ ನಿಯಮಗಳನ್ನು ಜಾರಿಗೆ ತರುವ ಜೊತೆಗೆ ಬೇಡಿಕೆ ನೋಟಿಸ್, ವ್ಯಾಪಾರ ಪರವಾನಗಿ ರದ್ದು ನೋಟಿಸ್, ಎ ಖಾತಾ, ಬಿ ಖಾತಾಗಳ ಆಸ್ತಿ ತೆರಿಗೆಯನ್ನು ಪುನರ್‌ವಿಮರ್ಶೆ ಮಾಡುವ ಪ್ರತ್ಯೇಕ ನೋಟಿಸ್‌ಗಳ ಮಾದರಿಗಳೊಂದಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಮಾಲೀಕರಿಗೆ ನೀಡುವ ಬೇಡಿಕೆ ನೋಟಿಸ್‌ನಲ್ಲಿ 30 ದಿನಗಳಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ, ಸ್ವತ್ತುಗಳಲ್ಲಿನ ಚರಾಸ್ತಿ ಮಾರಾಟ, ಆಸ್ತಿ ಮುಟ್ಟುಗೋಲು (ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ದಾಖಲೆಗಳ ‘ಋಣಭಾರ’ದಲ್ಲಿ ಬಿಬಿಎಂಪಿ ಹೆಸರು ದಾಖಲು), ಬ್ಯಾಂಕ್ ಖಾತೆ ಜಪ್ತಿ, ಬಿಬಿಎಂಪಿ ಕಾಯ್ದೆ –2020ರ ಸೆಕ್ಷನ್ 325ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂಬುದನ್ನೂ ನಮೂದಿಸಲು ಹೊಸ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬಾಡಿಗೆದಾರರಿಗೂ ನೋಟಿಸ್‌

ಆಸ್ತಿಯನ್ನು ಬಾಡಿಗೆ ಅಥವಾ ಗುತ್ತಿಗೆಗೆ ನೀಡಿರುವ ಮಾಲೀಕರು ಬೇಡಿಕೆ ನೋಟಿಸ್‌ಗೆ ಗಡುವಿನೊಳಗೆ ಸ್ಪಂದನ ದೊರೆಯದಿದ್ದರೆ, ಆಸ್ತಿಯಲ್ಲಿರುವವರಿಗೆ ಬೇಡಿಕೆ ನೋಟಿಸ್ ಜಾರಿ ಮಾಡಲಾಗುತ್ತದೆ. ಮಾಲೀಕರಿಗೆ ಪಾವತಿಸುವ ಬಾಡಿಗೆಯಲ್ಲಿ ಅವರು 15 ದಿನದಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು. ಮಾಲೀಕರು ಹಾಗೂ ಬಾಡಿಗೆದಾರರಿಬ್ಬರೂ ಗಡುವಿನೊಳಗೆ ಆಸ್ತಿ ತೆರಿಗೆ ಪಾವತಿಸದಿದ್ದರೆ ಕಟ್ಟಡದಲ್ಲಿರುವ ಚರಾಸ್ತಿಯನ್ನು ಮೊದಲು ಜಪ್ತಿ ಮಾಡಿ, ಅದನ್ನು ಮಾರಾಟ ಮಾಡಿ ಆಸ್ತಿ ತೆರಿಗೆಗೆ ಜಮಾ ಮಾಡಿಕೊಳ್ಳಲಾಗುತ್ತದೆ.

ಆಸ್ತಿ ತೆರಿಗೆ ಪಾವತಿಸದ ಕಟ್ಟಡಗಳು ವ್ಯಾಪಾರ ಪರವಾನಗಿ ಹೊಂದಿದ್ದರೆ, ಪ್ರತ್ಯೇಕ ಬೇಡಿಕೆ ನೋಟಿಸ್ ನೀಡಿ, 30 ದಿನ ಗಡುವು ನೀಡಲಾಗುತ್ತದೆ. ಗಡುವು ಮುಗಿದ ಬಳಿಕ ವ್ಯಾಪಾರ ಪರವಾನಗಿ ರದ್ದುಪಡಿಸಲು ಹೊಸ ನಿಯಮಗಳಲ್ಲಿ ಅವಕಾಶ ನೀಡಲಾಗಿದೆ.

ವ್ಯವಹರಿಸಲು ಅವಕಾಶ ನೀಡಿದರೆ ಬ್ಯಾಂಕ್‌ ವಿರುದ್ಧ ಕ್ರಮಕ್ಕೆ ಅವಕಾಶ

ಇನ್ನು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕನ ಬ್ಯಾಂಕ್‌ ಖಾತೆಯಲ್ಲಿ ಹಣ ಇದ್ದರೆ, ಆ ಹಣವನ್ನು ಬ್ಯಾಂಕ್‌ ಅಧಿಕಾರಿಗೆ ನೋಟಿಸ್‌ ನೀಡಿ ಆಸ್ತಿ ತೆರಿಗೆ ಬಾಕಿ ಜಮಾ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಬಿಬಿಎಂಪಿ ಜಪ್ತಿ ಮಾಡಿದ ಬ್ಯಾಂಕ್‌ ಖಾತೆಯಲ್ಲಿ ವ್ಯವಹಾರ ನಡೆಸುವುದಕ್ಕೆ ಬ್ಯಾಂಕ್‌ ಅವಕಾಶ ನೀಡಿದರೆ, ಬ್ಯಾಂಕ್‌ ವಿರುದ್ಧವೂ ಕ್ರಮ ಕೈಗೊಳ್ಳುವುದಕ್ಕೆ ಹೊಸ ನಿಯಮದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ.