ಸಾರಾಂಶ
ದಾವಣಗೆರೆ : ವೃತ್ತಿ ರಂಗಭೂಮಿ ತವರಾಗಿದ್ದ ದಾವಣಗೆರೆಯಲ್ಲಿ ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಎಲ್ಲರೂ ಸೇರಿ, ವೃತ್ತಿ ರಂಗಭೂಮಿ ರಂಗಾಯಣವನ್ನು ಕಟ್ಟೋಣ ಎಂದು ರಂಗಾಯಣದ ನೂತನ ನಿರ್ದೇಶಕ, ಹಿರಿಯ ರಂಗಕರ್ಮಿ, ಲೇಖಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ವೃತ್ತಿ ರಂಗಭೂಮಿ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ, ಒಂದು ಕಾಲದಲ್ಲಿ ಇಲ್ಲಿ ಏಕಕಾಲಕ್ಕೆ ನಾಲ್ಕು ಕಂಪನಿಗಳು ಬಿಡಾರ ಹೂಡುತ್ತಿದ್ದವು. ವೃತ್ತಿ ರಂಗಭೂಮಿ ತವರು ಅಂತಾ ಇದೇ ಕಾರಣಕ್ಕೂ ದಾವಣಗೆರೆಯನ್ನು ಕರೆಯಲಾಗುತ್ತದೆ ಎಂದರು.
ಅಂದಿನ ಕಾಲದ 136 ಕಂಪನಿಗಳ ಪೈಕಿ 128 ಕಂಪನಿಗಳು ಇಲ್ಲಿ ನಾಟಕ ಪ್ರದರ್ಶಿಸಿದ ಇತಿಹಾಸ ಇದೆ. ಗುಬ್ಬಿ ವೀರಣ್ಣ, ವರದಾಚಾರ್, ಸುಬ್ಬಯ್ಯ ನಾಯ್ಡುರಂತಹ ದಿಗ್ಗಜರು ಇಲ್ಲಿ ವೃತ್ತಿ ರಂಗಭೂಮಿಯ ತೇರನ್ನು ಎಳೆದಿದ್ದಾರೆ. ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಬಂದಿಂತೆಂದರೆ ಅದರ ಜೊತೆಗೆ ವ್ಯಾಗನ್‌ಗಳಲ್ಲಿ ಜಿಂಕೆ, ನವಿಲು, ಮೊಲಗಳ ಸಹಿತ ರಂಗ ಪರಿಕರಗಳು ಇಲ್ಲಿಗೆ ಬರುತ್ತಿದ್ದವು ಎಂದು ತಿಳಿಸಿದರು.
ಅಂತಹ ವೈಭವ, ಸಂಭ್ರಮ ಮರುಕಳಿಸುವ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆ ಇಡೋಣ. ಅಭಿನಯ, ಸಂಗೀತ, ರಂಗಸಜ್ಜಿಕೆ ಸೇರಿದಂತೆ ನಾಟಕದ ಎಲ್ಲಾ ವಿಭಾಗಗಳನ್ನು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗೆ ಒಳಪಡಿಸೋಣ. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ವರ್ಷಕ್ಕೆ ಸರಾಸರಿ 15 ಸಾವಿರ ನಾಟಕ ಪ್ರದರ್ಶನಗೊಳ್ಳುತ್ತಿದೆ. ಗ್ರಾಪಂ ಮಟ್ಟದಲ್ಲಿ 3ರಿಂದ 4 ರಂಗ ಪ್ರಯೋಗಗಳಾಗುತ್ತವೆ. ಪ್ರತಿ ನಾಟಕ್ಕೆ ತಾವೇ ಐದಾರು ಲಕ್ಷ ರು. ಖರ್ಚು ಮಾಡಿ, ಸ್ವತಃನಾಟಕ ರಚಿಸಿ, ನಿರ್ದೇಶನ ಮಾಡುವವರಿದ್ದಾರೆ ಎಂದು ಹೇಳಿದರು.
ಅಂಕಿ ಅಂಶಗಳನ್ನು ನೋಡುವುದಾದರೆ ವರ್ಷಕ್ಕೆ ₹100 ಕೋಟಿ ನಾಟಕಕ್ಕಾಗಿಯೇ ಗ್ರಾಮೀಣ ಜನರು ಖರ್ಚು ಮಾಡುತ್ತಾರೆ. ಇದೆಲ್ಲವನ್ನೂ ತಮ್ಮ ಆತ್ಮಸಂತೋಷಕ್ಕಾಗಿ, ತಮ್ಮ ಖುಷಿಗಾಗಿ ಮಾಡುತ್ತಾರೆ. ವೃತ್ತಿ ರಂಗಭೂಮಿಯು ಜನ ಸಾಮಾನ್ಯರ ಪರಂಪರೆಗೆ ಸೇರಿದ್ದಾಗಿದೆ. ಪ್ರೇಕ್ಷಕ ಪರಂಪರೆಯನ್ನು ಇದು ಬೆಳೆಸಿದೆ. ನಗರ ಮಟ್ಟದಲ್ಲಿ ಹೊಸ ಅಲೆಯ ನಾಟಕ ಪ್ರಯೋಗಗಳಾಗುತ್ತಿವೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಮಲ್ಲಿಕಾರ್ಜುನ ಕಡಕೋಳ ಅಭಿಪ್ರಾಯಪಟ್ಟರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಮಾತನಾಡಿ, ಶಿಕ್ಷಣ, ಆರೋಗ್ಯ, ಉದ್ಯಮ ಕ್ಷೇತ್ರಗಳಲ್ಲಿ ದಾವಣಗೆರೆ ಗುರುತಿಸಿಕೊಂಡಿದೆ. ಆದರೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಿಂದೆ ಬಿದ್ದಿದೆ. ಮತ್ತೆ ಇಲ್ಲಿ ಗತವೈಭವ ಮರುಕಳಿಸಲಿ ಎಂದು ಹಾರೈಸಿದರು.
ಹಿರಿಯ ರಂಗಕರ್ಮಿ ಬಾ.ಮ.ಬಸವರಾಜಯ್ಯ ಮಾತನಾಡಿ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳರಿಗೆ ವೃತ್ತಿರಂಗಭೂಮಿಯ ಒಳ ಹೊರಗುಗಳ ಪರಿಚಯವಿದೆ. ಕಡಕೋಳರ ಅವದಿಯಲ್ಲಿ ರಂಗಭೂಮಿ ಹಳೆಯ ವೈಭವ ಮರುಕಳಿಸಲಿ ಎಂದು ಶುಭ ಕೋರಿದರು.
ರಂಗ ಸಂಘಟಕ ಎನ್.ಎಸ್. ರಾಜು ಮಾತನಾಡಿ, ಇಡೀ ರಾಜ್ಯದ ವ್ಯಾಪ್ತಿ ಹೊಂದಿರುವ ವೃತ್ತಿ ರಂಗಭೂಮಿ ರಂಗಾಯಣಕ್ಕೆ ದೊಡ್ಡ ಕಚೇರಿ ಅಗತ್ಯವಿದೆ. ಕಲಾವಿದರು, ಸಾರ್ವಜನಿಕರು ಬಂದು ಹೋಗಲು ಅನುಕೂಲವಾಗುವಂತಾಗಬೇಕು ಎಂದು ಮನವಿ ಮಾಡಿದರು.
ಹಿರಿಯ ರಂಗಕರ್ಮಿ ಬಸವರಾಜ ಐರಣಿ ಮಾತನಾಡಿ, ವೃತ್ತಿರಂಗಭೂಮಿ ರಂಗಾಯಣ ಸ್ಥಾಪನೆಯಾದಾಗಿನಿಂದ ನಿರೀಕ್ಷಿಸಿದಷ್ಟು ಚಟುವಟಿಕೆಗಳು ನಡೆದಿರಲಿಲ್ಲ. ಮುಂಬರುವ ದಿನಗಳಲ್ಲಿ ಅವುಗಳಿಗೆ ವೇಗ ದೊರೆಯಲಿ. ಮಲ್ಲಿಕಾರ್ಜುನ ಕಡಕೋಳರ ಅವಧಿಯಲ್ಲಿ ಹೆಚ್ಚು ಚಟುವಟಿಕೆಗಳಾಗಲಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ರಂಗ ಕಲಾವಿದ, ಚಿತ್ರನಟ ಆರ್.ಟಿ. ಅರುಣಕುಮಾರ್, ನಿವೃತ್ತ ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್, ರಂಗಕರ್ಮಿಗಳಾದ ಎನ್.ಎಸ್. ಸಿದ್ದರಾಜು, ರವೀಂದ್ರ ಅರಳಗುಪ್ಪಿ ಇದ್ದರು
ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ವೃತ್ತಿರಂಗಭೂಮಿ ರಂಗಾಯಣ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿದ್ದರು. ಈಗ ನನಗೆ ಅಂತಹ ಸಂಸ್ಥೆ ನಿರ್ದೇಶಕನ ಜವಾಬ್ದಾರಿ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಒಳ್ಳೆಯ ಕೆಲಸಗಳನ್ನು ಮಾಡೋಣ.
- ಮಲ್ಲಿಕಾರ್ಜುನ ಕಡಕೋಳ, ನಿರ್ದೇಶಕರು, ದಾವಣಗೆರೆ ರಂಗಾಯಣ