ಸಾರಾಂಶ
ರಟ್ಟೀಹಳ್ಳಿ ಮತ್ತು ಹಿರೇಕೆರೂರ ವ್ಯಾಪ್ತಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ತ್ವರಿತವಾಗಿ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳುವುದು ಮತ್ತು ಕುಸುಮ್-ಬಿ ಯೋಜನೆಯಲ್ಲಿ ನೀರಾವರಿ ಪಂಪ್‌ಸೆಟ್ ಅಳವಡಿಸಲು ರೈತರಿಗೆ ಆಗುವ ತೊಂದರೆಗಳ ಕುರಿತು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಮನವಿ
ಹಿರೇಕೆರೂರು: ರಟ್ಟೀಹಳ್ಳಿ ಮತ್ತು ಹಿರೇಕೆರೂರ ತಾಲೂಕುಗಳ ವ್ಯಾಪ್ತಿಯಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ತ್ವರಿತವಾಗಿ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳುವುದು ಮತ್ತು ಕುಸುಮ್-ಬಿ ಯೋಜನೆಯಲ್ಲಿ ನೀರಾವರಿ ಪಂಪ್‌ಸೆಟ್ ಅಳವಡಿಸಲು ರೈತರಿಗೆ ಆಗುವ ತೊಂದರೆಗಳ ಕುರಿತು ಶಾಸಕ ಯು.ಬಿ. ಬಣಕಾರ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರಿಗೆ ಮನವಿ ಮಾಡಿದ್ದಾರೆ.
ಹಿರೇಕೆರೂರ ತಾಲೂಕಿನ ವೀರಾಪುರ ಮತ್ತು ನಿಟ್ಟೂರು ಗ್ರಾಮಗಳಲ್ಲಿ 110/10 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ರಟ್ಟೀಹಳ್ಳಿ ತಾಲೂಕು ಹಳ್ಳೂರು ಗ್ರಾಮದಲ್ಲಿರುವ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು 110/10 ಕೆವಿ ಉನ್ನತೀಕರಣ ಕಾಮಗಾರಿಯ ಮರು ಟೆಂಡರ್ ಮಾಡಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಗುಡ್ಡದ ಮಾದಾಪುರ ಗ್ರಾಮದಲ್ಲಿ 110/10 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಈಗಾಗಲೇ ತಾಂತ್ರಿಕ ವಿವರಗಳನ್ನು ಕೆಪಿಟಿಸಿಎಲ್‌ಗೆ ಸಲ್ಲಿಸಿದ್ದು, ಇದಕ್ಕೂ ಶೀಘ್ರ ಮಂಜೂರಾತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಟ್ಟೀಹಳ್ಳಿ ಮತ್ತು ಹಿರೇಕೆರೂರ ತಾಲೂಕುಗಳ ವ್ಯಾಪ್ತಿಯಲ್ಲಿ ಕುಸುಮ್-ಬಿ ಯೋಜನೆಯಡಿ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿದ್ದು, ಕೆಲವು ನೀರಾವರಿ ಪಂಪ್‌ಸೆಟ್‌ಗಳಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸಲು ನೋಂದಣಿ ಕಾರ್ಯ ಪ್ರಾರಂಭವಾಗಿದೆ. ಆದರೆ, ಗ್ರಾಹಕರು ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಂಡಾಗ ಆಗುವ ತೊಂದರೆಗಳನ್ನು ನನ್ನ ಗಮನಕ್ಕೆ ತಂದಿದ್ದು, ಅವುಗಳನ್ನು ಪರಿಶೀಲಿಸಿ ಗ್ರಾಹಕರು ಒಪ್ಪಿದರೆ ಮಾತ್ರ ಪಂಪ್‌ಸೆಟ್‌ಗೆ ಸೋಲಾರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಗ್ರಾಹಕರ ತೊಂದರೆಗಳು: ರಟ್ಟೀಹಳ್ಳಿ ಮತ್ತು ಹಿರೇಕೆರೂರ ತಾಲೂಕುಗಳಲ್ಲಿ ವೀಳ್ಯದೆಲೆ, ಅಡಕೆ ಮತ್ತು ತೆಂಗಿನ ತೋಟಗಳಿದ್ದು, ಸೋಲಾರ್ ಅಳವಡಿಸಲು ತೊಂದರೆಯಾಗುತ್ತದೆ ಮತ್ತು ಸೋಲಾರ್ ಪ್ಯಾನೆಲ್ ಮೇಲೆ ಗಿಡಮರಗಳ ನರೆಳು ಬಿದ್ದು ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ. ವೀಳ್ಯದೆಲೆ ತೋಟ ಮತ್ತು ಭತ್ತದ ಬೆಳೆಗಳು, ನೆಟ್ ಮತ್ತು ಪಾಲಿ ಹೌಸ್‌ಗಳ ಪಂಪ್‌ಸೆಟ್‌ಗಳಿಗೆ ಮಳೆಗಾಲದಲ್ಲೂ ನೀರು ಬೇಕಾಗುತ್ತದೆ. ಮಳೆಗಾಲದಲ್ಲಿ ಪಂಪ್‌ಸೆಟ್ ಚಾಲನೆಗೆ ಅಗತ್ಯವಾದಷ್ಟು ಬಿಸಿಲು ಬೀಳುವುದಿಲ್ಲ. ನದಿ ತೀರದ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಲು ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ. ಒಂದೇ ಸ್ಥಳದಲ್ಲಿ ಸುಮಾರು ಪಂಪ್‌ಸೆಟ್‌ಗಳಿರುವುದರಿಂದ ಹೆಚ್ಚು ಸ್ಥಳಾವಕಾಶ ಬೇಕಾಗುತ್ತದೆ. ಈ ಹಿಂದೆ ಅವಳಿ ತಾಲೂಕಿನಲ್ಲಿ ಅಳವಡಿಸಿದ ಸೋಲಾರ್ ಪಂಪ್‌ಸೆಟ್‌ಗಳು ಚಾಲನೆಯಲ್ಲಿ ಇಲ್ಲ. ಅತೀ ಹೆಚ್ಚು ಗಾಳಿ ಬೀಸುವುದರಿಂದ ಈ ಹಿಂದೆ ಅಳವಡಿಸಿದ ಸೋಲಾರ್ ಪ್ಯಾನೆಲ್ ಬೋರ್ಡ್‌ಗಳಿಗೆ ಹಾನಿಯಾಗುರುತ್ತದೆ. ತಕ್ಷಣದಲ್ಲಿ ನಿರ್ವಹಣೆ ಮಾಡುವುದು ಸಾಧ್ಯವಿರುವುದಿಲ್ಲ ಮತ್ತು ಸುರಕ್ಷತೆ ಇರುವುದಿಲ್ಲ ಎಂದು ರೈತರು ಶಾಸಕರ ಗಮನಕ್ಕೆ ತಂದಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))