ಬೀದರ್‌ನಲ್ಲಿ ರಸ್ತೆಗಳ ದುರಾವಸ್ಥೆ : ಮಳೆಯಾರ್ಭಟಕ್ಕೆ ಹೊಂಡವಾದ ತಗ್ಗು, ಗುಂಡಿಗಳು

| Published : Aug 17 2024, 01:03 AM IST / Updated: Aug 17 2024, 08:17 AM IST

ಸಾರಾಂಶ

ಬೀದರ್‌ನಲ್ಲಿ ರಸ್ತೆಗಳ ದುರಾವಸ್ಥೆ ಮತ್ತು ಭಾರಿ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೊಂಡಗಳಾಗಿ ಮಾರ್ಪಟ್ಟಿವೆ. ರೈಲ್ವೆ ಕೆಳ ಸೇತುವೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ, ವಾಹನ ಸವಾರರ ಜೀವಕ್ಕೆ ಕುತ್ತು ತಂದೊಡ್ಡುತ್ತಿವೆ. ಗುಂಪಾ ರಸ್ತೆಯೂ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕಾರ್ಯ ನಡೆದಿಲ್ಲ.

ಅಪ್ಪಾರಾವ್ ಸೌದಿ

  ಬೀದರ್ :  ಬೀದರ್‌ನಲ್ಲಿ ರಸ್ತೆಗಳ ದುರಾವಸ್ಥೆ ವಿಪರೀತವಾಗುವದರ ಜೊತೆಗೆ ಭರ್ಜರಿ ಮಳೆಯಿಂದಾಗಿ ರಸ್ತೆ ಗುಂಡಿಗಳೆಲ್ಲ ತುಂಬಿ ಹೊಂಡಗಳಾಗಿವೆ. ಮಳೆ ನೀರಿನಿಂದ ತುಂಬಿರುವ ರಸ್ತೆಯ ಮಧ್ಯದ ಹೊಂಡಗಳಲ್ಲಿ ವಾಹನ ಸವಾರ ಬಿದ್ದು ಎದ್ದು ಹಿಡಿಶಾಪ ಹಾಕುತ್ತಿದ್ದಾನೆ. ಅಷ್ಟಕ್ಕೂ ಇಲ್ಲಿನ ರೈಲ್ವೆ ಕೆಳ ಸೇತುವೆಗಳ ದುಸ್ಥಿತಿ ಪ್ರತಿಯೊಬ್ಬ ವಾಹನ ಚಾಲಕ, ಸವಾರರ ಜೀವ ಹಿಂಡುತ್ತಿವೆ.

ಇಲ್ಲಿನ ಬೊಮ್ಮಗೊಂಡೇಶ್ವರ ವೃತ್ತಕ್ಕೆ ಸಾಗುವ ಮಾರ್ಗದಲ್ಲಿರುವ ರೈಲ್ವೆ ಕೆಳ ಸೇತುವೆ, ಬಸವೇಶ್ವರ ವೃತ್ತದ ಬಳಿಯಿರುವ ರೈಲ್ವೆ ಕೆಳ ಸೇತುವೆ, ಆದರ್ಶ ನಗರ ರೈಲ್ವೆ ಕೆಳ ಸೇತುವೆಗಳ ರಸ್ತೆಗಳಲ್ಲಂತೂ ರಸ್ತೆ ಗುಂಡಿಗಳು ಭಾರಿ ಪ್ರಮಾಣದಲ್ಲಿದೆ ಆದರೆ ಇವುಗಳನ್ನು ರಿಪೇರಿ ಮಾಡಲೂ ಇಲಾಖೆಗಳು ಮೀನಾಮೇಶ ಎಣಿಸುತ್ತಿರುವದು ಅಚ್ಚರಿ ಮೂಡಿಸಿದೆ. ಈ ಸೇತುವೆಗಳ ಕೆಳಗಡೆಯಿಂದ ಸಾಗಿ ಹೋಗುವುದೇ ಬಹುದೊಡ್ಡ ಸಾಹಸ. ಅತಿಯಾದ ವಾಹನ ದಟ್ಟಣೆಯಿಂದ ಸೇತುವೆಯ ಮಾರ್ಗ ತುಂಬಿ ಹೋಗಿರುತ್ತದೆ. ಹಲವು ವಾಹನಗಳು ಗುಂಡಿಗಳಿಗೆ ಸಿಲುಕಿ ಚಾಲಕ ಮತ್ತು ಸವಾರ ಕೆಳಗುರುಳಿದ್ದೂ ನಿತ್ಯದ ಘಟನೆ ಎಂಬಂತಾಗಿದೆ.

ಇಲ್ಲಿನ ಗುಂಪಾ ರಸ್ತೆ ರಾಮಚೌಕ್‌ನಿಂದ ಹಾರೂರಗೇರಿ ಕಮಾನ್‌ ಮಾರ್ಗವಂತೂ ಸಂಪೂರ್ಣ ಹಾಳಾಗಿ ಹೋಗಿದೆ. ಇಲ್ಲಿ ಹೊಸ ರಸ್ತೆಗಿಂತ ರಿಪೇರಿಗೇ ಲಕ್ಷಗಟ್ಟಲೇ ಹಣ ವ್ಯಯಿಸಿದ್ದರೂ ಗುಣಮಟ್ಟದ ಕಾಮಗಾರಿ ನಡೆಯದಿರುವದು, ವೈಜ್ಞಾನಿಕವಾಗಿ ರಿಪೇರಿ ಮಾಡದೇ ಇರುವದಕ್ಕೆ ಸಾಕ್ಷಿಯಾಗಿದೆ.

ಡಾಂಬರ್‌ಗೂ ಗತಿಯಿಲ್ಲದಂಥ ರಸ್ತೆಯ ಮೇಲೆ ವಾಹನ ಸವಾರರ ಡ್ಯಾನ್ಸ್‌ ಅನಿವಾರ್ಯ ಎಂಬಂತಾಗಿದೆ. ರಸ್ತೆಯ ರಿಪೇರಿ ಕಾರ್ಯಕ್ಕೆ ಜಿಲ್ಲಾಡಳಿತ ತೀವ್ರಗತಿಯ ಕ್ರಮಗಳನ್ನು ಕೈಗೊಂಡು ಜನರ ಜೀವ ಕಾಪಾಡಬೇಕಿದೆ.