ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆ ಖಾತರಿಗೆ ಪ್ರತಿಭಟನೆ

| Published : Aug 17 2024, 01:03 AM IST

ಸಾರಾಂಶ

ದಾವಣಗೆರೆಯಲ್ಲಿ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ಅಪರ ಜಿಲ್ಲಾಧಿಕಾರಿ ಲೋಕೇಶ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾನೂನು, ಡಾ.ಸ್ವಾಮಿನಾಥನ್ ವರದಿ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ರೈತರು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ, ಪ್ರತಿಭಟಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಟ್ರ್ಯಾಕ್ಟರ್‌ ಗಳ ಸಮೇತ ಪ್ರತಿಭಟನೆ ನಡೆಸಿ ತಮ್ಮ ವಿವಿಧ ಬೇಡಿಕೆಗಳನ್ನು ಒಳಗೊಂಡ ಹಕ್ಕೊತ್ತಾಯಿಸಿ ಪ್ರತಿಭಟನಾ ನಿರತ ರೈತರು ಶ್ರೀ ಜಯದೇವ ವೃತ್ತಕ್ಕೆ ತೆರಳಿ ರಸ್ತೆ ತಡೆ ಮಾಡಿದರು. ನಂತರ ಸ್ಥಳಕ್ಕೆ ಧಾವಿಸಿದ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ ಮುಖಾಂತರ ಪ್ರಧಾನ ಮಂತ್ರಿಗೆ ರೈತರು ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷವಾದರೂ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಿಲ್ಲ. ಎಂಎಸ್‌ಪಿ ಬೆಲೆ ಕಾನೂನಾತ್ಮಕ ಮಾಡಿಲ್ಲ. ರೈತರ ಟ್ಯಾಕ್ಟರ್‌ಗೆ ಡೀಸೆಲ್ ಸಬ್ಸಿಡಿ ದರದಲ್ಲಿ ನೀಡಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಬೇಡಿಕೆಗೆ ಸ್ಪಂದಿಸಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಬೆಳೆ ವಿಮೆ ನೀತಿ ಬದಲಾಯಿಸಿ, ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಯಾಗಬೇಕು. ಬರಗಾಲ, ಅತಿವೃಷ್ಟಿ, ಮಳೆ ಹಾನಿ, ಪ್ರವಾಹ ಹಾನಿ ಪ್ರಕೃತಿ ವಿಕೋಪದ ಹಾನಿ, ಬೆಳೆ ನಷ್ಟ ಪರಿಹಾರದ ಎನ್.ಡಿ.ಆರ್.ಎಫ್ ಮಾನದಂಡ ಬದಲಾಯಿಸಬೇಕು. 60 ವರ್ಷ ಕೃಷಿ ಸೇವೆ ಸಲ್ಲಿಸಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಲೇಬೇಕು. ಸಂಸದರ ನಿಧಿಯನ್ನು ರಾಜ್ಯಾದ್ಯಂತ ಕೆರೆ-ಕಟ್ಟೆ, ಕಾಲುವೆ ಹೂಳೆತ್ತಿಸಲು, ಪುನಶ್ಚೇತನಗೊಳಿಸಲು ಬಳಸಬೇಕು ಎಂದು ಆಗ್ರಹಿಸಿದರು.

ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ, ಕುಡಿಯುವ ನೀರು ಸೌಲಭ್ಯಕ್ಕೆ ಸಂಸದರ ಅನುದಾನ ಬಳಸುವಂತಾಗಬೇಕು. ದೇಶದ ರೈತರನ್ನು ಸಂರಕ್ಷಿಸಲು ಭಾರತ ಸರ್ಕಾರವು ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರ ಬರಬೇಕು. ನಕಲಿ ಬಿತ್ತನೆ ಬೀಜ. ಗೊಬ್ಬರ, ಕೀಟನಾಶಕ ಮಾರಾಟ ತಡೆಗೆ ಕಠಿಣ ಕಾನೂನು ತರಬೇಕು. ರಸಗೊಬ್ಬರ, ಕೀಟನಾಶಕ, ಟ್ರ್ಯಾಕ್ಟರ್ ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ತೆರಿಗೆ ರದ್ದು ಮಾಡಬೇಕು. ರೈತರ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುವುದನ್ನು ತಪ್ಪಿಸಲು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರವು ಕೃಷಿ ಸಮ್ಮಾನ್ ಯೋಜನೆ ತನ್ನ ಪಾಲಿನ ಪ್ರೋತ್ಸಾಹಧನ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ರಾಂಪುರ ಬಸವರಾಜ, ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರಿ, ಮಿಯಾಪುರದ ತಿರುಮಲೇಶ, ರಾಜಯೋಗಿ ಹೆಬ್ಬಾಳ್, ಕೆ.ಎಸ್.ಪ್ರಸಾದ, ಪ್ರತಾಪ ಮಾಯಕೊಂಡ, ಬಾಡದ ಹನುಮಂತಪ್ಪ, ಚಂದ್ರಪ್ಪ, ನಾಗರಕಟ್ಟೆ ಜಯನಾಯ್ಕ, ಕುಕ್ಕವಾಡ ರುದ್ರಮುನಿ, ಹರಿಹರ ಬಿ.ಎಸ್.ಬಸವರಾಜಪ್ಪ, ಫಯಾಜ್ ಉಲ್ಲಾ ಇತರೆ ರೈತರು ರ್‍ಯಾಲಿಯಲ್ಲಿದ್ದರು.