ಸಾರಾಂಶ
ಪ್ರತಿ ಮನೆಗಳಲ್ಲಿ ಕಳಶ ಪ್ರತಿಷ್ಠಾಪನೆ ಮಾಡಿ ಮಹಾಲಕ್ಷ್ಮೀದೇವಿ ಮುಖವಾಡಧಾರಣೆ ಮಾಡಿ ಆವಾಹನೆ ಮಾಡಿಕೊಂಡರು. ದೇವಿಗೆ ಪಂಚಾಮೃತಾಭಿಷೇಕ ಮಾಡಿ ಶಾಸ್ತ್ರೋಕವಾಗಿ ಪೂಜಿಸಿದರು. ಕ್ಷೀರ, ಮಧು, ಶರ್ಕರ(ಸಕ್ಕರೆ), ದಧಿ(ಮೊಸರು), ಗೃಥ(ತುಪ್ಪ)ದಲ್ಲಿ ಅಭಿಷೇಕ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಹೋಬಳಿಯಾದ್ಯಂತ ವಿವಿಧ ದೇಗುಲಗಳಲ್ಲಿ ಸಾರ್ವಜನಿಕರು, ಭಕ್ತರು ಪೂಜೆ ಸಲ್ಲಿಸಿದರು.ಗ್ರಾಮಗಳಲ್ಲಿ ಗ್ರಾಮದೇವತೆಗೆ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಿದರು. ಪಟ್ಟಣದ ಮಹಾಲಕ್ಷ್ಮೀ ದೇವಿ, ಪಾರ್ವತಿದೇವಿ, ಆನೆಗೊಳ, ಬೋಳಮಾರನಹಳ್ಳಿ, ಐಕನಹಳ್ಳಿಯ ಲಕ್ಷ್ಮೀದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಪ್ರತಿ ಮನೆಗಳಲ್ಲಿ ಕಳಶ ಪ್ರತಿಷ್ಠಾಪನೆ ಮಾಡಿ ಮಹಾಲಕ್ಷ್ಮೀದೇವಿ ಮುಖವಾಡಧಾರಣೆ ಮಾಡಿ ಆವಾಹನೆ ಮಾಡಿಕೊಂಡರು. ದೇವಿಗೆ ಪಂಚಾಮೃತಾಭಿಷೇಕ ಮಾಡಿ ಶಾಸ್ತ್ರೋಕವಾಗಿ ಪೂಜಿಸಿದರು. ಕ್ಷೀರ, ಮಧು, ಶರ್ಕರ(ಸಕ್ಕರೆ), ದಧಿ(ಮೊಸರು), ಗೃಥ(ತುಪ್ಪ)ದಲ್ಲಿ ಅಭಿಷೇಕ ನೆರವೇರಿಸಿದರು.ನೈವೇದ್ಯ ಸಮರ್ಪಣೆ ಮಾಡಿದರು. ಕಡಲೆ ಬೇಳೆಯ ವಿವಿಧ ತಿನಿಸು,ಸಿಹಿ ಪೊಂಗಲು, ಹುಗ್ಗೆ, ಚಕ್ಕುಲಿ, ನಿಪ್ಪಟ್ಟು, ಕೋಡಬಳೆ, ಪಾಯಸ, ವಿವಿಧ ಫಲಗಳ ನೈವೇದ್ಯ ಅರ್ಪಿಸಿದರು. ದೇವಿ ವ್ರತಾಚರಣೆ ಮಾಡಿ ಸುಮಂಗಲಿರಯರಿಗೆ ಅರಿಷಿಣ, ಕುಂಕುಮ, ಹಸಿರು ರವಿಕೆ, ಬಳೆ, ಸಿಹಿ ಪ್ರಸಾದ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ವ್ಯಾಪಾರಿಗಳ ಮನಬಂದಂತೆ ಏರಿಸಿದ್ದ ಬೆಲೆಯಿಂದ ನಾಗರಿಕರು ಬೇಸರಪಟ್ಟರು. ಮಾರು ಹೂವಿಗೆ 80 ರು.ಗಳಾದರೆ, ಹಲವು ವ್ಯಾಪಾರಿಗಳು ಪಟ್ಟಣದ ಅಂಗಡಿಬೀದಿಯಲ್ಲಿ ರಸ್ತೆಯಲ್ಲಿಯೇ ವ್ಯಾಪಾರಕ್ಕಿಳಿದು ಸಾರ್ವಜನಿಕರು, ವಾಹನ ಸವಾರರ ಓಡಾಟಕ್ಕೆ ಕಂಟಕವಾದರು .ಮನಬಂದಂತೆ ಹಣ್ಣು, ಬಳೆ, ಬಾಗಿನ, ರವಿಕೆ ಬಟ್ಟೆಗಳ ಬೆಲೆ ಹೆಚ್ಚಿಸಿಕೊಂಡು ವ್ಯಾಪಾರಕ್ಕೆ ಸ್ಪರ್ಧೆಗಿಳಿದು ಕೂಗುತ್ತಿದ್ದರು.