ಆಯುರ್ವೇದ ಔಷಧಿ ಮಾರಾಟಕ್ಕೆ ತೆರಳಿ ಗಾನಾ ದೇಶದಲ್ಲಿ ಹಕ್ಕಿಪಿಕ್ಕಿ ದಂಪತಿ ಬದುಕು ಅತಂತ್ರ

| Published : Aug 17 2024, 01:00 AM IST / Updated: Aug 17 2024, 08:21 AM IST

ಆಯುರ್ವೇದ ಔಷಧಿ ಮಾರಾಟಕ್ಕೆ ತೆರಳಿ ಗಾನಾ ದೇಶದಲ್ಲಿ ಹಕ್ಕಿಪಿಕ್ಕಿ ದಂಪತಿ ಬದುಕು ಅತಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಸಾಜ್ ಮತ್ತು ಆಯುರ್ವೇದ ಔಷಧಿ ಮಾರಾಟಕ್ಕೆಂದು ಆಫ್ರಿಕಾದ ಗಾನಾ ದೇಶಕ್ಕೆ ತೆರಳಿದ್ದ ಕನ್ನಡಿಗ ದಂಪತಿಗೆ ಆಘಾತ ಎದುರಾಗಿದೆ. ಪತಿ ಜಗನ್ನಾಥ್ ಅವರಿಗೆ ಆರೋಗ್ಯ ಸಮಸ್ಯೆಯಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ನಾಗರಾಜ ಎಸ್.ಬಡದಾಳ್‌

 ದಾವಣಗೆರೆ :  ಮಸಾಜ್, ಆಯುರ್ವೇದ ಔಷಧಿ ಮಾರಾಟಕ್ಕೆಂದು ಎರಡು ತಿಂಗಳ ಹಿಂದೆ ಪತ್ನಿ ಸಮೇತ ಆಫ್ರಿಕಾ ಖಂಡದ ಗಾನಾ ದೇಶಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ರಕ್ತದೊತ್ತಡ, ಮಧುಮೇಹದಿಂದಾಗಿ ಪ್ರಜ್ಞೆ ಇಲ್ಲದೇ ಕುಸಿದು ಬಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ವರದಿಯಾಗಿದೆ.

ಆಫ್ರಿಕಾ ಖಂಡದ ಗಾನಾ ದೇಶದ ರಾಜಧಾನಿ ಆಕ್ರಾದಿಂದ ಸುಮಾರು 600 ಕಿ.ಮೀ ದೂರದ ತಮಾಲಿ ಹೆಸರಿನ ಗ್ರಾಮವೊಂದರಲ್ಲಿ ಮಂಡ್ಯ ಜಿಲ್ಲೆ ಮಹದೇವಪುರ ಗ್ರಾಮ ಸಮೀಪದ ಹಕ್ಕಿಪಿಕ್ಕಿ ಜನಾಂಗದ ಕಾಲನಿ ಚನ್ನಹಳ್ಳಿ ಬಾರೆ ವಾಸಿಯಾದ ಜಗನ್ನಾಥ(44 ವರ್ಷ), ಪತ್ನಿ ವೀಣಾ(36) ವರ್ಷ ಈಗ ಅತಂತ್ರರಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಪ್ರತಿ ಬಾರಿಯೂ ಆಫ್ರಿಕಾ ಖಂಡದ ಸುಡಾನ್‌, ಗಾನಾ ಸೇರಿ ವಿವಿಧ ದೇಶಗಳಿಗೆ ರಾಜ್ಯದಿಂದ ಸಾವಿರಾರು ಹಕ್ಕಿಪಿಕ್ಕಿ ಕುಟುಂಬಗಳು ಮಸಾಜ್, ಆಯುರ್ವೇದ ಔಷಧಿ, ಚಿಕಿತ್ಸೆ ನೀಡಲೆಂದು ಹೋಗುತ್ತವೆ. ಅದೇ ರೀತಿ ಮಂಡ್ಯ ಜಿಲ್ಲೆ ಮೂಲಕ ಜಗನ್ನಾಥ, ಪತ್ನಿ ವೀಣಾ ಸಮೇತ ಗಾನಾ ದೇಶದ ಹಳ್ಳಿಯೊಂದಕ್ಕೆ ತೆರಳಿದ್ದರು.

ದೈತ್ಯದೇಹಿಯಾದ ಜಗನ್ನಾಥಗೆ ಇದ್ದಕ್ಕಿದ್ದಂತೆ ರಕ್ತದೊತ್ತಡ, ಮಧುಮೇಹ ಹೆಚ್ಚಾಗಿದೆ. ಮಸಾಜ್ ಮಾಡಿಕೊಂಡು, ಒಂದಿಷ್ಟು ಕಾಸು ಮಾಡಿಕೊಂಡು ಭಾರತಕ್ಕೆ ಮರಳಲು ಜಗನ್ನಾಥ ದಂಪತಿ ನಿರ್ಧರಿಸಿದ್ದರು. ಆದರೆ, ದುರಾದೃಷ್ಟಕ್ಕೆ ಬಿಪಿ, ಶುಗರ್ ಹೆಚ್ಚಾಗಿದ್ದರಿಂದ ಜಗನ್ನಾಥ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಆತನ ತಲೆ ಭಾಗಕ್ಕೆ ಪೆಟ್ಟಾಗಿದ್ದು, ಗಾನಾದ ಪುಟ್ಟ ಹಳ್ಳಿಯೊಂದರ ಸಣ್ಣ ಆಸ್ಪತ್ರೆಗೆ ದಾಖಲಿಸಿದೆ ಎಂದು ತಿಳಿದು ಬಂದಿದೆ.

ಮೊದಲೇ ಬಡ ರಾಷ್ಟ್ರ, ಅದರಲ್ಲೂ ಅಲ್ಲಿನ ಕುಗ್ರಾಮವೊಂದರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲಿ ಯಾವುದೇ ಚಿಕಿತ್ಸಾ ವ್ಯವಸ್ಥೆ ಇಲ್ಲ. ಚಿಕಿತ್ಸೆ ವ್ಯವಸ್ಥೆ ಇಲ್ಲದೇ, ಪತಿ ಜಗನ್ನಾಥನ ಸ್ಥಿತಿ ಕಂಡು, ಪತ್ನಿ ವೀಣಾ ಏನು ಮಾಡಬೇಕೆಂಬುದೇ ತೋಚದೆ ಕರ್ನಾಟಕದಲ್ಲಿರುವ ತಮ್ಮ ಹಕ್ಕಿಪಿಕ್ಕಿ ಸಮಾಜ ಬಾಂಧವರಿಗೆ ವಾಟ್ಸಪ್ ಮೆಸೇಜ್ ಮಾಡಿ, ಅಲ್ಲಿ ಜಗನ್ನಾಥ ಸ್ಥಿತಿ ಹೇಳಿಕೊಂಡು ಕಣ್ಣೀರಿಡುತ್ತಿದ್ದಾರೆ.

ಕನಿಷ್ಠ ಸೌಲಭ್ಯವೂ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗದ ಅಸಹಾಯಕತೆಯನ್ನು ಅಲ್ಲಿನ ವೈದ್ಯರು, ಶುಶ್ರೂಷಕರು ತೋಡಿಕೊಳ್ಳುತ್ತಿದ್ದಾರೆ. ವೀಣಾ ಗಾನಾದ ವಲಸೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಏನಾದರೂ ಮಾಡಿ ತನ್ನ ಗಂಡ ಹಾಗೂ ತನಗೆ ಭಾರತಕ್ಕೆ ಹೋಗಲು ಅವಕಾಶ ಮಾಡಿಕೊಡಿ ಅಂತೆಲ್ಲಾ ವೀಣಾ ಸ್ಥಳೀಯ ಅಧಿಕಾರಿಗಳು, ವೈದ್ಯರು, ಅಲ್ಲಿನ ಮುಖಂಡರಿಗೆ ಪರಿಪರಿಯಾಗಿ ಬೇಡಿಕೊಂಡರೂ ಪ್ರಯೋಜನವಾಗಿಲ್ಲ.

ಸದ್ಯಕ್ಕೆ ಗಾನಾದಿಂದ ಜಗನ್ನಾಥ ಹಾಗೂ ವೀಣಾರನ್ನು ಭಾರತ ಸರ್ಕಾರ ಹೇಗಾದರೂ ಮಾಡಿ, ಭಾರತಕ್ಕೆ ಕರೆಸಿಕೊಳ್ಳಬೇಕು. ಜಗನ್ನಾಥನಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಗಾನಾ ದೇಶದ ಸರ್ಕಾರ ಅಥವಾ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ತಮ್ಮ ಸಮುದಾಯದ ಮಂಡ್ಯ ಜಿಲ್ಲೆ ಮೂಲಕ ಜಗನ್ನಾಥ, ವೀಣಾ ದಂಪತಿ ವಾಪಾಸ್ಸು ಕರೆಸಿಕೊಳ್ಳುವಂತೆ ಹಕ್ಕಿಪಿಕ್ಕಿ ಸಮುದಾಯದವರು ಒತ್ತಾಯಿಸಿದ್ದಾರೆ.

ಕಳೆದ ವರ್ಷವಷ್ಟೇ ಆಫ್ರಿಕಾದ ಸೂಡಾನ್ ದೇಶದಲ್ಲಿ ಆಂತರಿಕ ಸಂಘರ್ಷದ ಮಧ್ಯೆ ಸಿಲುಕಿ ನಲುಗಿದ್ದ ಸುಮಾರು 3 ಸಾವಿರಕ್ಕೂ ಅದಿಕ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬರಲು ಕನ್ನಡಪ್ರಭದ ಸರಣಿ ವರದಿಗಳು ಕಾರಣವಾಗಿದ್ದವು. ಇದೀಗ ಅದೇ ನಂಬಿಕೆ ಮೇಲೆ ಆಫ್ರಿಕಾದ ಗಾನಾದಲ್ಲಿ ಸಿಲುಕಿರುವ ಜಗನ್ನಾಥ, ವೀಣಾರನ್ನು ಕನ್ನಡಪ್ರಭ ವರದಿಯಿಂದಾಗಿ ಕೇಂದ್ರ, ರಾಜ್ಯ ಸರ್ಕಾರಗಳು ವಾಪಾಸ್ಸು ಕರೆ ತರುವಂತಾಗಲಿ ಎಂದು ಸಮುದಾಯದವರು ಒತ್ತಾಯಿಸಿದ್ದಾರೆ.