ನಾಡಿನ ಕಲೆ, ಸಾಂಸ್ಕೃತಿಕ ಹಿನ್ನೆಲೆ, ಸಾಹಿತ್ಯವನ್ನು ಬಿಂಬಿಸುವ ಬೆಂಗಳೂರು ಜಾತ್ರೆ (ಹಬ್ಬ) ಇದೇ ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಿನ ಕಲೆ, ಸಾಂಸ್ಕೃತಿಕ ಹಿನ್ನೆಲೆ, ಸಾಹಿತ್ಯವನ್ನು ಬಿಂಬಿಸುವ ಬೆಂಗಳೂರು ಜಾತ್ರೆ (ಹಬ್ಬ) ಇದೇ ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ನಗರದ ಶನಿವಾರ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಗರಿಕರ ಜೀವನದ ಗುಣಮಟ್ಟ ಉತ್ತಮವಾಗಿರಬೇಕಾದರೆ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ನಮ್ಮ ಪರಂಪರೆ ಇತಿಹಾಸದ ಆಸ್ವಾದನೆ ಮುಖ್ಯ. ಸರ್ಕಾರ ಇದೇ ಮೊದಲ ಬಾರಿಗೆ ‘ಬೆಂಗಳೂರು ಜಾತ್ರೆ’ ನಡೆಸಲು ಮುಂದಾಗಿದೆ ಎಂದರು.

ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಜಿಬಿಎ ಮುಖ್ಯ ನೋಡಲ್ ಸಂಸ್ಥೆಯಾಗಿ ಕಾರ್ಯಾಚರಣೆ ನಡೆಸಲಿದೆ. ಇದರ ಜೊತೆಗೆ ಬಿಎಂಆರ್ ಸಿಎಲ್ (ಮೆಟ್ರೋ), ರಾಜ್ಯ ಪೊಲೀಸ್ (ಸಂಚಾರ ಹಾಗೂ ಭದ್ರತೆ), ಬಿಡಬ್ಲ್ಯೂಎಸ್ಎಸ್‌ಬಿ (ಜಲಮಂಡಳಿ), ಬಿಡಿಎ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಒಂದಾಗಿ ಕೈಜೋಡಿಸಿ ಕಾರ್ಯಕ್ರಮ ಸಂಘಟಿಸಲಿವೆ.

ರಂಗಶಂಕರ, ಜಾಗೃತಿ, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್, ಎಂಎಪಿ, ಐಎಂಇ ಸಭಾ, ಅಟ್ಟ ಗಲಾಟಾ ಸೇರಿದಂತೆ ಕಲೆ, ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರದ ಸಂಸ್ಥೆಗಳು ತಮ್ಮದೇ ಕಾರ್ಯಕ್ರಮಗಳನ್ನು ಜಾತ್ರೆಯ ಸಮಗ್ರ ಕ್ಯಾಲೆಂಡರ್‌ನ ಅಡಿ ನಡೆಸಬಹುದು ಎಂದರು.

ಬೇರೆ ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳನ್ನು ಆಹ್ವಾನಿಸಲು ಮನವಿ ಕಳುಹಿಸಲಾಗುವುದು. 10 ದಿನಗಳ ಕಾಲ ಒಟ್ಟು 300ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸುವ ಗುರಿ ಹೊಂದಲಾಗಿದೆ. ಇದರಲ್ಲಿ ಚಿತ್ರರಂಗದ ಪ್ರಮುಖರನ್ನೂ ಒಳಗೊಳ್ಳಲು ಯತ್ನಿಸಲಾಗುವುದು. ಸರ್ಕಾರದಿಂದ ಆಯೋಜಿಸುವ ಯಾವುದೇ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ.ಜಾಫರ್, ಜಲಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಉಪಸ್ಥಿತರಿದ್ದರು.

ವಿಶೇಷ ವೆಬ್‌ಸೈಟ್ ಹಾಗೂ ನೋಂದಣಿ ವ್ಯವಸ್ಥೆ

ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಪ್ರತ್ಯೇಕ ವೆಬ್ ಸೈಟ್ ಮೂಲಕ ಮುಂಚಿತವಾಗಿಯೇ ಪ್ರಕಟಿಸಲಾಗುವುದು. ಸಣ್ಣ ಕಾರ್ಯಕ್ರಮಗಳಿಗೆ ನೇರ ಪ್ರವೇಶವಿದ್ದು, ಬೃಹತ್ ಮಟ್ಟದ ಕಾರ್ಯಕ್ರಮಗಳಿಗೆ ಮಾತ್ರ ವೆಬ್ ಸೈಟ್ ನಲ್ಲಿ ಮುಂಗಡ ನೋಂದಣಿ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ 15 ರಿಂದ 20 ಕೋಟಿ ರು. ವ್ಯಯವಾಗುವ ನಿರೀಕ್ಷೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 5 ಕೋಟಿ ರು. ಜೊತೆಗೆ, 5 ನಗರ ಪಾಲಿಕೆಗಳು ತಲಾ 1 ಕೋಟಿ ರು. ನೀಡಲಿವೆ. ಉಳಿದ ಅನುದಾನವನ್ನು ಮೆಟ್ರೋ, ಬೆಸ್ಕಾಂ, ಜಲಮಂಡಳಿ ಹಾಗೂ ಬಿಡಿಎ ಸಂಸ್ಥೆಗಳು ನೀಡಲಿವೆ ಎಂದು ತಿಳಿಸಿದರು.