ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಬೆಂಗಳೂರಿನಲ್ಲಿ ಡಿ.28 ಹಾಗೂ 29ರಂದು ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ದೊಡ್ಡಬಳ್ಳಾಪುರದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಹೇಳಿದ್ದಾರೆ.ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಶೈಕ್ಷಣಿಕ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಶಿವಮೊಗ್ಗ, ತುಮಕೂರು, ಲಿಂಗಸಗೂರು ನಲ್ಲಿ ಯಶಸ್ವಿಯಾಗಿ ವಾರ್ಷಿಕ ಸಮ್ಮೇಳನಗಳನ್ನು ನಡೆಸಿದ್ದು ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನವನ್ನು ಐತಿಹಾಸಿಕವಾಗಿ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದರು.ನಾಡಿನ ಹೆಸರಾಂತ ರಂಗಭೂಮಿ ಕಲಾವಿದೆ, ನಟಿ ಉಮಾಶ್ರೀ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜನಪ್ರತಿನಿಧಿಗಳು ರಾಜ್ಯಮಟ್ಟದ ಅಧಿಕಾರಿಗಳು, ವಿಜ್ಞಾನಿಗಳು ಅನೇಕ ಚಿಂತಕರು ಭಾಗವಹಿಸಲಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುವ ಸಮ್ಮೇಳನಕ್ಕೆ ರಾಜ್ಯದ ಉದ್ದಗಲಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ 30 ಸಾವಿರಕ್ಕೂ ಅಧಿಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.
ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರಮೇಳ, ಕರಕುಶಲ ವಸ್ತು ಪ್ರದರ್ಶನ ಆಯೋಜಿಸಿದೆ. ಸಮ್ಮೇಳನದಲ್ಲಿ ‘ಬುದ್ಧನ ಬೆಳಕು’ ಹಾಗೂ ‘ಕೆಂಪೇಗೌಡ’ ನಾಟಕ ಪ್ರದರ್ಶನವಾಗಲಿವೆ. ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನು ಆಯೋಜಿಸಿದೆ. ನಾಲ್ಕು ವಿಚಾರಗೋಷ್ಠಿಗಳು ನಡೆಯಲಿವೆ. ವಿಶೇಷವಾಗಿ ಪರಿಷತ್ತಿನ ಮಹಾ ಅಧಿವೇಶನ ಆಯೋಜಿಸಿದೆ ಎಂದು ವಿವರಿಸಿದರು.ರಾಜ್ಯಮಟ್ಟದ ಜೀವಮಾನ ಸಾಧನ ಪ್ರಶಸ್ತಿ ಹಾಗೂ ಪ್ರತಿ ಶೈಕ್ಷಣಿಕ ಜಿಲ್ಲೆಗೆ ಒಬ್ಬರಂತೆ ಸುಮಾರು 37 ಸಾಧಕರಿಗೆ ಡಾ ಎಚ್ ನರಸಿಂಹಯ್ಯ ಪ್ರಶಸ್ತಿ , ಜೀವಮಾನ ಶ್ರೇಷ್ಠ ಸಾಧನ ಪ್ರಶಸ್ತಿಯನ್ನು 10 ಜನರಿಗೆ ನೀಡಲಾಗುತ್ತಿದ್ದು 10 ಸಾವಿರ ರು. ನಗದು, ತಾಮ್ರ ಫಲಕ ಗೌರವ ಸಮರ್ಪಣೆ ನೀಡಿ ಗೌರವಿಸಲಾಗುವುದು ಎಂದರು.
ಪ್ರಮುಖವಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಾಧಕರನ್ನು ಗುರುತಿಸಲಾಗಿದ್ದು ಜ್ಞಾನ ಪ್ರಕಾಶ ಸ್ವಾಮೀಜಿ ಮೈಸೂರು, ಬಿ ಆರ್ ಪಾಟೀಲ್, ಮೋಹನ್ ಆಳ್ವ, ಮಹಾಂತೇಶ್ ಗೌಡ ಪಾಟೀಲ್, ಲೀಲಾದೇವಿ ಆರ್ ಪ್ರಸಾದ್, ಶಿವ ಚಿತ್ತಪ್ಪ, ಡಾ. ಎಚ್. ಎಸ್. ಅನುಪಮಾ, ಕೆ ಶರೀಫ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಎಂ. ಎನ್. ಆಶಾದೇವಿ ಇವರಿಗೆ ನೀಡಲು ಪರಿಷತ್ತಿನ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯಿಸಲಾಗಿದೆ ಎಂದರು.ಊಟ, ವಸತಿ ವ್ಯವಸ್ಥೆ:
ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಮಹಿಳಾ ಕೇಂದ್ರಿತವಾಗಿ ವಿಭಿನ್ನವಾಗಿ ಆಯೋಜಿಸಲಾಗುತ್ತಿದ್ದು ಈ ಸಮ್ಮೇಳನಕ್ಕೆ ಹೊರ ಜಿಲ್ಲೆಯಿಂದ ಬರುವವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಿದ ಎಲ್ಲರಿಗೂ ಎರಡು ದಿನಗಳ ಕಾಲ ಊಟ ಉಪಹಾರದ ವ್ಯವಸ್ಥೆ ಮಾಡಲಾಗುವುದು ಎಂದರು.ಪರಿಷತ್ತಿನ ಪ್ರಮುಖರಾದ ಡಾ. ಆಂಜನಪ್ಪ,ವೈ.ಎನ್. ಶಂಕರೇಗೌಡ, ಡಾ.ಶ್ರೀರಾಮಚಂದ್ರಪ್ಪ, ಗೌರಿ ಪ್ರಸನ್ನ, ಸುಧಾಚಣ್ಣನವರ್, ಡಾ.ಉಶಾದೇವಿ, ಡಾ.ಚಿಕ್ಕಹನುಮಂತೇ ಗೌಡ, ಎಸ್. ವೈ. ಹೊಂಬಾಳ್, ವಿ.ಟಿ.ಸ್ವಾಮಿ, ಕೊಡಗು ಜಿಲ್ಲೆಯ ಅಧ್ಯಕ್ಷೆ ವನಿತಾ ಚಂದ್ರಮೋಹನ್ ಹಾಗೂ ಪಿ.ವಿ. ಸಿದ್ದಲಿಂಗಮ್ಮ, ಶರಣಬಸವ ಕಲ್ಲ, ಕೆ.ಎಸ್. ವಿಶ್ವನಾಥ್ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು ಇದ್ದರು.