ಸಾರಾಂಶ
ಬೆಂಗಳೂರು : ಪಂಚೆ ಧರಿಸಿ ಬಂದಿದ್ದ ರೈತರೊಬ್ಬರಿಗೆ ಮಾಗಡಿ ರಸ್ತೆಯ ‘ಜಿ.ಟಿ. ವರ್ಲ್ಡ್ ಮಾಲ್’ನಲ್ಲಿ ಸಿನಿಮಾ ನೋಡಲು ಬಿಡದೇ ಅಪಮಾನಿಸಿದ ಘಟನೆ ಬಗ್ಗೆ ವಿವಿಧ ಸಂಘಟನೆಗಳ ಪ್ರತಿಭಟನೆ ಸೇರಿದಂತೆ ವಿಧಾನಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಖಂಡಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಬೆನ್ನಲ್ಲೆ ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಕಾರಣ ನೀಡಿ ಮಾಲ್ ಸೀಜ್ ಮಾಡಿದೆ.
ಜೊತೆಗೆ ಮಾಲ್‌ಗೆ ನೀಡಿದ್ದ ಉದ್ಯಮ ಪರವಾನಗಿಯನ್ನು ರದ್ದು ಮಾಡಿದೆ.ಘಟನೆ ಸಂಬಂಧ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು, ಏಳು ದಿನಗಳ ಕಾಲ ಮಾಲ್ ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.
ಈ ಮಧ್ಯ ಬಿಬಿಎಂಪಿಯ ದಕ್ಷಿಣ ವಲಯದ ಅಧಿಕಾರಿಗಳು ಮಾಲ್‌ನ ಆಡಳಿತ ಮಂಡಳಿಗೆ ಘಟನೆ ಕಾರಣ ಕೇಳಿ ನೋಟಿಸ್ ನೀಡಿ 24 ಗಂಟೆಯಲ್ಲಿ ಉತ್ತರ ನೀಡಬೇಕೆಂದು ಸೂಚಿಸಿದ್ದಾರೆ.ಘಟನೆಗೆ ಪ್ರಾಯಶ್ಚಿತ್ತವಾಗಿ ಏಳು ದಿನಗಳ ಕಾಲ ಮಾಲ್ ಬಂದ್ ಮಾಡುವುದಾಗಿ ಮಾಲ್ ಆಡಳಿತ ಮಂಡಳಿ ಪ್ರಕಟಿಸಿದೆ. ಸಂಜೆ 6 ಗಂಟೆಯ ಸುಮಾರಿಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಬೀಗ್ ಹಾಕಿ ಸೀಜ್ ಮಾಡಿದರು. ಕಳೆದೊಂದು ವರ್ಷದಿಂದ ಸುಮಾರು ₹1.70 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ.
ಮುಂದುವರೆದ ರೈತರ ಪ್ರತಿಭಟನೆ: ಗುರುವಾರವೂ ರೈತ ಸಂಘಟನೆಗಳು ಮಾಲ್ ಬಳಿ ಪ್ರತಿಭಟನೆ ಮುಂದುವರೆಸಿ ಮಾಲ್ ಸಿಬ್ಬಂದಿ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾದರು. ಮಾಲ್ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಮಾಲ್ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.