ಸಾರಾಂಶ
ಮಯೂರ್ ಹೆಗಡೆ
ಬೆಂಗಳೂರು : ಹದಿನೈದು ದಿನಗಳ ಹಿಂದಿನ ಘಟನೆ, ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಕನ್ನಡಿಗರೇ ಹುಟ್ಟುಹಾಕಿದ ನಗರದ ಪ್ರತಿಷ್ಠಿತ ಐಟಿ ಕಂಪನಿಯೊಂದು ಪರರಾಜ್ಯದ ಹಬ್ಬವೊಂದನ್ನು ಭರ್ಜರಿಯಾಗಿ ಆಚರಿಸಿತು. ಇದನ್ನು ಕನ್ನಡ ಕಾರ್ಯಕರ್ತರು ವಿರೋಧಿಸಿದರು. ಇದು ಸಾಂಸ್ಕೃತಿಕ ಹೇರಿಕೆ, ಅಲ್ಲಿನವರನ್ನು ಓಲೈಸಿ ಸೆಳೆಯುವ ತಂತ್ರ ಎಂದು ಟೀಕಿಸಿದರು.
ಈ ಬಗ್ಗೆ ಕನ್ನಡ ಹೋರಾಟಗಾರರು ಧ್ವನಿಯೆತ್ತಿದರು. ಆದರೆ, ಕಂಪನಿ ಕ್ಯಾರೆ ಎನ್ನಲಿಲ್ಲ. ಈ ವಿಚಾರ ‘ಎಕ್ಸ್’ನಲ್ಲಿ ಒಂದಿಷ್ಟು ಸದ್ದು ಮಾಡಿ ಮರೆಯಾಯ್ತು.
ಇದು ಸಿಲಿಕಾನ್ ಸಿಟಿಯ ಮೇಲಾಗುತ್ತಿರುವ ಸಾಂಸ್ಕೃತಿಕ ದಾಳಿಯ ಒಂದು ಉದಾಹರಣೆಯಷ್ಟೆ.
ರಾಜಧಾನಿಗೆ ಉತ್ತರ ಭಾರತ ಸೇರಿ ಪರರಾಜ್ಯಗಳ ಸಂಸ್ಕೃತಿ ಏಕಮುಖವಾಗಿ ಹರಿದುಬರುತ್ತಿದೆ. ಐಟಿ ಕಲ್ಚರ್ ಬೇರು ಆಳಕ್ಕೆ ಇಳಿಯುತ್ತಿದೆ. ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಬದಲಾಗಿ ಅಲ್ಲಿನ ಆಚರಣೆಗಳ ಪ್ರಭಾವ ಕನ್ನಡಿಗರ ಮೇಲೆ ದಟ್ಟವಾಗುತ್ತಿದೆ. ಪರಿಣಾಮ, ನೆಲಮೂಲದ ಧಾರ್ಮಿಕ ಆಚರಣೆ, ಶ್ರಮ ಸಂಸ್ಕೃತಿ, ಆರ್ಥಿಕ ಸಂಸ್ಕೃತಿಯ ಮಾತ್ರವಲ್ಲದೆ ಆಹಾರ ಸಂಸ್ಕೃತಿಯ ಮೇಲೆಯೂ ಇದರ ಪ್ರಭಾವ ಹೆಚ್ಚಾಗಿರುವುದು ಆತಂಕದ ವಿಚಾರ ಎಂದು ನಗರದ ಸಾಂಸ್ಕೃತಿಕ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದ ಸೇರಿ ಉತ್ತರ ಭಾರತೀಯ ವ್ಯಾಪಾರಿ ಸಮುದಾಯಗಳು ನಗರದಲ್ಲಿ ತಳವೂರಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸುತ್ತಿವೆ. ಇದು ತಳಮಟ್ಟದಲ್ಲಿ ಅಪಾಯಕಾರಿ ಎನ್ನುವಷ್ಟರ ಮಟ್ಟಿಗೆ ಸಾಂಸ್ಕೃತಿಕ ಬದಲಾಣೆಗೆ ದಾರಿ ಮಾಡಿಕೊಟ್ಟಿದೆ. ಐಟಿ ಕ್ಷೇತ್ರದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇಲ್ಲದಿದ್ದರೂ ಉತ್ತರದವರ ಎದುರು ನಮ್ಮ ಸಂಸ್ಕೃತಿ ಕಾಪಾಡಿಕೊಳ್ಳುವ ಪ್ರಯತ್ನ ಆಗುತ್ತಿಲ್ಲ. ಕಲ್ಚರಲ್ ಡೇ ಎಂದು ಒಂದು ದಿನ ಪಂಚೆ ಸುತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಸೀಮಿತವಾಗುತ್ತಿದೆ. ದಕ್ಷಿಣದ ಇತರೆ ರಾಜ್ಯಗಳ ಪ್ರಭಾವವೂ ನಮ್ಮ ಮೇಲೆ ಮುಂದುವರಿದಿದೆ.
ಹೀಗೆ ಆದಲ್ಲಿ ರಾಜಧಾನಿ ಉದ್ಯಮದ ಜೊತೆಗೆ ಆಚರಣೆಗಳೂ ಮೊನೊಪೊಲಿಯಾಗುವ ದಿನ ದೂರವಿಲ್ಲ. ಎಚ್ಚೆತ್ತುಕೊಳ್ಳದಿದ್ದರೆ ಇದು ನಮ್ಮನ್ನು ಸಂಪೂರ್ಣವಾಗಿ ಆವರಿಸಲಿದೆ. ನಮ್ಮ ಕನ್ನಡ ರಾಜ್ಯೋತ್ಸವದಂತಹ ಆಚರಣೆ, ಕರಗ, ಕಡಲೆಕಾಯಿ ಪರಿಷೆಯಂತಹ ಆಚರಣೆಯಲ್ಲಿ ಅವರ ಸಹಭಾಗಿತ್ವ, ಆಚರಣೆಯಲ್ಲಿ ಒಂದಾಗುವಿಕೆ ಇದೆಯೇ, ಅಥವಾ ಹಿಂದಿ ದಿವಸ್, ಶ್ರಮದಾನ ಕಾರ್ಯಕ್ರಮಕ್ಕೆ ಸ್ವಚ್ಛತಾ ಪಕ್ವಾಡಾ ಎಂದು ಕರೆಯುವಿಕೆ ಯಾಕೆ ಎಂದು ಕನ್ನಡಪರ ಹೋರಾಟಗಾರರು ಪ್ರಶ್ನಿಸುತ್ತಾರೆ.
ಸ್ಥಳೀಯ ಸಂಸ್ಕೃತಿ ನಾಶ: ಕನ್ನಡ ಪರ ಚಿಂತಕ ರಾ.ನಂ.ಚಂದ್ರಶೇಖರ್ ಮಾತನಾಡಿ, ‘ನಗರದಲ್ಲಿ ದೀಪಾವಳಿ ಬಹು ಹಿಂದೆಯೇ ದಿವಾಲಿ ಆಗಿದೆ. ಈಚೆಗೆ ಭೀಮನ ಅಮಾವಸ್ಯೆ ದಿನ ಗಂಡನ ಪೂಜೆ ಹೋಗಿ ಕರ್ವಾಚೌತ್ ಆಚರಿಸುವುದನ್ನು ಕಾಣುತ್ತಿದ್ದೇವೆ. ನಮ್ಮ ಕಾಮನ ಹುಣ್ಣಿಮೆಯ ಜಾನಪದ ಆಚರಣೆ ಮರೆಯಾಗಿ ಗುಲಾಲ್ ಎರಚಿಕೊಳ್ಳುವುದಕ್ಕೆ ಸೀಮಿತವಾಗುತ್ತಿದೆ. ಸಂಕ್ರಾಂತಿ ಜಾಗವನ್ನು ಪೊಂಗಲ್ ಆವರಿಸುತ್ತಿದೆ. ಉತ್ತರ ಭಾರತೀಯರಿಂದ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಆಗದೆ, ಕೇವಲ ನಮ್ಮವರು ತೆಗೆದುಕೊಳ್ಳುವುದೇ ಆಗಿದೆ. ವಾಸ್ತವವಾಗಿ ಸ್ಥಳೀಯ ಸಂಸ್ಕೃತಿ ನಾಶವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾತ್ರಿ ತಿರುಗಿದರೆ ನಮ್ಮ ಆಹಾರ ಸಂಸ್ಕೃತಿ ನಾಶವಾಗಿರುವುದು ಕಾಣುತ್ತಿದೆ. ಹೋಟೆಲ್‌ಗಳಲ್ಲಿ ನಮ್ಮ ಊಟಗಳ ಬದಲು ನಾರ್ಥ್ ಇಂಡಿಯನ್ ಥಾಲಿಗಳು ಹೆಚ್ಚಾಗಿವೆ. ಗುಜರಾತಿ, ಪಂಜಾಬಿ ಶೈಲಿಯ ಊಟ ಹೆಚ್ಚಾಗಿದೆ. ನಮ್ಮವರೂ ಅವುಗಳನ್ನೇ ಕೊಳ್ಳುತ್ತಿದ್ದಾರೆ. ರಾಗಿ ರೊಟ್ಟಿ, ಮುದ್ದೆ ಬದಲು ರೋಟಿ, ನಾನ್ ಹೆಚ್ಚಾಗಿದೆ. ತೈರ್ವಡೆ ಶಬ್ದವೇ ಹೋಗಿ ದಹಿವಡಾ ಶಬ್ದ ಕೇಳುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಸರಳ ಸಂಸ್ಕೃತಿಗೆ ಹೊಡೆತ: ಸಾಹಿತಿ, ಡಾ। ವಸುಂಧರಾ ಭೂಪತಿ, ‘ದ್ರಾವಿಡ ಶೈಲಿಯ ಹಬ್ಬದ ಆಚರಣೆಗೂ ಉತ್ತರ ಭಾರತೀಯ ಆಚರಣೆಗೂ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮಲ್ಲಿ ಸಂಗೀತಕ್ಕೊಂದು ದಿನ, ಮೆಹೆಂದಿಗೊಂದು ದಿನವೆಂದು ನಾಲ್ಕೈದು ಶ್ರೀಮಂತಿಕೆ ತೋರ್ಪಡಿಸುವ ಮದುವೆ ಸಂಸ್ಕೃತಿ ಇರಲಿಲ್ಲ. ಆದರೆ, ಉತ್ತರ ಭಾರತೀಯರು ಇಲ್ಲಿ ಬೀಡು ಬಿಟ್ಟಿರುವ ಕಾರಣ, ಕೆಲ ವರ್ಷಗಳಿಂದ ಬೆಂಗಳೂರಿನ ಶ್ರೀಮಂತರೂ ಇಂತಹ ಮದುವೆಗಾಗಿ ಕೋಟ್ಯಂತರ ರುಪಾಯಿ ಸುರಿಯುತ್ತಿದ್ದಾರೆ. ಪರಿಣಾಮ ಬಡ, ಮಧ್ಯಮ ವರ್ಗದವರು ತಾವೂ ಸಾಲ ಮಾಡಿ ಅನುಸರಿಸುತ್ತಿದ್ದಾರೆ. ಸಾಂಸ್ಕೃತಿಕ ಪ್ರಭಾವದಿಂದ ನಮ್ಮ ಸರಳ ಆಚರಣೆ ಮರೆಯಾಗುತ್ತಿರುವುದು ಇಲ್ಲಿ ಕಾಣುತ್ತಿದ್ದೇವೆ’ ಎಂದರು.
ಕೆಲವೇ ದಿನಗಳ ಹಿಂದೆ ನಗರದೆಲ್ಲೆಡೆ ನವರಾತ್ರಿಯ ದಾಂಡಿಯಾ, ಗರ್ಭಾ ನೃತ್ಯದ ಅಬ್ಬರ ನೋಡಿದ್ದೇವೆ. ಅದರಲ್ಲಿ ಕನ್ನಡಿಗರು ಹೆಚ್ಚಾಗಿ ಪಾಲ್ಗೊಂಡಿದ್ದನ್ನು ನೋಡಿದ್ದೇವೆ. ಸಂಸ್ಕೃತಿ ವಿನಿಮಯ ಆಗಬೇಕು. ನಮ್ಮ ಹಬ್ಬ, ಆಚರಣೆಗೆ ಅವರೆಷ್ಟು ಮಹತ್ವ ಕೊಟ್ಟು ಪಾಲ್ಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇನ್ನು, ಐಟಿ ಕಲ್ಚರ್‌ನಂತೆ ವಾರಕ್ಕೆ ನಾಲ್ಕೈದು ದಿನ ಮಾತ್ರ ಕೆಲಸದ, ವಾರಾಂತ್ಯದ ಮೋಜು, ತಿರುಗಾಟ ನಮ್ಮ ಶ್ರಮ ಸಂಸ್ಕೃತಿಯನ್ನು ಅಣಕಿಸುತ್ತಿವೆ. ನಗರದಲ್ಲಿ ಸಾಧಾರಣ ಉದ್ಯೋಗಸ್ಥರು, ನೌಕರರ ಮೇಲೆ ಇದರ ಪ್ರಭಾವ ಕಾಣುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿ ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ಬೆಂಗಳೂರಿನ ಸಂಸ್ಕೃತಿಗೂ ಧಕ್ಕೆ ಬಂದಾಗಿದೆ. ಸರ್ಕಾರ ಬೆಂಗಳೂರನ್ನು ಬೆರಕೆ ಎಂಬರ್ಥದಲ್ಲಿ ಕಾಸ್ಮೋಪಾಲಿಟಿನ್ ಸಿಟಿ ಎಂದು ಕರೆದು ಹೆಮ್ಮೆಯಿಂದ ಜಾಹೀರಾತು ನೀಡುವುದೆ ದೊಡ್ಡ ದುರಂತ.
-ರಾ.ನಂ.ಚಂದ್ರಶೇಖರ್, ಕನ್ನಡಪರ ಚಿಂತಕ
ಹಿಂದಿವಾಲಾಗಳ ಸಂಸ್ಕೃತಿ ನಮ್ಮ ಆಚರಣೆಗಳನ್ನು ನುಂಗುತ್ತಿದೆ. ವಲಸಿಗರ ಧೋರಣೆ ವಿರುದ್ಧ ಅಸ್ಸಾಂನಲ್ಲಿ ವಿದ್ಯಾರ್ಥಿ ಪರಿಷತ್, ಮಹಾರಾಷ್ಟ್ರದ ಬಾಳಾ ಠಾಕ್ರೆ ಮಾದರಿಯ ಹೋರಾಟಗಳು ಕರ್ನಾಟಕದಲ್ಲಿ ನಡೆಯುವುದು ಅನಿವಾರ್ಯ. ಶೀಘ್ರವೇ ಇಂಥದ್ದನ್ನು ನಾವು ಕಾಣಲಿದ್ದೇವೆ.
-ವ.ಚ.ಚನ್ನೇಗೌಡ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ.
ಸಾಂಸ್ಕೃತಿಕ ವಿನಿಮಯ ಜೀವಂತ ನಾಗರಿಕತೆಯ ಲಕ್ಷಣ. ಆದರೆ, ನಮ್ಮ ನೆಲಮೂಲದ ಬೇರುಗಳು ಅಲುಗಾಡುತ್ತಿವೆ. ರಾಜ್ಯೋತ್ಸವದ ಆಚರಣೆಗೆ ಹೊಸ ಪೀಳಿಗೆ ಎಷ್ಟು ಸ್ಪಂದಿಸುತ್ತಿದೆ? ನಮ್ಮದಲ್ಲದ ನುಡಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದೇಕೆ? ಎಚ್ಚೆತ್ತುಕೊಳ್ಳಬೇಕು.
-ಡಾ। ದೊಡ್ಡರಂಗೇಗೌಡ, ಹಿರಿಯ ಸಾಹಿತಿ.
ಉತ್ತರ ಭಾರತೀಯ, ಐಟಿ ಸಂಸ್ಕೃತಿಗಳು ನಮ್ಮ ಹಬ್ಬದಾಚರಣೆ ಜೊತೆಗೆ ಆಹಾರ, ಆರ್ಥಿಕ, ಶ್ರಮ ಸಂಸ್ಕೃತಿಯನ್ನು ಅಳಿವಿನತ್ತ ಕೊಂಡೊಯ್ಯುತ್ತಿವೆ. ಅಪರೂಪಕ್ಕೆ ಅವರ ಆಚರಣೆಯ ಭಾಗವಾಗುವುದು ಬೇರೆ, ಅದನ್ನೇ ಜೀವನಶೈಲಿ ಆಗಿಸಿಕೊಳ್ಳುವುದು ಅಪಾಯ.
-ಡಾ। ವಸುಂಧರಾ ಭೂಪತಿ, ಸಾಹಿತಿ.