ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ ವೀರ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ ವೀರ. ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದು ದೂರದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ನಗರ ನಿರ್ಮಾಣಕ್ಕೆ ದೂರದೃಷ್ಟಿವುಳ್ಳ ನೀಲಿ ನಕ್ಷೆ ತಯಾರಿಸಿ ವ್ಯವಸ್ಥಿತವಾದ, ಶಾಶ್ವತವಾದ ನಗರ ನಿರ್ಮಾಣ ಮಾಡಿದ್ದಾರೆ. ಕೆರೆ ಕಟ್ಟೆಗಳು, ಮರಗಳನ್ನು ನೆಡುವ ಮೂಲಕ, ಕ್ರೂರ ಪದ್ದತಿ ನಿಷೇಧ, ಜಲಮೂಲಗಳ ರಕ್ಷಣೆ, ಪ್ರಕೃತಿ ರಕ್ಷಣೆ, ವೃತ್ತಿಪರರಿಗೆ ಪೇಟೆಗಳ ನಿರ್ಮಾಣ ಹಾಗೂ ಬಡ, ಮಧ್ಯಮ ವರ್ಗ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯ ಮಾಡಿ ಅಮರರಾಗಿದ್ದು ನಮ್ಮೆಲ್ಲರಿಗೆ ಇವರ ಬಗ್ಗೆ ಅಭಿಮಾನ ಇದೆ. ಕೇವಲ 2 ಚದರ ಕಿ.ಮೀ ಇದ್ದ ಬೆಂಗಳೂರು ಇಂದು 800 ಚ.ಕಿ.ಮೀ ಗಿಂತಲೂ ಹೆಚ್ಚು ಬೆಳೆದಿರುವುದಕ್ಕೆ ಅವರು ಹಾಕಿದ ಬುನಾದಿಯೇ ಕಾರಣವಾಗಿದೆ ಎಂದರು.
ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಶ್ರೀಪತಿ ಹಳಗುಂದ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಎಲ್ಲರನ್ನು ನೆಲೆ ನಿಲ್ಲಿಸಿದವರು ನಾಡಪ್ರಭು ಕೆಂಪೇಗೌಡರು. ಅತ್ಯಂತ ದೂರದೃಷ್ಟಿವುಳ್ಳ ಮತ್ತು ಸರ್ವ ಜನಾಂಗಕ್ಕೂ ಒಳಿತಾಗುವ ಆಲೋಚನೆವುಳ್ಳ ವ್ಯಕ್ತಿತ್ವ ಅವರದು. ವೃತ್ತಿ ಆಧಾರಿತ ಪೇಟೆಗಳನ್ನು ನಿರ್ಮಿಸಿದ ನಿಜವಾದ ಜಾತ್ಯಾತೀತ ನಾಯಕ ಎಂದರು.ವಿಜಯನಗರದ ವೈಭವ ನೋಡಿ ಅದೇ ರೀತಿ ಕಟ್ಟಬೇಕು ಎಂದು ಯಲಹಂಕವನ್ನು ಕಟ್ಟಿದರು. ವ್ಯಾಪಾರ ಮತ್ತು ವಾಣಿಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ವಿವಿಧ ವೃತ್ತಿಪರರಿಗಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು. ಅಕ್ಕಿಪೇಟೆ, ರಾಗಿಪೇಟೆ, ಬಳೇಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಮುಂತಾದವು ಇಂದಿಗೂ ಬೆಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿವೆ. ಜೀವಪರವಾದ ಆಡಳಿತ ನಡಿಸಿದ ಅವರು ಆರ್ಕಾವತಿ, ವೃಷಭಾವತಿ ನದಿಗೆ ಅನೇಕ ಕೆರೆಯನ್ನು ಕಟ್ಟಿದ್ದಾರೆ. 500 ವರ್ಷದ ಹಿಂದೆಯೇ ಇಡೀ ಸಮಾಜದ ಅಭಿವೃದ್ದಿ ಆಲೋಚನೆ ಇತ್ತು ಅವರಿಗೆ ಒಕ್ಕಲಿಗ ಸಮುದಾಯಕ್ಕೂ ಮತ್ತು ನೆಲಕ್ಕೂ ಅವಿನಾಭಾವ ಸಂಬಂಧ ಇದ್ದು ಯಾರು ನೆಲೆದ ಮೇಲೆ ಅದಮ್ಯ ಪ್ರೀತಿ ಇಟ್ಟುಕೊಳ್ಳುತ್ತಾರೋ ಅವರಿಗೆ ಸಾವಿಲ್ಲ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕೆಂಪೇಗೌಡರು ಕಟ್ಟುವ ಕೆಲಸ ಮಾಡಿರುವ ಕಾರಣ ಶಾಶ್ವತ ನಾಯಕರಾಗಿ ಉಳಿದಿದ್ದಾರೆ. ಮುಂದಿನ ಪೀಳಿಗೆಗೆ, ಇಡೀ ಸಮಾಜಕ್ಕೆ ಅವಶ್ಯಕತೆ ಇರುವಂತಹ ಕೆಲಸಗಳನ್ನೇ ಮಾಡಿದ್ದಾರೆ. ಇವರ ಸ್ಮರಣಾರ್ಥ ಶಿವಮೊಗ್ಗದಲ್ಲಿ ಕೆರೆ, ಕಟ್ಟೆಗಳನ್ನು ಉಳಿಸುವ ಪ್ರಯತ್ನ ಮಾಡಿದರೆ ಕೆಂಪೇಗೌಡರಿಗೆ ಗೌರವ ತಂದಂತೆ ಆಗುತ್ತದೆ ಎಂದರು.ಶ್ರೀ ಕೆಂಪೇಗೌಡ ಜಯಂತಿಯ ಅಂಗವಾಗಿ ಏರ್ಪಡಿಸಲಾಗಿದ್ದ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಜವಳಿ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕೆ.ಚೇತನ್ ಮಾತನಾಡಿದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ, ತಾಲೂಕು ಅಧ್ಯಕ್ಷ ಎಸ್. ಚಂದ್ರಕಾಂತ್, ರಾಜ್ಯ ಸಂಘದ ನಿರ್ದೇಶಕ ಧರ್ಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ , ಅಧಿಕಾರಿಗಳು ಹಾಜರಿದ್ದರು.